
ಹುಬ್ಬಳ್ಳಿ, 13 ಜುಲೈ (ಹಿ.ಸ.):
ಆ್ಯಂಕರ್:
ಹುಬ್ಬಳ್ಳಿ ನಗರದ ಮಂಟೂರ ರಸ್ತೆಯಲ್ಲಿರುವ ಕಲಬುರ್ಗಿ ಮಠದಲ್ಲಿ ಶ್ರೀ ಶಿವಮೂರ್ತಿ ಮಹಾಸ್ವಾಮಿಗಳ 54ನೇ ಪುಣ್ಯಸ್ಮರಣೆಯನ್ನು ಭಕ್ತಿಭಾವದಿಂದ ಹಾಗೂ ವೈಭವವಾಗಿ ಆಚರಿಸಲಾಯಿತು.
ಕಾರ್ಯಕ್ರಮವು ಎರಡು ಎತ್ತಿನ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಮತ್ತು ರುದ್ರಾಕ್ಷಿ ಮಠದ ಶ್ರೀ ಬಸವಲಿಂಗ ಸ್ವಾಮಿಗಳ ಸಾನ್ನಿಧ್ಯದಲ್ಲಿ, ಶ್ರೀ ಚರಲಿಂಗ ಮಹಾಸ್ವಾಮಿಗಳ ನೇತೃತ್ವದಲ್ಲಿ ನೆರವೇರಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರೊ. ಶಂಭು ಹೆಗ್ಡಾಳ್ ಅವರು ಮಾತನಾಡಿ, ಪರಮಪೂಜ್ಯ ಶ್ರೀ ಶಿವಮೂರ್ತಿ ಮಹಾಸ್ವಾಮಿಗಳು ಮಹಾತಪಸ್ವಿಗಳಾಗಿದ್ದು, ಲಿಂಗಪೂಜಾ ನಿಷ್ಠೆಯ ಮೂಲಕ ವೀರಶೈವ-ಲಿಂಗಾಯತ ಧರ್ಮದ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ. ಶಿವಯೋಗದ ಮೂಲಕ ಲಿಂಗಪೂಜೆಯ ತತ್ವ ಹಾಗೂ ಬಸವಣ್ಣನವರ ಆದರ್ಶಗಳನ್ನು ಸಮಾಜಕ್ಕೆ ಪರಿಚಯಿಸುವ ಮಹತ್ತರ ಕಾರ್ಯವನ್ನು ಅವರು ನಿರ್ವಹಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲ್ಲಿಕಾರ್ಜುನ ಸಾಹುಕಾರ್ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿಜಯಕುಮಾರ್ ಶೆಟ್ಟರ್, ಪ್ರಕಾಶ್ ಬೆಂಡಿಗೇರಿ, ಸಂಕಲ್ಪ ಶೆಟ್ಟರ್, ರಮೇಶ್ ಮಹಾದೇವಪ್ಪನವರ್, ಎಸ್.ವಿ. ಬಳ್ಳಾರಿ (ವಕೀಲರು), ಸದಾಶಿವ ಚೌಶೆಟ್ಟಿ, ಶ್ರೀಶೈಲ ಶಿವಮಠ, ಮಾಂತೇಶ ಗಿರಿಮಠ್, ಮುರುಗೇಶ್ ಎಕಲಾಸಪುರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಶ್ರೀಮತಿ ಶೋಭಾ ಜಾಬಿನ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಬಳಿಕ ಆಗಮಿಸಿದ್ದ ಎಲ್ಲಾ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.