ಗಂಗಾಪುರ ಪೇಟೆಯಲ್ಲಿ ದುರ್ಗಾದೇವಿ ಜಾತ್ರಾ ಮಹೋತ್ಸವಕ್ಕೆ ಸಾಂಸ್ಕೃತಿಕ ರಂಗು
ಗದಗ, 13 ಜುಲೈ (ಹಿ.ಸ.) ಆ್ಯಂಕರ್:- ಗದಗ ನಗರದ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿರುವ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಗಂಗಾಪುರ ಪೇಟೆಯಲ್ಲಿ ಅದ್ಧೂರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಾಳೆ ಆಯೋಜಿಸಲಾಗಿದ್ದು, ಕಲಾಭಿಮಾನಿಗಳು ಹಾಗೂ ಸಾರ್ವಜನಿಕರಿಗೆ ಮನರಂಜನೆಯ ರಸದೌತಣವನ್ನು ಉಣಬ
ಫೋಟೋ


ಗದಗ, 13 ಜುಲೈ (ಹಿ.ಸ.)

ಆ್ಯಂಕರ್:- ಗದಗ ನಗರದ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿರುವ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಗಂಗಾಪುರ ಪೇಟೆಯಲ್ಲಿ ಅದ್ಧೂರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಾಳೆ ಆಯೋಜಿಸಲಾಗಿದ್ದು, ಕಲಾಭಿಮಾನಿಗಳು ಹಾಗೂ ಸಾರ್ವಜನಿಕರಿಗೆ ಮನರಂಜನೆಯ ರಸದೌತಣವನ್ನು ಉಣಬಡಿಸಲು ಭರ್ಜರಿ ಸಿದ್ಧತೆಗಳು ಪೂರ್ಣಗೊಂಡಿವೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಶ್ರೀ ದುರ್ಗಾದೇವಿ ದೇವಸ್ಥಾನ ಟ್ರಸ್ಟ್ ಕಮಿಟಿ, ಜಾತ್ರಾ ಮಹೋತ್ಸವ ಸಮಿತಿ ಹಾಗೂ ಗಂಗಾಪುರ ಪೇಟೆ ಯುವಕ ಮಂಡಳದ ಪದಾಧಿಕಾರಿಗಳು, ಜಾತ್ರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಬಾರಿ ವಿಶೇಷ ಆಕರ್ಷಣೆಯಾಗಲಿದ್ದು, ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.

ಶ್ರೀ ದುರ್ಗಾದೇವಿ ದೇವಸ್ಥಾನ ಟ್ರಸ್ಟ್ ಕಮಿಟಿಯ ಯುವ ಘಟಕದ ಅಧ್ಯಕ್ಷ ಸುರೇಶ್ ಬೆಳಧಡಿ ಮಾತನಾಡಿ, ಜಾತ್ರಾ ಮಹೋತ್ಸವಕ್ಕೆ ಇನ್ನಷ್ಟು ಮೆರಗು ನೀಡುವ ಉದ್ದೇಶದಿಂದ ಹೊಸಪೇಟೆಯ ಪ್ರಸಿದ್ಧ ‘ರೈಟ್ ಮ್ಯೂಸಿಕ್ ಇವೆಂಟ್ಸ್’ ತಂಡದ ವತಿಯಿಂದ ರಂಗುರಂಗಿನ ರಸಮಂಜರಿ ಕಾರ್ಯಕ್ರಮ, ಸಂಗೀತ ವೈಭವ ಹಾಗೂ ರೋಮಾಂಚನಕಾರಿ ಮುಕ್ತ ನೃತ್ಯ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಇದರೊಂದಿಗೆ ಯುವ ಸಮೂಹವನ್ನು ರಂಜಿಸುವ ಉದ್ದೇಶದಿಂದ ‘ವಿರಾಟ್ ಸೌಂಡ್ಸ್’ ವತಿಯಿಂದ ವಿಶೇಷ ಡಿಜೆ ಡ್ಯಾನ್ಸ್ ಕಾರ್ಯಕ್ರಮವೂ ನಡೆಯಲಿದ್ದು, ಅತ್ಯಾಧುನಿಕ ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಂಗೀತ ಮತ್ತು ನೃತ್ಯದ ವೈವಿಧ್ಯಮಯ ಪ್ರದರ್ಶನಗಳು ಕಲಾಭಿಮಾನಿಗಳಿಗೆ ಹೊಸ ಅನುಭವವನ್ನು ನೀಡಲಿವೆ ಎಂದು ಅವರು ತಿಳಿಸಿದರು.

ಈ ಬಾರಿಯ ಕಾರ್ಯಕ್ರಮದ ಮತ್ತೊಂದು ವಿಶೇಷತೆ ಎಂದರೆ ಅತ್ಯಾಧುನಿಕ ತಂತ್ರಜ್ಞಾನದ ಸೌಂಡ್ ಹಾಗೂ ಲೈಟಿಂಗ್ ವ್ಯವಸ್ಥೆ. ‘ಶಿವ ಸೌಂಡ್ಸ್’ ಹಾಗೂ ‘ಎಂ ಆಡಿಯೋ ಸೌಂಡ್ಸ್’ ತಂಡಗಳು ಅತ್ಯುನ್ನತ ಗುಣಮಟ್ಟದ ಧ್ವನಿ ವ್ಯವಸ್ಥೆಯನ್ನು ಕಲ್ಪಿಸುತ್ತಿದ್ದು, ಕಣ್ಣು ಕೋರೈಸುವ ಬಣ್ಣಬಣ್ಣದ ಲೈಟಿಂಗ್ ವಿನ್ಯಾಸದೊಂದಿಗೆ ವೇದಿಕೆಯನ್ನು ವಿಶೇಷವಾಗಿ ಸಜ್ಜುಗೊಳಿಸಲಾಗಿದೆ. ಸಂಗೀತ, ಬೆಳಕು ಮತ್ತು ದೃಶ್ಯ ವೈಭವ ಒಂದೇ ವೇದಿಕೆಯಲ್ಲಿ ಬೆರೆತು ನೋಡುಗರಿಗೆ ವಿಭಿನ್ನ ಅನುಭವವನ್ನು ನೀಡುವಂತೆ ಸಿದ್ಧತೆ ಮಾಡಲಾಗಿದೆ.

ಯುವ ಪ್ರತಿಭೆಗಳಿಗೆ ವೇದಿಕೆ

ಈ ಕಾರ್ಯಕ್ರಮ ಕೇವಲ ಮನರಂಜನೆಗೆ ಸೀಮಿತವಾಗದೆ, ನೃತ್ಯ ಹಾಗೂ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುವ ಕನಸು ಹೊಂದಿರುವ ಯುವ ಪ್ರತಿಭೆಗಳಿಗೆ ತಮ್ಮ ಕೌಶಲ್ಯ ಪ್ರದರ್ಶಿಸಲು ಉತ್ತಮ ವೇದಿಕೆಯಾಗಲಿದೆ ಎಂದು ಸುರೇಶ್ ಬೆಳಧಡಿ ಅಭಿಪ್ರಾಯಪಟ್ಟಿದ್ದಾರೆ.

“ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಾಕಷ್ಟು ಪ್ರತಿಭೆಗಳು ಅಡಗಿವೆ. ಅವರಿಗೆ ಸೂಕ್ತ ವೇದಿಕೆ ದೊರೆತರೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುವ ಸಾಮರ್ಥ್ಯವಿದೆ. ಈ ಹಿನ್ನೆಲೆಯಲ್ಲಿ ಮುಕ್ತ ನೃತ್ಯ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಯುವಜನರಲ್ಲಿ ಆತ್ಮವಿಶ್ವಾಸ ಬೆಳೆಸುವ ಜೊತೆಗೆ ಕಲೆಯ ಬಗ್ಗೆ ಮತ್ತಷ್ಟು ಆಸಕ್ತಿ ಮೂಡಿಸಲಿವೆ” ಎಂದು ಅವರು ಹೇಳಿದ್ದಾರೆ.

ಜಾತ್ರೆಯ ಸಂಭ್ರಮಕ್ಕೆ ಮತ್ತಷ್ಟು ಮೆರುಗು

ಪ್ರತಿ ವರ್ಷ ಸಾವಿರಾರು ಭಕ್ತರು ಮತ್ತು ಸಾರ್ವಜನಿಕರ ಸಮ್ಮುಖದಲ್ಲಿ ನಡೆಯುವ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವವು ಗದಗದ ಪ್ರಮುಖ ಧಾರ್ಮಿಕ ಹಾಗೂ ಸಾಂಸ್ಕೃತಿಕ ಉತ್ಸವಗಳಲ್ಲಿ ಒಂದಾಗಿದೆ. ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ ಸಂಜೆ, ನೃತ್ಯ ಪ್ರದರ್ಶನಗಳು ಹಾಗೂ ಸಾರ್ವಜನಿಕರಿಗಾಗಿ ವಿವಿಧ ಮನರಂಜನಾ ಕಾರ್ಯಕ್ರಮಗಳು ಜಾತ್ರೆಯ ಪ್ರಮುಖ ಆಕರ್ಷಣೆಯಾಗಿವೆ.

ಈ ಬಾರಿಯ ಕಾರ್ಯಕ್ರಮವನ್ನು ಇನ್ನಷ್ಟು ಅದ್ಧೂರಿಯಾಗಿ ನಡೆಸಲು ದೇವಸ್ಥಾನ ಟ್ರಸ್ಟ್, ಜಾತ್ರಾ ಮಹೋತ್ಸವ ಸಮಿತಿ ಹಾಗೂ ಗಂಗಾಪುರ ಪೇಟೆ ಯುವಕ ಮಂಡಳದ ಸದಸ್ಯರು ಹಲವು ದಿನಗಳಿಂದ ಸಿದ್ಧತೆ ನಡೆಸಿದ್ದು, ವೇದಿಕೆ ನಿರ್ಮಾಣ, ಬೆಳಕು, ಧ್ವನಿ ವ್ಯವಸ್ಥೆ ಹಾಗೂ ಭದ್ರತಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ.

ಸಾರ್ವಜನಿಕರಿಗೆ ಆಹ್ವಾನ

ಜುಲೈ 14ರಂದು ಸಂಜೆ 7 ಗಂಟೆಯಿಂದ ಆರಂಭವಾಗಲಿರುವ ಈ ಸಾಂಸ್ಕೃತಿಕ ಸಂಭ್ರಮದಲ್ಲಿ ಗದಗ ನಗರ ಹಾಗೂ ಜಿಲ್ಲೆಯ ವಿವಿಧ ಭಾಗಗಳ ಕಲಾಭಿಮಾನಿಗಳು, ಸಾರ್ವಜನಿಕರು ಮತ್ತು ಶ್ರೀ ದುರ್ಗಾದೇವಿಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಸಮಿತಿ, ದೇವಸ್ಥಾನ ಟ್ರಸ್ಟ್ ಕಮಿಟಿ, ಗಂಗಾಪುರ ಪೇಟೆ ಯುವಕ ಮಂಡಳದ ಪದಾಧಿಕಾರಿಗಳು, ಪ್ರಮುಖರು ಹಾಗೂ ಓಣಿಯ ಗುರುಹಿರಿಯರು ಮನವಿ ಮಾಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande