
ನವದೆಹಲಿ, 13 ಜುಲೈ (ಹಿ.ಸ.):
ಆ್ಯಂಕರ್:ಭಾರತೀಯ ವಾಯುಪಡೆಯ ಬಹುನಿರೀಕ್ಷಿತ ಲಘು ಯುದ್ಧವಿಮಾನ ತೇಜಸ್ ಮಾರ್ಕ್-1ಎ ಯೋಜನೆಗೆ ಮಹತ್ವದ ಉತ್ತೇಜನ ದೊರೆತಿದೆ. ಅಮೆರಿಕದ ಜಿಇ ಏರೋಸ್ಪೇಸ್ ಕಂಪನಿಯು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್)ಗೆ ಏಳನೇ ಎಫ್-404 ಎಂಜಿನ್ ಹಸ್ತಾಂತರಿಸಿದೆ. ಈ ಎಂಜಿನ್ ಅನ್ನು ಸರಕು ಹಡಗಿನ ಮೂಲಕ ಭಾರತಕ್ಕೆ ತರಲಾಗುತ್ತಿದ್ದು, ಎಂಜಿನ್ ಪೂರೈಕೆಯಲ್ಲಿದ್ದ ತೊಂದರೆಗಳು ನಿವಾರಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಯುದ್ಧವಿಮಾನಗಳ ಉತ್ಪಾದನೆಗೆ ಹೆಚ್ಚಿನ ವೇಗ ಸಿಗುವ ನಿರೀಕ್ಷೆ ವ್ಯಕ್ತವಾಗಿದೆ.
ಭಾರತೀಯ ವಾಯುಪಡೆಗಾಗಿ ರಕ್ಷಣಾ ಸಚಿವಾಲಯವು ಎಚ್‌ಎಎಲ್‌ಗೆ ಒಟ್ಟು 180 ತೇಜಸ್ ಮಾರ್ಕ್-1ಎ ಯುದ್ಧವಿಮಾನಗಳ ನಿರ್ಮಾಣದ ಆದೇಶ ನೀಡಿದೆ. ಮೊದಲ ಒಪ್ಪಂದವು 2021ರ ಫೆಬ್ರವರಿಯಲ್ಲಿ ಸುಮಾರು 48 ಸಾವಿರ ಕೋಟಿ ರೂಪಾಯಿ ಮೌಲ್ಯದಲ್ಲಿ ನಡೆದಿದ್ದು, ಇದರಲ್ಲಿ 73 ತೇಜಸ್ ಮಾರ್ಕ್-1ಎ ಯುದ್ಧವಿಮಾನಗಳು ಮತ್ತು 10 ತರಬೇತಿ ವಿಮಾನಗಳು ಸೇರಿವೆ.
ನಂತರ 2025ರ ಸೆಪ್ಟೆಂಬರ್ 25ರಂದು 62,370 ಕೋಟಿ ರೂಪಾಯಿ ಮೌಲ್ಯದ ಎರಡನೇ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಇದರಲ್ಲಿ 97 ತೇಜಸ್ ಮಾರ್ಕ್-1ಎ ಯುದ್ಧವಿಮಾನಗಳ ಖರೀದಿಗೆ ಅನುಮೋದನೆ ನೀಡಲಾಗಿದೆ. ಈ ಪೈಕಿ 68 ಏಕ ಆಸನದ ಹಾಗೂ 29 ದ್ವಿ ಆಸನದ ವಿಮಾನಗಳಿದ್ದು, 2027-28ರಿಂದ ವಿತರಣೆ ಆರಂಭವಾಗಿ ಆರು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ.
ಮೂಲ ಯೋಜನೆಯ ಪ್ರಕಾರ ಭಾರತೀಯ ವಾಯುಪಡೆಗೆ 2024ರಲ್ಲೇ ಎಂಜಿನ್‌ಗಳ ಮೊದಲ ಕಂತು ದೊರೆಯಬೇಕಾಗಿತ್ತು. ಆದರೆ ಜಿಇ ಏರೋಸ್ಪೇಸ್ ಸಂಸ್ಥೆಯು ಎಫ್-404 ಎಂಜಿನ್ ಉತ್ಪಾದನೆಯಲ್ಲಿ ಉಂಟಾದ ಅಡಚಣೆಗಳಿಂದ ಪೂರೈಕೆಯಲ್ಲಿ ವಿಳಂಬ ಉಂಟಾಯಿತು. ಇದರ ಪರಿಣಾಮವಾಗಿ ಎಚ್‌ಎಎಲ್ ತೇಜಸ್ ಮಾರ್ಕ್-1ಎ ಯುದ್ಧವಿಮಾನಗಳನ್ನು ನಿಗದಿತ ವೇಳಾಪಟ್ಟಿಯಂತೆ ವಾಯುಪಡೆಗೆ ಒದಗಿಸಲು ಸಾಧ್ಯವಾಗಲಿಲ್ಲ.
ದೀರ್ಘ ನಿರೀಕ್ಷೆಯ ಬಳಿಕ 2025ರ ಮಾರ್ಚ್ 26ರಂದು ಮೊದಲ ಎಂಜಿನ್ ಭಾರತಕ್ಕೆ ತಲುಪಿತು. ನಂತರ ಕ್ರಮವಾಗಿ ಎರಡನೇ, ಮೂರನೇ, ನಾಲ್ಕನೇ, ಐದನೇ ಮತ್ತು ಆರನೇ ಎಂಜಿನ್‌ಗಳನ್ನು ಹಂತ ಹಂತವಾಗಿ ಎಚ್‌ಎಎಲ್‌ಗೆ ಪೂರೈಸಲಾಯಿತು. ಇದೀಗ ಏಳನೇ ಎಂಜಿನ್ ಹಸ್ತಾಂತರವಾಗಿದ್ದು, ಅದನ್ನು ಅಮೆರಿಕದಿಂದ ಭಾರತಕ್ಕೆ ಸಾಗಿಸಲಾಗುತ್ತಿದೆ.
ಎಚ್‌ಎಎಲ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ಡಿ.ಕೆ. ಸುನೀಲ್ ಅವರು, ಸಂಸ್ಥೆಯ ಗುರಿ 2032-33ನೇ ಹಣಕಾಸು ವರ್ಷದೊಳಗೆ ಎಲ್ಲಾ 180 ತೇಜಸ್ ಮಾರ್ಕ್-1ಎ ಯುದ್ಧವಿಮಾನಗಳ ನಿರ್ಮಾಣ ಪೂರ್ಣಗೊಳಿಸುವುದಾಗಿದೆ ಎಂದು ತಿಳಿಸಿದ್ದಾರೆ.
ಜಿಇ ಸಂಸ್ಥೆಯು ಆರಂಭದಲ್ಲಿ ವರ್ಷಕ್ಕೆ 12 ಎಂಜಿನ್‌ಗಳನ್ನು ಪೂರೈಸುವುದಾಗಿ ತಿಳಿಸಿತ್ತು. ಆದರೆ ಇದೀಗ ಪ್ರಸಕ್ತ ಹಣಕಾಸು ವರ್ಷದ ಅಂತ್ಯದೊಳಗೆ ಆ ಗುರಿ ಸಾಧಿಸುವ ನಿರೀಕ್ಷೆ ಇದೆ. ಈ ವರ್ಷ 10 ಎಂಜಿನ್‌ಗಳು ಲಭ್ಯವಾಗುವ ಸಾಧ್ಯತೆ ಇದ್ದು, ಉಳಿದವು ಮುಂದಿನ ವರ್ಷದ ಮಾರ್ಚ್ ವೇಳೆಗೆ ದೊರೆಯಲಿವೆ ಎಂದು ಅವರು ಹೇಳಿದರು.
ಈಗಾಗಲೇ 10ನೇ ತೇಜಸ್ ವಿಮಾನದ ರಚನಾ ಕಾರ್ಯ ಪೂರ್ಣಗೊಂಡಿದ್ದು, 11ನೇ ವಿಮಾನವೂ ಸಿದ್ಧವಾಗಿದೆ. ಎಂಜಿನ್ ಸಂಬಂಧಿತ ಮೂಲಭೂತ ಸಮಸ್ಯೆಗಳು ಬಹುತೇಕ ಪರಿಹಾರಗೊಂಡಿರುವುದರಿಂದ ಮುಂದಿನ ದಿನಗಳಲ್ಲಿ ಉತ್ಪಾದನೆ ಗಣನೀಯವಾಗಿ ವೇಗ ಪಡೆಯಲಿದೆ. ಅಲ್ಲದೆ, ಮುಂದಿನ ವರ್ಷ 20 ಎಂಜಿನ್‌ಗಳನ್ನು ಪೂರೈಸುವುದಾಗಿ ಜಿಇ ಏರೋಸ್ಪೇಸ್ ಭರವಸೆ ನೀಡಿದ್ದು, ಈ ಕುರಿತು ಕಂಪನಿಯ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ ಎಂದು ಡಾ. ಸುನೀಲ್ ಮಾಹಿತಿ ನೀಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.