
ಕೋಲಾರ, ಜುಲೈ ೧೩ (ಹಿ.ಸ.):
ಆ್ಯಂಕರ್ : ಮಾವು ಬೆಳೆಗಾರರ ಹಿತದೃಷ್ಟಿಯಿಂದ ಪ್ರಸ್ತುತ ನಿಗದಿಪಡಿಸಿರುವ ೧ ಲಕ್ಷದ ೩೦ ಸಾವಿರ ಮೆಟ್ರಿಕ್ ಟನ್ ಮಾವು ಖರೀದಿ ಮಿತಿಯನ್ನು ಹೆಚ್ಚಿಸುವಂತೆ ಹಾಗೂ ಸ್ಥಗಿತಗೊಂಡಿರುವ ರೈತರ ನೋಂದಣಿ ಪ್ರಕ್ರಿಯೆಯನ್ನು ಮರುಪ್ರಾರಂಭಿಸುವAತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಬಗ್ಗೆ ಇಂದು ಸಕಾರಾತ್ಮಕ ಆದೇಶ ಹೊರಬೀಳುವ ನಿರೀಕ್ಷೆಯಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಶ್ರೀನಿವಾಸಪುರ ಮತ್ತು ಮುಳಬಾಗಿಲು ಭಾಗದ ಮಾವು ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿಗೆ ಆಗಮಿಸುತ್ತಿದ್ದಾರೆ. ಆದರೆ ಸಾಫ್ಟ್ವೇರ್ನಲ್ಲಿ ನೋಂದಣಿ ಪ್ರಕ್ರಿಯೆ ಸ್ಥಗಿತಗೊಂಡಿರುವ ಕಾರಣ, ರೈತರಿಗೆ ಅನುಕೂಲವಾಗಲು ಹಾಗೂ ನೋಂದಣಿಯಲ್ಲಿ ಜೇಷ್ಠತೆಯನ್ನು (ಸೀನಿಯಾರಿಟಿ) ಕಾಯ್ದುಕೊಳ್ಳಲು 'ಟೋಕನ್ ವ್ಯವಸ್ಥೆ' ಜಾರಿಗೆ ತರಲಾಗಿದೆ. ಇದುವರೆಗೆ ಸುಮಾರು ೬,೦೦೦ಕ್ಕೂ ಹೆಚ್ಚು ರೈತರಿಗೆ ಟೋಕನ್ ನೀಡಲಾಗಿದೆ. ಟೋಕನ್ ಪಡೆದಿರುವ ರೈತರಿಗೆ ೧.೩೦ ಲಕ್ಷ ಮೆಟ್ರಿಕ್ ಟನ್ ಗುರಿ ತಲುಪುವವರೆಗಾದರೂ ನೋಂದಣಿಗೆ ಅವಕಾಶ ಮಾಡಿಕೊಡುವಂತೆ ಸರ್ಕಾರದ ಮಟ್ಟದಲ್ಲಿ ಮನವರಿಕೆ ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ಖರೀದಿ ಪ್ರಕ್ರಿಯೆಯ ತಾಂತ್ರಿಕ ಸಮಸ್ಯೆಗಳು ಹಾಗೂ ವಾಸ್ತವ ಸ್ಥಿತಿಯನ್ನು ವಿವರಿಸಿದ ಜಿಲ್ಲಾಧಿಕಾರಿಗಳು, ವಾಸ್ತವದಲ್ಲಿ ಈವರೆಗೆ ಕೇವಲ ೮೦ ರಿಂದ ೮೫ ಸಾವಿರ ಮೆಟ್ರಿಕ್ ಟನ್ ಮಾವು ಮಾತ್ರ ಖರೀದಿಯಾಗಿದೆ. ಆದರೆ, ಸಾಫ್ಟ್ವೇರ್ನಲ್ಲಿ ರೈತರ ಜಮೀನಿನ ವಿಸ್ತೀರ್ಣಕ್ಕೆ ಅನುಗುಣವಾಗಿ ಗರಿಷ್ಠ ಇಳುವರಿಯನ್ನು ಲೆಕ್ಕಹಾಕಲಾಗುತ್ತಿದೆ. ಇದರಿಂದಾಗಿ ರೈತರು ವಾಸ್ತವದಲ್ಲಿ ಅಷ್ಟು ಬೆಳೆ ತರದೇ ಇದ್ದರೂ, ನಿಗದಿತ ಮಿತಿ ಬೇಗ ಮುಗಿದಂತೆ ಪೋರ್ಟಲ್ನಲ್ಲಿ ಭಾಸವಾಗುತ್ತಿದೆ. ಅಲ್ಲದೆ, ಬಿಲ್ ಮಾಡುವಾಗ ಬೆಳೆ ವಿಮೆಯ ಅರ್ಹತೆಗೂ ಮತ್ತು ಪೋರ್ಟಲ್ ಅಂಕಿ-ಅAಶಗಳಿಗೂ ವ್ಯತ್ಯಾಸವಾಗುತ್ತಿರುವುದು ಈ ಗೊಂದಲಕ್ಕೆ ಪ್ರಮುಖ ಕಾರಣವಾಗಿದೆ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ, ಆಷಾಢ ಮಾಸದ ಬಿರುಗಾಳಿಗೆ ಅಪಾರ ಪ್ರಮಾಣದ ಮಾವು ಉದುರಿ ರೈತರಿಗೆ ನಷ್ಟವಾಗುತ್ತಿರುವುದನ್ನೂ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದ ಅವರು, ರೈತರಿಗೆ ಒಂದು ಪ್ರಮುಖ ಸೂಚನೆ ನೀಡಿದರು. ರೈತರು ಕಡ್ಡಾಯವಾಗಿ ನೋಂದಣಿ ಮಾಡಿಕೊಂಡ ನಂತರವೇ ತಮ್ಮ ಬೆಳೆಯನ್ನು ಮಂಡಿಗೆ ತರಬೇಕು, ನೋಂದಣಿ ಇಲ್ಲದೆ ಮಾವು ತರಲು ಅವಕಾಶವಿರುವುದಿಲ್ಲ. ಪ್ರಸ್ತುತ ತೋತಾಪುರಿ ಮಾವು ಇನ್ನೂ ಕೊಯ್ಲು ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಯುವ ಭರವಸೆ ಇದೆ ಎಂದು ಅವರು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್