ಬಾಗಲಕೋಟೆ: ವಿಜಯ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘದ ನೂತನ ಆಡಳಿತ ಕಚೇರಿಗೆ ಶಂಕುಸ್ಥಾಪನೆ
ಬಾಗಲಕೋಟೆ, 12 ಜುಲೈ (ಹಿ.ಸ.) ಆ್ಯಂಕರ್ : ಬಾಗಲಕೋಟೆ ನಗರದ ನವನಗರದಲ್ಲಿರುವ ತೇಜಸ್ ಅಂತಾರಾಷ್ಟ್ರೀಯ ಮಹಾವಿದ್ಯಾಲಯದ ಸಮೀಪ ಮುಧೋಳ ಮೂಲದ ವಿಜಯ (ಎಂಆರ್ಎನ್) ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘ ನಿಯಮಿತದ ನೂತನ ಆಡಳಿತ ಕಚೇರಿ ನಿರ್ಮಾಣಕ್ಕೆ ಭವ್ಯ ಭೂಮಿ ಪೂಜೆ ಹಾಗೂ ಶಂಕುಸ್ಥಾಪನಾ ಮಹೋತ್ಸವ ಭಾನುವಾರ ವಿಜೃಂ
ಸಭೆ


ಬಾಗಲಕೋಟೆ, 12 ಜುಲೈ (ಹಿ.ಸ.)

ಆ್ಯಂಕರ್ : ಬಾಗಲಕೋಟೆ ನಗರದ ನವನಗರದಲ್ಲಿರುವ ತೇಜಸ್ ಅಂತಾರಾಷ್ಟ್ರೀಯ ಮಹಾವಿದ್ಯಾಲಯದ ಸಮೀಪ ಮುಧೋಳ ಮೂಲದ ವಿಜಯ (ಎಂಆರ್ಎನ್) ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘ ನಿಯಮಿತದ ನೂತನ ಆಡಳಿತ ಕಚೇರಿ ನಿರ್ಮಾಣಕ್ಕೆ ಭವ್ಯ ಭೂಮಿ ಪೂಜೆ ಹಾಗೂ ಶಂಕುಸ್ಥಾಪನಾ ಮಹೋತ್ಸವ ಭಾನುವಾರ ವಿಜೃಂಭಣೆಯಿಂದ ನೆರವೇರಿತು.

ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಮತ್ತೊಂದು ಮಹತ್ವದ ಮೈಲಿಗಲ್ಲಾಗಿರುವ ಈ ಕಾರ್ಯಕ್ರಮದಲ್ಲಿ ರಾಜಕೀಯ, ಸಹಕಾರಿ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಿ ಸಂಸ್ಥೆಯ ಮುಂದಿನ ಬೆಳವಣಿಗೆಗೆ ಶುಭ ಹಾರೈಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ವೈದಿಕ ಮಂತ್ರೋಚ್ಚಾರಗಳ ನಡುವೆ ಶಾಸ್ತ್ರೋಕ್ತವಾಗಿ ಶಂಕುಸ್ಥಾಪನೆ ನೆರವೇರಿಸಿ, ನೂತನ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಅಧಿಕೃತ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಹಕಾರಿ ಸಂಸ್ಥೆಗಳು ಗ್ರಾಮೀಣ ಹಾಗೂ ನಗರ ಪ್ರದೇಶಗಳ ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಪಾತ್ರವಹಿಸುತ್ತಿದ್ದು, ಪಾರದರ್ಶಕತೆ, ಜನಸೇವೆ ಮತ್ತು ವಿಶ್ವಾಸದ ಮೂಲಕ ಇನ್ನಷ್ಟು ಬಲಿಷ್ಠವಾಗಬೇಕೆಂದು ಹೇಳಿದರು.

ಸಮಾರಂಭದಲ್ಲಿ ಮಾಜಿ ಸಚಿವ ಮುರಗೇಶ ನಿರಾಣಿ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ವಿಧಾನ ಪರಿಷತ್ ಸದಸ್ಯರಾದ ಪಿ.ಎಚ್. ಪೂಜಾರ ಹಾಗೂ ಹಣಮಂತ ಆರ್. ನಿರಾಣಿ ಸೇರಿದಂತೆ ಜಿಲ್ಲೆಯ ಅನೇಕ ಹಿರಿಯ ಮುಖಂಡರು, ಜನಪ್ರತಿನಿಧಿಗಳು, ಉದ್ಯಮಿಗಳು, ಸಹಕಾರಿ ಕ್ಷೇತ್ರದ ಪದಾಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಅತಿಥಿಗಳು ನೂತನ ಆಡಳಿತ ಕಚೇರಿ ನಿರ್ಮಾಣವು ಸಂಸ್ಥೆಯ ಆಡಳಿತ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವುದರೊಂದಿಗೆ ಸದಸ್ಯರಿಗೆ ಗುಣಮಟ್ಟದ ಹಾಗೂ ತ್ವರಿತ ಸೇವೆ ಒದಗಿಸಲು ನೆರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಹಕಾರಿ ಕ್ಷೇತ್ರವು ಸಮಾಜದ ಆರ್ಥಿಕ ಸ್ವಾವಲಂಬನೆಗೆ ಬೆನ್ನೆಲುಬಾಗಿದ್ದು, ಇಂತಹ ಸಂಸ್ಥೆಗಳ ಬೆಳವಣಿಗೆ ರಾಜ್ಯದ ಅಭಿವೃದ್ಧಿಗೂ ಪೂರಕವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಭೂಮಿ ಪೂಜೆ ಹಾಗೂ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸದಸ್ಯರು, ಷೇರುದಾರರು, ಸಾರ್ವಜನಿಕರು ಮತ್ತು ಗಣ್ಯರ ಉಪಸ್ಥಿತಿಯಿಂದ ಸಮಾರಂಭವು ಅತ್ಯಂತ ಯಶಸ್ವಿಯಾಗಿ ನಡೆಯಿತು. ಸಂಸ್ಥೆಯ ಆಡಳಿತ ಮಂಡಳಿಯವರು ಎಲ್ಲ ಗಣ್ಯರನ್ನು ಸನ್ಮಾನಿಸಿ ಅಭಿನಂದಿಸಿದರು.

ನೂತನ ಆಡಳಿತ ಕಚೇರಿ ನಿರ್ಮಾಣದ ಮೂಲಕ ವಿಜಯ (ಎಂಆರ್ಎನ್) ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘವು ತನ್ನ ಸೇವಾ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿ, ಸದಸ್ಯ ಸ್ನೇಹಿ ಆಡಳಿತ ಹಾಗೂ ಆಧುನಿಕ ಬ್ಯಾಂಕಿಂಗ್ ಮಾದರಿಯ ಸೇವೆಗಳನ್ನು ನೀಡುವ ಗುರಿ ಹೊಂದಿದೆ ಎಂದು ಸಂಸ್ಥೆಯ ಪದಾಧಿಕಾರಿಗಳು ತಿಳಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande