
ಕೋಲಾರ,ಜು.೧೩ (ಹಿ.ಸ):
ಆ್ಯಂಕರ್ : ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕ ಕೊತ್ತೂರು ಮಂಜುನಾಥ್ ಅವರು ಸೋಮವಾರ ತಮ್ಮ ಕಚೇರಿಯಲ್ಲಿ ಸಾರ್ವಜನಿಕರಿಂದ ಕುಂದುಕೊರತೆಗಳನ್ನು ಆಲಿಸಿ ವಿವಿಧ ಸಮಸ್ಯೆಗಳಿಗೆ ಸಂಬAಧಿಸಿದ ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು
ಈ ವೇಳೆ ಕ್ಷೇತ್ರದ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಸಲ್ಲಿಕೆಯಾಗಿದ್ದ ೩೦೦ಕ್ಕೂ ಹೆಚ್ಚು ಅರ್ಜಿಗಳನ್ನು ಪರಿಶೀಲಿಸಿದ ಅವರು, ಈ ತಿಂಗಳ ತಮ್ಮ ಶಾಸಕರ ಸಂಬಳದ ಜೊತೆಗೆ ಸ್ವಂತ ಹಣವನ್ನೂ ಸೇರಿಸಿ ಅರ್ಹ ವಿದ್ಯಾರ್ಥಿಗಳಿಗೆ ಧನಸಹಾಯ ನೀಡಲು ನಿರ್ಧರಿಸಿದರು. ಸ್ಥಳದಲ್ಲೇ ಒಬ್ಬ ಅರ್ಹ ವಿದ್ಯಾರ್ಥಿಗೆ ೫೦ ಸಾವಿರ ಮೊತ್ತದ ಚೆಕ್ ವಿತರಿಸಿದರು
ವಿದ್ಯಾರ್ಥಿಗಳ ಆರ್ಥಿಕ ಪರಿಸ್ಥಿತಿ ಹಾಗೂ ವಿದ್ಯಾಭ್ಯಾಸದ ಅಗತ್ಯತೆಗಳನ್ನು ವೈಯಕ್ತಿಕವಾಗಿ ಆಲಿಸಿದ ಶಾಸಕ ಮಂಜುನಾಥ್, ಅರ್ಹ ಫಲಾನುಭವಿಗಳಿಗೆ ಶೀಘ್ರದಲ್ಲೇ ಸಹಾಯಧನ ವಿತರಿಸುವಂತೆ ಕಚೇರಿ ಸಿಬ್ಬಂದಿಗೆ ಸೂಚನೆ ನೀಡಿದರು.ಸಾರ್ವಜನಿಕರಿಂದ ಬಂದಿದ್ದ ವಿವಿಧ ಸಮಸ್ಯೆಗಳ ಕುರಿತು ಸಂಬAಧಪಟ್ಟ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅವರು, ಜನರ ಸಮಸ್ಯೆಗಳನ್ನು ವಿಳಂಬವಿಲ್ಲದೆ ಬಗೆಹರಿಸುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೊತ್ತೂರು ಮಂಜುನಾಥ್, ನನಗೆ ಬರುವ ಶಾಸಕರ ಮಾಸಿಕ ಸಂಬಳ ನನಗಲ್ಲ. ಅದು ನನ್ನ ಕ್ಷೇತ್ರದ ಬಡ ವಿದ್ಯಾರ್ಥಿಗಳ ಶಿಕ್ಷಣ ಮತ್ತು ಜನರ ಆರೋಗ್ಯಕ್ಕಾಗಿ ಮೀಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ ಶಿವಕುಮಾರ್, ಕುಡಾ ಅಧ್ಯಕ್ಷ ಮಹಮ್ಮದ್ ಹನೀಫ್ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಕಾಂಗ್ರೆಸ್ ಮುಖಂಡ ನುಕ್ಕನಹಳ್ಳಿ ಶ್ರೀನಿವಾಸ್, ಮಡಿವಾಳ ಬೈರೇಗೌಡ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್