
ಬಾಗಲಕೋಟೆ, 12 ಜುಲೈ (ಹಿ.ಸ.)
ಆ್ಯಂಕರ್ : ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ರಾಜಕೀಯ ವಲಯದಲ್ಲಿ ಚರ್ಚೆಗಳು ಜೋರಾಗಿರುವ ಬೆನ್ನಲ್ಲೇ ಕಾಂಗ್ರೆಸ್ ಭದ್ರಕೋಟೆಯಾಗಿರುವ ಬಾಗಲಕೋಟೆ ಜಿಲ್ಲೆಗೆ ಈ ಬಾರಿ ಸಚಿವ ಸ್ಥಾನ ಯಾರ ಪಾಲಾಗಲಿದೆ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ತೀವ್ರಗೊಂಡಿದೆ.
ಜಿಲ್ಲೆಯ ಕಾಂಗ್ರೆಸ್ ಶಾಸಕರ ಸಂಖ್ಯೆ ಹೆಚ್ಚಿರುವುದರಿಂದ ಹಾಗೂ ಜಿಲ್ಲೆಗೆ ಪ್ರಬಲ ರಾಜಕೀಯ ಪ್ರಾತಿನಿಧ್ಯ ನೀಡಬೇಕೆಂಬ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಲವು ಹಿರಿಯ ಹಾಗೂ ಪ್ರಭಾವಿ ನಾಯಕರ ಹೆಸರುಗಳು ಸಚಿವ ಸ್ಥಾನದ ರೇಸ್ನಲ್ಲಿ ಮುಂಚೂಣಿಯಲ್ಲಿವೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಾಗಲಕೋಟೆ ಜಿಲ್ಲೆಯಲ್ಲಿ ಉತ್ತಮ ಸಾಧನೆ ಮಾಡಿದೆ. ತೇರದಾಳ ಹಾಗೂ ಜಮಖಂಡಿ ಕ್ಷೇತ್ರಗಳನ್ನು ಹೊರತುಪಡಿಸಿ ನಗರ, ಬೀಳಗಿ, ಬಾದಾಮಿ, ಹುನಗುಂದ ಮತ್ತು ಮುಧೋಳ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಬಳಿಕ ನಡೆದ ಬಾಗಲಕೋಟೆ ನಗರ ಉಪಚುನಾವಣೆಯಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಜಿಲ್ಲೆಯಲ್ಲಿ ಪಕ್ಷದ ಹಿಡಿತ ಮತ್ತಷ್ಟು ಬಲಗೊಂಡಿದೆ. ಇದರಿಂದ ಜಿಲ್ಲೆಯ ಜನಪ್ರತಿನಿಧಿಗಳಿಗೆ ಸಚಿವ ಸ್ಥಾನ ನೀಡಬೇಕೆಂಬ ಬೇಡಿಕೆ ಪಕ್ಷದೊಳಗೆಯೇ ಕೇಳಿಬರುತ್ತಿದೆ.
ಸಚಿವ ಸ್ಥಾನಕ್ಕಾಗಿ ಮುಧೋಳ ಶಾಸಕ ಜೆ.ಟಿ. ಪಾಟೀಲ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಪಕ್ಷದ ಸಂಘಟನೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿರುವ ಅವರು ಆಡಳಿತಾತ್ಮಕ ಅನುಭವ ಹೊಂದಿದ್ದು, ಪ್ರಸ್ತುತ ಹಟ್ಟಿ ಚಿನ್ನದ ಗಣಿ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಮುರುಗೇಶ ನಿರಾಣಿ ಅವರನ್ನು ಸೋಲಿಸಿದ ರಾಜಕೀಯ ಸಾಧನೆಯೂ ಅವರ ಪರವಾಗಿ ಪರಿಗಣನೆಯಾಗುತ್ತಿದೆ. ಪಕ್ಷ ನಿಷ್ಠೆ, ಹಿರಿತನ ಹಾಗೂ ಸಂಘಟನಾ ಅನುಭವದ ಆಧಾರದ ಮೇಲೆ ಈ ಬಾರಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಅಭಿಪ್ರಾಯ ಕಾಂಗ್ರೆಸ್ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಇನ್ನೊಂದೆಡೆ ಬಾದಾಮಿ ಶಾಸಕ ವಿಜಯಾನಂದ ಕಾಶಪ್ಪನವರ ಕೂಡ ಸಚಿವ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಮಾಜಿ ಸಚಿವ ದಿವಂಗತ ಎಸ್.ಆರ್. ಕಾಶಪ್ಪನವರ ಅವರ ರಾಜಕೀಯ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿರುವ ಅವರು ಯುವ ನಾಯಕನಾಗಿ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಪಂಚಮಸಾಲಿ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡುವ ನಿರ್ಧಾರವಾದರೆ ಕಾಶಪ್ಪನವರ ಹೆಸರು ಮೊದಲ ಸಾಲಿನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.
ಈ ಹಿಂದೆ ಅಬಕಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಆರ್.ಬಿ. ತಿಮ್ಮಾಪೂರ ಕೂಡ ಮತ್ತೊಮ್ಮೆ ಸಚಿವ ಸಂಪುಟ ಸೇರುವ ಪ್ರಯತ್ನದಲ್ಲಿದ್ದಾರೆ. ಅನುಭವ, ಆಡಳಿತ ಸಾಮರ್ಥ್ಯ ಹಾಗೂ ಹಿರಿಯ ನಾಯಕತ್ವ ಅವರ ಬಲವಾಗಿದ್ದು, ಪಕ್ಷದ ಹೈಕಮಾಂಡ್ ಅವರ ಹೆಸರನ್ನೂ ಗಂಭೀರವಾಗಿ ಪರಿಗಣಿಸುತ್ತಿದೆ ಎನ್ನಲಾಗುತ್ತಿದೆ.
ಇತ್ತೀಚೆಗೆ ವಿಧಾನ ಪರಿಷತ್ ಸದಸ್ಯೆಯಾಗಿ ನಾಮನಿರ್ದೇಶನಗೊಂಡಿರುವ ಹಿರಿಯ ನಾಯಕಿ ಉಮಾಶ್ರೀ ಅವರ ಹೆಸರೂ ಸಚಿವ ಸ್ಥಾನದ ಪಟ್ಟಿಯಲ್ಲಿ ಕೇಳಿಬರುತ್ತಿದೆ. ಈ ಹಿಂದೆ ಸಚಿವೆಯಾಗಿ ಕಾರ್ಯನಿರ್ವಹಿಸಿರುವ ಅನುಭವ ಹೊಂದಿರುವ ಅವರು ಮಹಿಳಾ ಕೋಟಾ ಹಾಗೂ ಮೇಲ್ಮನೆ ಪ್ರಾತಿನಿಧ್ಯದ ಆಧಾರದ ಮೇಲೆ ಸಚಿವ ಸಂಪುಟ ಸೇರುವ ಸಾಧ್ಯತೆ ಇದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಬಾಗಲಕೋಟೆ ಜಿಲ್ಲೆಗೆ ಈ ಹಿಂದೆ ವಿಧಾನ ಪರಿಷತ್ ಸದಸ್ಯರಾಗಿದ್ದ ಎಸ್.ಆರ್. ಪಾಟೀಲ ಅವರು ಸಚಿವರಾಗಿದ್ದಷ್ಟೇ ಅಲ್ಲದೆ ವಿಧಾನ ಪರಿಷತ್ತಿನ ಸಭಾನಾಯಕರಾಗಿಯೂ ಸೇವೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಮೇಲ್ಮನೆ ಸದಸ್ಯರಿಗೆ ಅವಕಾಶ ನೀಡುವ ನಿರ್ಧಾರವಾದರೆ ಉಮಾಶ್ರೀ ಅವರಿಗೆ ಆದ್ಯತೆ ದೊರೆಯುವ ಸಾಧ್ಯತೆಯನ್ನು ತಳ್ಳಿ ಹಾಕಲಾಗುವುದಿಲ್ಲ.
ಇದೇ ವೇಳೆ ಹಾಲುಮತ ಸಮುದಾಯಕ್ಕೆ ಈಗಾಗಲೇ ಸಚಿವ ಸಂಪುಟದಲ್ಲಿ ಭೈರತಿ ಸುರೇಶ್ ಹಾಗೂ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಅವಕಾಶ ದೊರೆತಿರುವ ಕಾರಣ, ಅದೇ ಸಮುದಾಯದ ಮತ್ತೊಬ್ಬರಿಗೆ ಈ ಬಾರಿ ಅವಕಾಶ ಸಿಗುವುದು ಕಷ್ಟ ಎನ್ನುವ ವಿಶ್ಲೇಷಣೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಹೀಗಾಗಿ ಬಾದಾಮಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಹಾಗೂ ಬಾಗಲಕೋಟೆ ಶಾಸಕ ಉಮೇಶ್ ಮೇಟಿ ಅವರ ಸಚಿವ ಸ್ಥಾನದ ಸಾಧ್ಯತೆ ತುಸು ಕಡಿಮೆ ಎನ್ನಲಾಗುತ್ತಿದೆ.
ಒಟ್ಟಾರೆ, ಸಾಮಾಜಿಕ ಸಮೀಕರಣ, ಪ್ರಾದೇಶಿಕ ಪ್ರಾತಿನಿಧ್ಯ, ಪಕ್ಷ ನಿಷ್ಠೆ, ಆಡಳಿತ ಅನುಭವ ಹಾಗೂ ಹೈಕಮಾಂಡ್ನ ರಾಜಕೀಯ ಲೆಕ್ಕಾಚಾರಗಳ ನಡುವೆ ಬಾಗಲಕೋಟೆ ಜಿಲ್ಲೆಯಿಂದ ಯಾರಿಗೆ ಸಚಿವಗಿರಿ ಒಲಿಯಲಿದೆ ಎಂಬ ಪ್ರಶ್ನೆಗೆ ಸಚಿವ ಸಂಪುಟ ವಿಸ್ತರಣೆಯ ದಿನವೇ ಉತ್ತರ ಸಿಗಲಿದೆ. ಜಿಲ್ಲೆಯಲ್ಲಿ ಮಾತ್ರ ರಾಜಕೀಯ ಚಟುವಟಿಕೆಗಳು ಈಗಾಗಲೇ ಗರಿಗೆದರಿದ್ದು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರಲ್ಲಿ ಭಾರೀ ನಿರೀಕ್ಷೆ ಮೂಡಿದೆ ಎಂದು ರಾಜಕೀಯ ವಿಶ್ಲೇಷಕ ಪತ್ರಕರ್ತ ಸಿದ್ದು ಬೀಳಗಿ ಹೇಳಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande