
ಗದಗ, 13 ಜುಲೈ (ಹಿ.ಸ.)
ಆ್ಯಂಕರ್:- ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿರುವ ರೈತರನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಕೃಷಿ ಪ್ರಶಸ್ತಿ ಯೋಜನೆ ಅಡಿಯಲ್ಲಿ 2026-27ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸ್ಪರ್ಧೆಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ರೈತರು ಹಾಗೂ ರೈತ ಮಹಿಳೆಯರು ನಿಗದಿತ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿ ಯೋಜನೆಯ ಪ್ರಯೋಜನ ಪಡೆದುಕೊಳ್ಳುವಂತೆ ಗದಗ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಕೃಷಿ ಉತ್ಪಾದನೆ ಹಾಗೂ ಉತ್ಪಾದಕತೆ ಹೆಚ್ಚಳವಾಗಲು ರೈತರ ಪರಿಶ್ರಮ ಮತ್ತು ಕೃಷಿಯಲ್ಲಿ ಅವರ ಸಕ್ರಿಯ ಪಾಲ್ಗೊಳ್ಳುವಿಕೆ ಪ್ರಮುಖ ಕಾರಣವಾಗಿದೆ. ಅಂತಹ ಶ್ರಮಜೀವಿ ರೈತರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಕೃಷಿ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಈ ಯೋಜನೆಯಡಿ ವಿವಿಧ ಬೆಳೆಗಳಿಗೆ ಸ್ಪರ್ಧೆ ನಡೆಸಿ, ಆಯ್ಕೆಯಾದ ಪ್ರತಿ ಬೆಳೆಗೆ ಮೊದಲ ಮೂರು ಸ್ಥಾನಗಳನ್ನು ಪಡೆದ ರೈತರಿಗೆ ಬಹುಮಾನ ನೀಡಿ ಸನ್ಮಾನಿಸಲಾಗುತ್ತದೆ.
ಕೃಷಿ ಕ್ಷೇತ್ರದಲ್ಲಿ ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವ ಬೆಳೆಸುವುದು, ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ರೈತರನ್ನು ಪ್ರೋತ್ಸಾಹಿಸುವುದು ಹಾಗೂ ಉತ್ತಮ ಉತ್ಪಾದನೆಯ ಮೂಲಕ ಇತರ ರೈತರಿಗೆ ಮಾದರಿಯಾಗುವಂತೆ ಉತ್ತೇಜಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.
ಈ ವರ್ಷದಿಂದ ಕೃಷಿ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನ್ಲೈನ್ ಮೂಲಕ ನಡೆಸಲಾಗುತ್ತಿದೆ. ಕೃಷಿ ಇಲಾಖೆಯ ಕೆ-ಕಿಸಾನ್ ಪೋರ್ಟಲ್ನಲ್ಲಿ ಹೊಸದಾಗಿ ಕೃಷಿ ಪ್ರಶಸ್ತಿ ಅರ್ಜಿ ನಮೂನೆಯನ್ನು ಅಳವಡಿಸಲಾಗಿದೆ. ರೈತರು ತಮ್ಮ ಸಿಟಿಜನ್ ಲಾಗಿನ್ ಅಥವಾ ರೈತ ಸಂಪರ್ಕ ಕೇಂದ್ರದ ಲಾಗಿನ್ ಮೂಲಕ ಅರ್ಜಿ ಸಲ್ಲಿಸಬಹುದು. ಅಲ್ಲದೆ ಹತ್ತಿರದ ರೈತ ಸಂಪರ್ಕ ಕೇಂದ್ರ, ಸೇವಾ ಕೇಂದ್ರ ಅಥವಾ ಸ್ವತಃ ತಮ್ಮಿಂದಲೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಅರ್ಜಿ ಸಲ್ಲಿಸಲು ರೈತರು ತಮ್ಮ ಎಫ್.ಐ.ಡಿ. ಸಂಖ್ಯೆಯನ್ನು ಬಳಸಬೇಕು. ಇದರೊಂದಿಗೆ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡುವುದು ಕಡ್ಡಾಯವಾಗಿದೆ.
2026-27ನೇ ಸಾಲಿನ ಗದಗ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬೆಳೆ ಸ್ಪರ್ಧೆಗೆ ಆಯ್ಕೆ ಮಾಡಿರುವ ಬೆಳೆಗಳು:
- ಹೆಸರು (ಮುಂಗಾರು ಮಳೆಯಾಶ್ರಿತ)
- ಗೋವಿನ ಜೋಳ (ಮುಂಗಾರು ಮಳೆಯಾಶ್ರಿತ)
- ಶೇಂಗಾ (ಮುಂಗಾರು ಮಳೆಯಾಶ್ರಿತ)
ಈ ಬೆಳೆಗಳನ್ನು ಬೆಳೆಯುತ್ತಿರುವ ರೈತರು ಮಾತ್ರ ಸ್ಪರ್ಧೆಗೆ ಅರ್ಹರಾಗಿರುತ್ತಾರೆ.
ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಪಹಣಿ, ರೈತರ ಭಾವಚಿತ್ರ, ಗುರುತಿನ ಚೀಟಿ, ಬ್ಯಾಂಕ್ ಪಾಸ್ಬುಕ್ ಪ್ರತಿ ಹಾಗೂ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ರೈತರಾದರೆ ಜಾತಿ ಪ್ರಮಾಣ ಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.
ಕೃಷಿ ಪ್ರಶಸ್ತಿಯಡಿ ನಡೆಯುವ ಬೆಳೆ ಸ್ಪರ್ಧೆಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಸಂಪೂರ್ಣವಾಗಿ ಉಚಿತವಾಗಿ ರೈತರು ಅರ್ಜಿ ಸಲ್ಲಿಸಬಹುದಾಗಿದೆ. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಯೋಜನೆಯ ಲಾಭ ಪಡೆದುಕೊಳ್ಳುವಂತೆ ಇಲಾಖೆ ಮನವಿ ಮಾಡಿದೆ.
2026-27ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸ್ಪರ್ಧೆಗೆ ಅರ್ಜಿ ಸಲ್ಲಿಸಲು ಆಗಸ್ಟ್ 30, 2026 ಕೊನೆಯ ದಿನಾಂಕ ನಿಗದಿಪಡಿಸಲಾಗಿದೆ. ಆಸಕ್ತ ರೈತರು ಕೊನೆಯ ದಿನಾಂಕದೊಳಗೆ ಹತ್ತಿರದ ರೈತ ಸಂಪರ್ಕ ಕೇಂದ್ರಗಳ ಮೂಲಕ ಅಥವಾ ಸ್ವತಃ ಕೆ-ಕಿಸಾನ್ ಪೋರ್ಟಲ್ ಮೂಲಕ ಆನ್ಲೈನ್ನಲ್ಲಿ ನೋಂದಣಿ ಮಾಡಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರ ಅಥವಾ ಸಂಬಂಧಿಸಿದ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಅಗತ್ಯ ಮಾರ್ಗದರ್ಶನ ಪಡೆಯಬಹುದು ಎಂದು ಗದಗ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿದ ರೈತರನ್ನು ಗುರುತಿಸಿ ಪ್ರೋತ್ಸಾಹಿಸುವ ಈ ಯೋಜನೆಯು ಕೃಷಿ ಉತ್ಪಾದನೆ ಹೆಚ್ಚಿಸುವುದರ ಜೊತೆಗೆ ರೈತರಲ್ಲಿ ನವೀನ ಕೃಷಿ ಪದ್ಧತಿಗಳ ಅಳವಡಿಕೆಗೆ ಉತ್ತೇಜನ ನೀಡುವ ಮಹತ್ವದ ಕಾರ್ಯಕ್ರಮವಾಗಿದ್ದು, ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೃಷಿ ಇಲಾಖೆ ಮನವಿ ಮಾಡಿದೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP