
ಕೋಲಾರ,ಜು.೧೩(ಹಿ.ಸ):
ಆ್ಯಂಕರ್ : ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿ ಪೊಲೀಸ್ ವೃತ್ತದ ವ್ಯಾಪ್ತಿಯ ಕೋಡಿಪಲ್ಲಿ ಗ್ರಾಮ ಪಂಚಾಯಿತಿಯಲ್ಲಿ ೪.೫ ಲಕ್ಷಕ್ಕೂ ಅಧಿಕ ಸಾರ್ವಜನಿಕ ಹಣ ಅಕ್ರಮವಾಗಿ ವರ್ಗಾವಣೆಯಾಗಿದೆ ಎಂದು ಆರೋಪಿಸಿ, ದ್ರಾವಿಡ ವಿಮೋಚನಾ ಸಂಘದ ಅಧ್ಯಕ್ಷ ಹಾಗೂ ಸಮಾಜಸೇವಕರಾದ ಕೆ.ಎಂ. ಅನಂತಕೀರ್ತಿ ಮುಳಬಾಗಿಲು ಪೊಲೀಸ್ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಿಗೆ ದಾಖಲೆಗಳೊಂದಿಗೆ ದೂರು ಸಲ್ಲಿಸಿ, ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ದೂರಿನ ಪ್ರಕಾರ, ಪ್ರಭಾರಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿದ್ದ ಹೆಚ್. ಚಲಪತಿ ಅವರು ೦೧-೦೫-೨೦೨೬ ರಿಂದ ೩೧-೦೫-೨೦೨೬ರವರೆಗೆ ರಜೆಯಲ್ಲಿದ್ದ ಅವಧಿಯಲ್ಲಿ, ಪಂಚಾಯಿತಿಯ ಆಡಳಿತಾಧಿಕಾರಿಯ ಸಹಿಗಳನ್ನು ನಕಲು ಮಾಡಿ ಗೌನಿಪಲ್ಲಿಯ ಎಸ್ಬಿಐ ಶಾಖೆಯಲ್ಲಿರುವ ಪಂಚಾಯಿತಿಯ ವರ್ಗ-೧ ಖಾತೆಯ ೧೫ ಚೆಕ್ಗಳ ಮೂಲಕ ೪.೫ ಲಕ್ಷಕ್ಕೂ ಅಧಿಕ ಹಣವನ್ನು ಅಕ್ರಮವಾಗಿ ಹಿಂಪಡೆದಿರುವ ಆರೋಪ ಕೇಳಿಬಂದಿದೆ.
ಮೇ ತಿಂಗಳಲ್ಲೇ ಈ ಅಕ್ರಮ ನಡೆದಿದ್ದರೂ, ಅದು ಜುಲೈ ೪ರವರೆಗೆ ಸಂಬ0ಧಿತ ಅಧಿಕಾರಿಗಳ ಗಮನಕ್ಕೆ ಬಂದಿರಲಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ವಯೋನಿವೃತ್ತರಾದ ಅಧಿಕಾರಿಯಿಂದ ಚೆಕ್ಬುಕ್ಗಳನ್ನು ವಾಪಸ್ ಪಡೆಯದಿರುವುದು ಹಾಗೂ ಅಗತ್ಯ ಆಡಳಿತಾತ್ಮಕ ಕ್ರಮ ಕೈಗೊಳ್ಳದಿರುವುದು ಈ ಪ್ರಕರಣದಲ್ಲಿ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಜುಲೈ ೪ರಂದು ವಿಷಯವನ್ನು ಆಡಳಿತಾಧಿಕಾರಿಯ ಗಮನಕ್ಕೆ ತಂದ ನಂತರ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿ, ಜುಲೈ ೬ರಂದು ಪೊಲೀಸ್ ಠಾಣೆಗೆ ದೂರು ನೀಡಿ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಆದರೆ, ಜುಲೈ ೧೦ರಂದು ಮಾತ್ರ ಗೌನಿಪಲ್ಲಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದ್ದು, ಇದುವರೆಗೂ ಎಫ್ಐಆರ್ ದಾಖಲಿಸದೇ ಯಾವುದೇ ಪರಿಣಾಮಕಾರಿ ತನಿಖೆ ಆರಂಭಿಸಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸಂಬAಧಿತ ಪೊಲೀಸ್ ಅಧಿಕಾರಿಗಳು ದೂರವಾಣಿ ಕರೆಗಳಿಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದ್ದು, ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಕೆ.ಎಂ. ಅನಂತಕೀರ್ತಿ ಮನವಿ ಮಾಡಿದ್ದಾರೆ.
ಇದೇ ಮಾದರಿಯ ಅಕ್ರಮಗಳು ಶ್ರೀನಿವಾಸಪುರ ತಾಲೂಕಿನ ಇತರ ಗ್ರಾಮ ಪಂಚಾಯಿತಿಗಳಲ್ಲಿಯೂ ನಡೆದಿರುವ ಬಗ್ಗೆ ಮಾಹಿತಿ ಲಭ್ಯವಿದ್ದು, ಅಗತ್ಯ ದಾಖಲೆಗಳೊಂದಿಗೆ ಆ ಪ್ರಕರಣಗಳನ್ನೂ ಶೀಘ್ರದಲ್ಲೇ ಸಾರ್ವಜನಿಕರ ಹಾಗೂ ಸಂಬ0ಧಿತ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್