
ವಿಜಯಪುರ, 12 ಜುಲೈ (ಹಿ.ಸ.)
ಆ್ಯಂಕರ್ : ಚುನಾವಣಾ ಆಯೋಗದ ನಿಯಮಗಳನ್ನು ಉಲ್ಲಂಘಿಸಿ, ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿ ಇಲ್ಲದ ಕಾಂಗ್ರೆಸ್ ಮುಖಂಡ ಹಾಗೂ ಮಹಾನಗರ ಪಾಲಿಕೆ ಸದಸ್ಯೆಯ ಪತಿ ಅಬ್ದುಲ್ ರಜಾಕ್ ಹೊರ್ತಿ ನೇತೃತ್ವದಲ್ಲಿ ನಗರದ ಬಬಲೇಶ್ವರ ನಾಕಾ ಸಮೀಪದ ಅಲಿಖಾನ್ ಮಸೀದಿಯಲ್ಲಿ ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್ಒ) ಸಭೆ ನಡೆಸಲಾಗಿದೆ ಎಂದು ಆರೋಪಿಸಿರುವ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಈ ಘಟನೆ ಕುರಿತು ಸಮಗ್ರ ತನಿಖೆ ನಡೆಸಿ ಸಂಬಂಧಪಟ್ಟವರ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳುವಂತೆ ಚುನಾವಣಾ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಶನಿವಾರ ಸಂಜೆ ವಾರ್ಡ್ ಸಂಖ್ಯೆ 32, 33 ಹಾಗೂ 34ರ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ವಿಶೇಷ ಮತದಾರರ ಪರಿಶೀಲನೆ (ಎಸ್ಐಆರ್) ಕಾರ್ಯದಲ್ಲಿ ನಿರತರಾಗಿದ್ದ ಬಿಎಲ್ಒಗಳನ್ನು ಸಭೆಗೆ ಕರೆಸಿಕೊಳ್ಳಲಾಗಿದೆ ಎಂದು ಆರೋಪಿಸಿದರು. ವಾರ್ಡ್ 33 ಮತ್ತು 34ರ ಬಿಎಲ್ಒ ಸೂಪರ್ವೈಸರ್ ಆಗಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಣ ಇಲಾಖೆಯ ರಿಯಾಜ್ ತಮದಡ್ಡಿ ಎಂಬವರು ಖುದ್ದಾಗಿ ದೂರವಾಣಿ ಕರೆ ಮಾಡಿ ಅಧಿಕಾರಿಗಳನ್ನು ಸಭೆಗೆ ಹಾಜರಾಗುವಂತೆ ಒತ್ತಾಯಿಸಿದ್ದು, ಇದು ಚುನಾವಣಾ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹೇಳಿದರು.
ಈ ರೀತಿಯ ಸಭೆಯಿಂದ ಎಸ್ಐಆರ್ ಕಾರ್ಯದಲ್ಲಿ ತೊಡಗಿದ್ದ ಬಿಎಲ್ಒಗಳ ಸಮಯ ವ್ಯರ್ಥವಾಗಿದ್ದು, ಸಾರ್ವಜನಿಕರು ತಮ್ಮ ಮತದಾರರ ವಿವರಗಳ ಪರಿಶೀಲನೆಗಾಗಿ ಪರದಾಡುವಂತಾಯಿತು. ಆದ್ದರಿಂದ ಅಧಿಕಾರ ದುರುಪಯೋಗ ಮಾಡಿದ ಆರೋಪದ ಮೇಲೆ ರಿಯಾಜ್ ತಮದಡ್ಡಿ ಅವರನ್ನು ತಕ್ಷಣ ಸೇವೆಯಿಂದ ವಜಾಗೊಳಿಸಬೇಕು ಹಾಗೂ ಸಭೆ ಆಯೋಜಿಸಿದ ಅಬ್ದುಲ್ ರಜಾಕ್ ಹೊರ್ತಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಯತ್ನಾಳ ಆಗ್ರಹಿಸಿದರು.
ನಗರದಲ್ಲಿ ಎಸ್ಐಆರ್ ಪ್ರಕ್ರಿಯೆ ಆರಂಭವಾದಾಗಿನಿಂದಲೇ ಕಾಂಗ್ರೆಸ್ ಮುಖಂಡರು ವಿವಿಧ ರೀತಿಯಲ್ಲಿ ಅಡ್ಡಿಪಡಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಯತ್ನಾಳ, ಮತದಾರರ ಪಟ್ಟಿಯಿಂದ ಅಕ್ರಮ ಅಥವಾ ನಕಲಿ ಮತದಾರರ ಹೆಸರುಗಳು ಕೈಬಿಡಲ್ಪಡುವ ಭೀತಿಯಿಂದ ಮೊದಲಿಗೆ ಎಸ್ಐಆರ್ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಿದ್ದರು. ನಂತರ ಹಿಂದೂ ಬಹುಸಂಖ್ಯಾತ ಪ್ರದೇಶಗಳಲ್ಲಿ ಗೂಂಡಾಗಳೊಂದಿಗೆ ತೆರಳಿ ಬಿಎಲ್ಒಗಳ ಕಾರ್ಯಕ್ಕೆ ಅಡ್ಡಿಪಡಿಸಿ, ಸಮಯ ವ್ಯರ್ಥ ಮಾಡುವ ಕೆಲಸ ಮಾಡಿದರು ಎಂದು ದೂರಿದರು.
ಇದೇ ವೇಳೆ ಮುಸ್ಲಿಂ ಪ್ರದೇಶಗಳಲ್ಲಿ ಮಸೀದಿಗಳಲ್ಲೇ ಬಿಎಲ್ಒಗಳನ್ನು ಸೇರಿಸಿ ಸಭೆ ನಡೆಸಿ, ಅಲ್ಲಿಯೇ ಜನರನ್ನು ಗುಂಪು ಗುಂಪಾಗಿ ಸೇರಿಸಿ ಎಸ್ಐಆರ್ ಪ್ರಕ್ರಿಯೆ ನಡೆಸುವ ಮೂಲಕ ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿ ಹೆಸರು ಸೇರಿಸುವ ಕುತಂತ್ರ ನಡೆದಿದೆ ಎಂಬ ಗಂಭೀರ ಆರೋಪವನ್ನೂ ಅವರು ಮಾಡಿದರು.
ನಗರದ ವಿವಿಧ ಭಾಗಗಳ ಮಸೀದಿಗಳಲ್ಲಿಯೂ ಇದೇ ರೀತಿಯ ನಿಯಮಬಾಹಿರ ಸಭೆಗಳು ನಡೆಯುತ್ತಿವೆ ಎಂಬ ದೂರುಗಳು ಈ ಹಿಂದೆ ಬಂದಿದ್ದವು. ಬಬಲೇಶ್ವರ ನಾಕಾ ಸಮೀಪದ ಅಲಿಖಾನ್ ಮಸೀದಿಯಲ್ಲಿ ನಡೆದ ಸಭೆಯನ್ನು ಬಿಜೆಪಿ ಬಿಎಲ್ಒ-2 ಪ್ರತಿನಿಧಿಗಳು ವೀಕ್ಷಣೆ ನಡೆಸಿದ ವೇಳೆ, ಕಾಂಗ್ರೆಸ್ ಮುಖಂಡ ಅಬ್ದುಲ್ ರಜಾಕ್ ಹೊರ್ತಿ ಹಾಗೂ ಬಿಎಲ್ಒ ಸೂಪರ್ವೈಸರ್ ರಿಯಾಜ್ ತಮದಡ್ಡಿ ನೇತೃತ್ವದಲ್ಲಿ ಎಸ್ಐಆರ್ ಸಂಬಂಧಿತ ಸಭೆ ನಡೆಯುತ್ತಿರುವ ದೃಶ್ಯಗಳನ್ನು ವಿಡಿಯೋದಲ್ಲಿ ದಾಖಲಿಸಲಾಗಿದೆ ಎಂದು ಯತ್ನಾಳ ಹೇಳಿದರು.
ಈ ವಿಡಿಯೋ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತ ತಕ್ಷಣ ತನಿಖೆ ನಡೆಸಿ, ಚುನಾವಣಾ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಚುನಾವಣಾ ಪ್ರಕ್ರಿಯೆಯ ಪಾವಿತ್ರ್ಯ ಕಾಪಾಡುವುದು ಅಧಿಕಾರಿಗಳ ಜವಾಬ್ದಾರಿಯಾಗಿದ್ದು, ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತವಾಗಿ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಒತ್ತಾಯಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande