
ಬಳ್ಳಾರಿ, 13 ಜುಲೈ (ಹಿ.ಸ.):
ಆ್ಯಂಕರ್ : ರಾಜ್ಯ ಸರ್ಕಾರವು ಅಬಕಾರಿ ಇಲಾಖೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಸಿಎಲ್-2ಎ ಮತ್ತು ಸಿಎಲ್-9ಎ ಸನ್ನದುಗಳ ಇ-ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವವರು ಕೇವಲ ಬಳ್ಳಾರಿ ಅಥವಾ ವಿಜಯನಗರ ಜಿಲ್ಲೆಗೆ ಮಾತ್ರ ಸೀಮಿತವಾಗಿರದೆ, ಇಡೀ ರಾಜ್ಯದ ಯಾವುದೇ ಜಿಲ್ಲೆಯಲ್ಲಾದರೂ ಬಿಡ್ ಮಾಡಬಹುದು ಎಂದು ಬಳ್ಳಾರಿ ಜಿಲ್ಲಾ ಅಬಕಾರಿ ಉಪ ಆಯುಕ್ತ ಮಂಜುನಾಥ್ ಎನ್. ಅವರು ಹೇಳಿದ್ದಾರೆ.
ರಾಜ್ಯ ಅಬಕಾರಿ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾ ಅಬಕಾರಿ ಇಲಾಖೆ ವತಿಯಿಂದ ಅಬಕಾರಿ ಸನ್ನದುಗಳ ಇ-ಹರಾಜು ಕುರಿತು ನಗರದ ಜಿಪಂ ನ ಹೊಸ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಸಂಭಾವ್ಯ ಬಿಡ್ಡುದಾರರು ಹಾಗೂ ಆಸಕ್ತರಿಗೆ ಸೋಮವಾರ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯಾದ್ಯಂತ ಒಟ್ಟು ಸುಮಾರು 483 ಸಿಎಲ್-2ಎ ಮತ್ತು 90 ಕ್ಕೂ ಹೆಚ್ಚು ಸಿಎಲ್-9ಎ ಸನ್ನದುಗಳನ್ನು ಹರಾಜು ಮಾಡಲು ಸರ್ಕಾರ ಉದ್ದೇಶಿಸಿದೆ. ಸಿಎಲ್-2ಎ ಇವು ಚಿಲ್ಲರೆ ಮದ್ಯದ ಮಳಿಗೆಗಳಾಗಿದ್ದು (ವೈನ್ ಸ್ಟೋರ್ಸ್), ಇಲ್ಲಿ ಮಧ್ಯವನ್ನು ಕೊಂಡೊಯ್ದು ಬೇರೆಡೆ ಸೇವಿಸಲು ಮಾತ್ರ ಅವಕಾಶವಿರುತ್ತದೆ (ಪಾರ್ಸಲ್ ವ್ಯವಸ್ಥೆ). ಅದೇರೀತಿಯಾಗಿ ಸಿಎಲ್-9ಎ ಇವು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಬಾರ್ ಮತ್ತು ರೆಸ್ಟೋರೆಂಟ್ಗಳಾಗಿದ್ದು, ಇಲ್ಲಿ ಊಟ ಮತ್ತು ಉಪಹಾರದೊಂದಿಗೆ ಮದ್ಯ ಸರಬರಾಜು ಮಾಡಲು ಅವಕಾಶವಿರುತ್ತದೆ ಎಂದು ತಿಳಿಸಿದರು.
ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 10 ಸಿಎಲ್-2ಎ ಮಳಿಗೆಗಳು ಮತ್ತು 2 ಸಿಎಲ್-9ಎ ಸನ್ನದುಗಳಿದ್ದು, ಇವುಗಳಿಗೆ ಹರಾಜು ಪ್ರಕ್ರಿಯೆ ನಡೆಯಲಿದೆ. ಹರಾಜಿನಲ್ಲಿ ಭಾಗವಹಿಸಲು ಬಯಸುವವರು ಕಡ್ಡಾಯವಾಗಿ ಎಂಎಸ್ಟಿಸಿ ಸಂಸ್ಥೆಯ ಅಧಿಕೃತ ವೆಬ್ಸೈಟ್ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಆನ್ಲೈನ್ ವಾಲೆಟ್ನಲ್ಲಿ ಇಎಂಡಿ ಬ್ಯಾಲೆನ್ಸ್ ಕಾಯ್ದುಕೊಳ್ಳುವುದು ಕಡ್ಡಾಯವಾಗಿರುತ್ತದೆ ಎಂದರು.
ಬಳ್ಳಾರಿ ಜಿಲ್ಲೆಯ ನೇರ ಹರಾಜು ಪ್ರಕ್ರಿಯೆಯು ಜುಲೈ 28 ರಂದು ಮಧ್ಯಾಹ್ನ 03 ಗಂಟೆಗೆ ಆರಂಭವಾಗಲಿದ್ದು, ಬಿಡ್ದಾರರು ಜುಲೈ 26 ರೊಳಗಾಗಿ ಎಲ್ಲಾ ನೋಂದಣಿ ಹಾಗೂ ಶುಲ್ಕ ಪಾವತಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು.
ಆನ್ಲೈನ್ ಬಿಡ್ಡಿಂಗ್ಗಾಗಿ ಮೊಬೈಲ್ ಅಥವಾ ಉತ್ತಮ ಇಂಟರ್ನೆಟ್ ಸಂಪರ್ಕವಿರುವ ಡೆಸ್ಕ್ಟಾಪ್ ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ಗಳನ್ನು ಬಳಸಿ, ತಾವಿದ್ದಲ್ಲಿಯೇ ಭಾಗವಹಿಸಬಹುದಾಗಿದೆ ಎಂದು ಅವರು ತಿಳಿಸಿದರು.
ಅಬಕಾರಿ ಇಲಾಖೆಯ ನಿಯಮಾವಳಿಗಳ ಪ್ರಕಾರ, ಪ್ರಸ್ತುತ ನೀಡಲಾಗುತ್ತಿರುವ ಮದ್ಯದ ಸನ್ನದುಗಳು 5 ವರ್ಷಗಳ ಅವಧಿಗೆ ಮಾತ್ರ ಸೀಮಿತವಾಗಿರಲಿವೆ. ಐದು ವರ್ಷಗಳ ನಂತರ ಈ ಸನ್ನದುಗಳನ್ನು ಮುಂದುವರಿಸುವ ಅಥವಾ ಮರುಹರಾಜು ಮಾಡುವ ಕುರಿತು ಸರ್ಕಾರವೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.
ರಾಜ್ಯಾದ್ಯಂತ ಜಾರಿಯಲ್ಲಿರುವ ರೋಸ್ಟರ್ ನಿಯಮಾವಳಿಗಳ ಅನ್ವಯ ಬಳ್ಳಾರಿ ಜಿಲ್ಲೆಗೆ ಮೀಸಲಾತಿ ದೊರೆತಿದ್ದು, ವಿಜಯನಗರ ಜಿಲ್ಲೆಗೆ ಯಾವುದೇ ವಿಶೇಷ ಮೀಸಲಾತಿ ಅನ್ವಯಿಸುವುದಿಲ್ಲ. ಹಾಗಾಗಿ ಇಲ್ಲಿನ ಎಲ್ಲಾ ಸನ್ನದುಗಳು ಸಾಮಾನ್ಯ ವರ್ಗದಡಿ ಹಂಚಿಕೆಯಾಗಲಿದ್ದು, ಪ್ರತಿಯೊಬ್ಬರೂ ಮುಕ್ತವಾಗಿ ಸ್ಪರ್ಧಿಸಬಹುದಾಗಿದೆ ಎಂದರು.
ಈ ಹರಾಜು ಪ್ರಕ್ರಿಯೆಯಲ್ಲಿ ವೈಯಕ್ತಿಕ ವ್ಯಕ್ತಿಗಳು, ಪಾಲುದಾರಿಕೆ ಸಂಸ್ಥೆಗಳು, ಕಂಪನಿಗಳು, ಸೊಸೈಟಿಗಳು ಹಾಗೂ ಲಿಮಿಟೆಡ್ ಲಯಬಿಲಿಟಿ ಪಾರ್ಟ್ನರ್ಶಿಪ್ ಸಂಸ್ಥೆಗಳು ಮುಕ್ತವಾಗಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಮಾಹಿತಿಗಾಗಿ ಸಾರ್ವಜನಿಕರು ಸ್ಥಳೀಯ ತಾಲೂಕು ಅಬಕಾರಿ ಕಚೇರಿ ಅಥವಾ ಜಿಲ್ಲಾ ಅಬಕಾರಿ ಉಪ ಆಯುಕ್ತರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಬಳಿಕ ಕರ್ನಾಟಕ ಎಂ.ಎಸ್.ಟಿ.ಸಿ. ಲಿಮಿಟೆಡ್ (ಬೆಂಗಳೂರು) ಸಂಸ್ಥೆಯ ಪ್ರಾದೇಶಿಕ ಹಣಕಾಸು ವ್ಯವಸ್ಥಾಪಕ ಸತೀಶ್ ಕುಮಾರ್ ಅವರು ತಾಂತ್ರಿಕ ಪ್ರಕ್ರಿಯೆಗಳ ಕುರಿತು ಬಿಡ್ದಾರರಿಗೆ ತರಬೇತಿ ನೀಡಿದರು.
ಹೊಸಪೇಟೆ ವಿಭಾಗದ ಅಬಕಾರಿ ಜಂಟಿ ಆಯುಕ್ತರಾದ (ಜಾರಿ ಮತ್ತು ತನಿಖೆ) ಶೈಲಜಾ ಕೋಟೆ ಅವರು ಕಾರ್ಯಾಗಾರವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಾಗಾರದಲ್ಲಿ ವಿಜಯನಗರ ಜಿಲ್ಲೆಯ ಅಬಕಾರಿ ಉಪ ಆಯುಕ್ತ ಡಾ.ಪಿ. ಮಾದೇಶ್, ಜಿಲ್ಲಾ ಅಬಕಾರಿ ಇಲಾಖೆಯ ಅಧಿಕಾರಿ ಅನಿಲ್, ಎಂ.ಎಸ್.ಟಿ.ಸಿ. ಸಂಸ್ಥೆಯ ಕಾರ್ಯನಿರ್ವಾಹಕ ಸಹಾಯಕ ಗಿರೀಶ್ ಸೇರಿದಂತೆ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಅಬಕಾರಿ ಇಲಾಖೆಯ ಅಧಿಕಾರಿ-ಸಿಬ್ಬಂದಿ ಹಾಗೂ ಅಖಂಡ ಬಳ್ಳಾರಿ ಜಿಲ್ಲೆಯ ಬಿಡ್ದಾರರು, ಮತ್ತೀತರರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್