
ಬಳ್ಳಾರಿ, 13 ಜುಲೈ (ಹಿ.ಸ.):
ಆ್ಯಂಕರ್ : ಎಸ್ಐಆರ್ ಗಣತಿ ನಮೂನೆಗಳನ್ನು ಭರ್ತಿ ಮಾಡುವ ಕುರಿತು ಮಾಹಿತಿ ಇರುವವರು ತಮ್ಮ ಸಂಬಂಧಿಕರಿಗೆ, ನೆರೆಹೊರೆಯವರಿಗೆ ಹಾಗೂ ತಮಗೆ ಪರಿಚಿತವಿರುವ ಕಾರ್ಮಿಕರು ಅಥವಾ ಸಾರ್ವಜನಿಕರಲ್ಲಿ ಅರಿವಿನ ಕೊರತೆಯಿದ್ದರೆ, ಗೊಂದಲಗಳಿದ್ದರೆ ಅವರಿಗೆ ಅಗತ್ಯ ಮಾಹಿತಿ ನೀಡಿ ಸಹಕರಿಸಬೇಕು ಎಂದು ಜಿಲ್ಲಾ ಮಾಸ್ಟರ್ ತರಬೇತುದಾರ ಶಿವಲಿಂಗ ರೆಡ್ಡಿ ಅವರು ಹೇಳಿದ್ದಾರೆ.
ನಗರದ ಜಿಪಂ ನ ಹೊಸ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಬಳ್ಳಾರಿ, ವಿಜಯನಗರ ಜಿಲ್ಲೆಗಳ ಅಬಕಾರಿ ಇಲಾಖೆಯ ಅಧಿಕಾರಿ- ಸಿಬ್ಬಂದಿ ಮತ್ತು ಬಳ್ಳಾರಿ, ವಿಜಯನಗರ ಜಿಲ್ಲೆಗಳ ಬಿಡ್ದಾರರು, ಸಾರ್ವಜನಿಕರಿಗೆ ಸೋಮವಾರ ಹಮ್ಮಿಕೊಂಡಿದ್ದ ಎಸ್ಐಆರ್ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಸ್ಐಆರ್ ನ ಮುಖ್ಯ ಉದ್ದೇಶವು ಪ್ರಸ್ತುತ ಚಾಲ್ತಿಯಲ್ಲಿರುವ ಮತದಾರರ ಪಟ್ಟಿಯನ್ನು ಆಧರಿಸಿ ಹೊಸದಾಗಿ ಮತ್ತು ಅತ್ಯಂತ ನಿಖರವಾಗಿ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದಾಗಿದೆ. ಈ ಹೊಸ ಮತದಾರರ ಪಟ್ಟಿ ತಯಾರಿಕೆಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕಾಗಿದೆ ಎಂದು ಅವರು ತಿಳಿಸಿದರು.
ಎಸ್ಐಆರ್ ಪ್ರಕ್ರಿಯೆಯ ಸಂದರ್ಭದಲ್ಲಿ ಉತ್ತರ ಪ್ರದೇಶದಂತಹ ದೊಡ್ಡ ರಾಜ್ಯದಲ್ಲಿ ಪರಿಷ್ಕರಣೆ ನಡೆಸಿದಾಗ, ಅಂದಾಜು 2.43 ಕೋಟಿ ಮತದಾರರು ಮತ್ತು ಪಶ್ಚಿಮ ಬಂಗಾಳದಲ್ಲಿ ಸುಮಾರು 86.56 ಲಕ್ಷ ಮತದಾರರು ವಿವಿಧ ತಾಂತ್ರಿಕ ಕಾರಣಗಳಿಂದಾಗಿ ಮತದಾರರ ಪಟ್ಟಿಯಿಂದ ಹೊರಗುಳಿದಿರುವುದು ಕಂಡುಬಂದಿದೆ ಎಂದು ವಿವರಿಸಿದರು.
ಸಾಮಾನ್ಯವಾಗಿ ಸಾರ್ವಜನಿಕರಲ್ಲಿ ‘ನಾನು ಈಗಾಗಲೇ ಹಲವು ಬಾರಿ ವೋಟ್ ಮಾಡಿದ್ದೇನೆ, ನನ್ನ ಹೆಸರು ಪಟ್ಟಿಯಲ್ಲೇ ಇರುತ್ತದೆ, ನಾನೇಕೆ ತಲೆಕೆಡಿಸಿಕೊಳ್ಳಬೇಕು’ ಎಂಬ ಭಾವನೆ ಇರುತ್ತದೆ. ಆದರೆ ಇದು ಹೊಸ ಮತದಾರರ ಪಟ್ಟಿಯಾಗಿರುವುದರಿಂದ, 2025 ರ ಮತದಾರರ ಪಟ್ಟಿಯನ್ನು ಆಧಾರವಾಗಿಟ್ಟುಕೊಂಡು ಅದರಲ್ಲಿ ಹೆಸರಿರುವ ಪ್ರತಿಯೊಬ್ಬರಿಗೂ ಪೂರ್ವ ಮುದ್ರಿತ ಎಸ್ಐಆರ್ ಗಣತಿ ನಮೂನೆಯನ್ನು ನೀಡಲಾಗುತ್ತದೆ ಎಂದರು.
ಮತದಾರರ ಹೆಸರು, ಭಾವಚಿತ್ರ, ಕ್ರಮ ಸಂಖ್ಯೆ ಹಾಗೂ ಅವರು ಮತದಾನ ಮಾಡಬೇಕಾದ ಬೂತ್ ಮತ್ತು ವಿಧಾನಸಭಾ ಕ್ಷೇತ್ರದ ವಿವರಗಳು ಅಡಕವಾಗಿರುತ್ತವೆ. ಒಂದು ಮನೆಯಲ್ಲಿ ನಾಲ್ಕು ಜನ ಮತದಾರರಿದ್ದರೆ ನಾಲ್ಕಕ್ಕೂ ಪ್ರತ್ಯೇಕ ಫಾರ್ಮ್ಗಳನ್ನು ದ್ವಿಪ್ರತಿಯಲ್ಲಿ) ನೀಡಲಾಗುತ್ತದೆ.
ಹಳೆಯ ಮತದಾರರ ಗುರುತಿನ ಚೀಟಿಗಳಲ್ಲಿ ಭಾವಚಿತ್ರಗಳು ಅಸ್ಪಷ್ಟವಾಗಿದ್ದರೆ ಅಥವಾ ಗುರುತು ಸಿಗದಂತಾಗಿದ್ದರೆ, ಈ ಬಾರಿ ಇತ್ತೀಚಿನ ಹೊಸ ಭಾವಚಿತ್ರವನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ. ವೈಟ್ ಬ್ಯಾಕ್ಗ್ರೌಂಡ್ ಇರುವ ಇತ್ತೀಚಿನ ಪೋಟೋವನ್ನು ಬೂತ್ ಮಟ್ಟದ ಅಧಿಕಾರಿಗಳಿಗೆ ನೀಡಿದರೆ, ಅದನ್ನು ಸ್ಕ್ಯಾನ್ ಮಾಡಿ ಹೊಸ ಪಟ್ಟಿಯಲ್ಲಿ ಅಪ್ಡೇಟ್ ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ನಮೂನೆಗಳನ್ನು ಜೂನ್ 30 ರಿಂದ ವಿತರಿಸಲಾಗುತ್ತಿದ್ದು, ಇದೇ ತಿಂಗಳ 29 ರೊಳಗೆ ಭರ್ತಿ ಮಾಡಿ ಸಲ್ಲಿಸಬೇಕಾಗಿದೆ. ನಿಗದಿತ ಸಮಯದೊಳಗೆ ಯಾರು ಈ ಫಾರ್ಮ್ ಭರ್ತಿ ಮಾಡಿ ಸಹಿ ನೀಡುವುದಿಲ್ಲವೋ, ಅವರ ಹೆಸರು ಮುಂದಿನ ಮತದಾರರ ಪಟ್ಟಿಯಿಂದ ಕೈಬಿಟ್ಟು ಹೋಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಪ್ರತಿಯೊಬ್ಬ ನಾಗರಿಕರು ದೇಶದ ಸಶಕ್ತ ಪ್ರಜಾಪ್ರಭುತ್ವ ನಿರ್ಮಾಣಕ್ಕಾಗಿ ಈ ಪರಿಷ್ಕರಣೆ ಕಾರ್ಯದಲ್ಲಿ ಭಾಗಿಯಾಗಿ, ಯಶಸ್ವಿಗೊಳಿಸಬೇಕು ಎಂದು ಅವರು ವಿನಂತಿಸಿದರು.
ಈ ಸಂದರ್ಭದಲ್ಲಿ ಜಿಪಂ ನ ವಿಜಯ್ ಕುಮಾರ್ ಸೇರಿದಂತೆ ಬಳ್ಳಾರಿ, ವಿಜಯನಗರ ಜಿಲ್ಲೆಗಳ ಅಬಕಾರಿ ಇಲಾಖೆಯ ಅಧಿಕಾರಿ- ಸಿಬ್ಬಂದಿ ಮತ್ತು ಬಳ್ಳಾರಿ, ವಿಜಯನಗರ ಜಿಲ್ಲೆಗಳ ಬಿಡ್ದಾರರು, ಸಾರ್ವಜನಿಕರು ಇದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್