ಅನಗತ್ಯ ಆಡಂಬರಕ್ಕೆ ಕಡಿವಾಣ: ಸರಳ ಬದುಕು–ಸಮಾಜಮುಖಿ ಚಿಂತನೆಗೆ ಯಡಹಳ್ಳಿ ಸಭೆಯ ಕರೆ
ಬಾಗಲಕೋಟೆ, 12 ಜುಲೈ (ಹಿ.ಸ.) ಆ್ಯಂಕರ್ : ಸಮಾಜದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಅನಗತ್ಯ ಆಡಂಬರದ ಆಚರಣೆಗಳು, ದುಂದು ವೆಚ್ಚ ಹಾಗೂ ಪ್ರದರ್ಶನದ ಸಂಸ್ಕೃತಿಗೆ ಕಡಿವಾಣ ಹಾಕುವ ಅಗತ್ಯವಿದೆ ಎಂದು ವಿವಿಧ ಕ್ಷೇತ್ರಗಳ ಗಣ್ಯರು ಅಭಿಪ್ರಾಯಪಟ್ಟರು. ಬಾಗಲಕೋಟೆ ಜಿಲ್ಲೆಯ ಬೀಳಗಿ ಸಮೀಪದ ಯಡಹಳ್ಳಿ ಗ್ರ
ಸಭೆ


ಬಾಗಲಕೋಟೆ, 12 ಜುಲೈ (ಹಿ.ಸ.)

ಆ್ಯಂಕರ್ : ಸಮಾಜದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಅನಗತ್ಯ ಆಡಂಬರದ ಆಚರಣೆಗಳು, ದುಂದು ವೆಚ್ಚ ಹಾಗೂ ಪ್ರದರ್ಶನದ ಸಂಸ್ಕೃತಿಗೆ ಕಡಿವಾಣ ಹಾಕುವ ಅಗತ್ಯವಿದೆ ಎಂದು ವಿವಿಧ ಕ್ಷೇತ್ರಗಳ ಗಣ್ಯರು ಅಭಿಪ್ರಾಯಪಟ್ಟರು. ಬಾಗಲಕೋಟೆ ಜಿಲ್ಲೆಯ ಬೀಳಗಿ ಸಮೀಪದ ಯಡಹಳ್ಳಿ ಗ್ರಾಮದಲ್ಲಿ ಆಯೋಜಿಸಲಾದ ಅನಗತ್ಯ ಆಡಂಬರ ಆಚರಣೆಗಳ ಕುರಿತ ಚಿಂತನ ಸಭೆಯಲ್ಲಿ ಮಾತನಾಡಿದ ವಕ್ತಾರರು, ಸರಳ ಜೀವನಶೈಲಿ ಮತ್ತು ಸಾಮಾಜಿಕ ಜವಾಬ್ದಾರಿಯತ್ತ ಜನರು ಮರಳಬೇಕೆಂದು ಕರೆ ನೀಡಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಸಹಕಾರಿ ಧುರೀಣ ಹಾಗೂ ಪರಿಸರ ತಜ್ಞ ಡಾ. ಎಂ.ಆರ್. ದೇಸಾಯಿ, ದೇಶ ಮತ್ತು ಸಮಾಜದ ಕುರಿತು ನಾಗರಿಕರ ಬದ್ಧತೆ ಇತ್ತೀಚಿನ ವರ್ಷಗಳಲ್ಲಿ ಕುಗ್ಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು. ಹಿಂದೆ ರಾಷ್ಟ್ರೀಯ ಸಂಕಷ್ಟದ ಸಂದರ್ಭಗಳಲ್ಲಿ ದೇಶದ ಜನತೆ ಸರ್ಕಾರದ ಕರೆಗಳಿಗೆ ಸ್ಪಂದಿಸಿ ತ್ಯಾಗ ಮತ್ತು ಶಿಸ್ತು ಪ್ರದರ್ಶಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಹಿತಾಸಕ್ತಿಗಿಂತ ವೈಯಕ್ತಿಕ ಅನುಕೂಲಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಮದುವೆ ಸೇರಿದಂತೆ ವಿವಿಧ ಕುಟುಂಬ ಕಾರ್ಯಕ್ರಮಗಳಲ್ಲಿ ಅತಿಯಾದ ಖರ್ಚು ಹಾಗೂ ವೈಭವ ಪ್ರದರ್ಶನ ಹೆಚ್ಚಾಗುತ್ತಿರುವುದರಿಂದ ಸಮಾಜದ ಮೇಲೆ ಆರ್ಥಿಕ ಹಾಗೂ ಪರಿಸರದ ಭಾರ ಹೆಚ್ಚುತ್ತಿದೆ ಎಂದು ಅವರು ಹೇಳಿದರು. ಭಾರೀ ತೂಕದ ಮದುವೆ ಆಮಂತ್ರಣ ಪತ್ರಿಕೆಗಳ ಮುದ್ರಣದಿಂದ ಸಾವಿರಾರು ಮರಗಳು ನಾಶವಾಗುತ್ತಿವೆ. ಇಂತಹ ಸಂದರ್ಭಗಳಲ್ಲಿ ಮೊಬೈಲ್ ಕರೆ ಅಥವಾ ವಾಟ್ಸಾಪ್ ಸಂದೇಶದ ಮೂಲಕ ಆಹ್ವಾನ ನೀಡುವುದರಿಂದ ಹಣ, ಸಮಯ ಮತ್ತು ನೈಸರ್ಗಿಕ ಸಂಪನ್ಮೂಲಗಳ ಉಳಿತಾಯ ಸಾಧ್ಯ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಮಹಾಂತೇಶ ಬಿರಾದಾರ, ಮದುವೆ, ನಿಶ್ಚಿತಾರ್ಥ, ಸೀಮಂತ, ಜನ್ಮದಿನ, ಮದುವೆ ವಾರ್ಷಿಕೋತ್ಸವ ಸೇರಿದಂತೆ ಅನೇಕ ಕಾರ್ಯಕ್ರಮಗಳು ಇಂದು ಅನಗತ್ಯ ಆಡಂಬರದ ಸ್ಪರ್ಧೆಯಾಗಿ ಮಾರ್ಪಟ್ಟಿವೆ. ಸಾಲ ಮಾಡಿಯಾದರೂ ವೈಭವದಿಂದ ಕಾರ್ಯಕ್ರಮ ನಡೆಸಬೇಕೆಂಬ ಮನೋಭಾವ ಸಮಾಜಕ್ಕೆ ದೊಡ್ಡ ಪಿಡುಗಾಗಿ ಪರಿಣಮಿಸಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸಹಕಾರಿ ಧುರೀಣ ಎಂ.ಆರ್. ಪಾಟೀಲ ಬಳ್ಳೊಳ್ಳಿ ಮಾತನಾಡಿ, ನಿಶ್ಚಿತಾರ್ಥಕ್ಕೂ ಸಾವಿರಾರು ಜನರನ್ನು ಆಹ್ವಾನಿಸುವ ಪದ್ಧತಿ ಹೆಚ್ಚುತ್ತಿರುವುದು ಆತಂಕಕಾರಿ ಎಂದರು.

ಸಮಾಜದಲ್ಲಿ ಬದಲಾವಣೆ ತರಬೇಕಾದರೆ ಪ್ರತಿಯೊಬ್ಬರೂ ಸರಳ ಆಚರಣೆಗೆ ಮುಂದಾಗಬೇಕೆಂದು ಸಲಹೆ ನೀಡಿದರು.

ದಯಾನಂದ ಪಾಟೀಲ ಮುಧೋಳ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿರುವ ಸೀಮಂತ ಸೇರಿದಂತೆ ಅನೇಕ ಆಚರಣೆಗಳಿಗೆ ವೈಜ್ಞಾನಿಕ ಮತ್ತು ಭಾವನಾತ್ಮಕ ಹಿನ್ನೆಲೆ ಇದೆ. ಆದರೆ ಅವುಗಳನ್ನು ವೈಭವದ ಪ್ರದರ್ಶನವಾಗಿ ರೂಪಿಸುವುದು ಸಂಸ್ಕೃತಿಯ ಮೂಲ ಉದ್ದೇಶವನ್ನೇ ಹಾಳು ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟರು.

ಎಸ್.ಟಿ. ಪಾಟೀಲ ಯಡಹಳ್ಳಿ ಮಾತನಾಡಿ, ಯಡಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಿಶ್ಚಿತಾರ್ಥ, ಶವಸಂಸ್ಕಾರ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಸರಳವಾಗಿ ನಡೆಸುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಕುಟುಂಬ ಸದಸ್ಯರ ಸಮ್ಮುಖದಲ್ಲಿ ಸರಳ ಕಾರ್ಯಕ್ರಮಗಳನ್ನು ನಡೆಸುವ ಪದ್ಧತಿಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದು ಹೇಳಿದರು.

ಸಭೆಯಲ್ಲಿ ರಾಜ್ಯ ಬಾರ್ ಕೌನ್ಸಿಲ್ ಮಾಜಿ ಅಧ್ಯಕ್ಷ ಶಂಕರಗೌಡ ಪಾಟೀಲ, ನ್ಯಾಯವಾದಿಗಳಾದ ಶ್ರೀಕಾಂತ ಶಿರಾಡೋಣ, ಎನ್.ಎಸ್. ಲೋಣಿ, ಶರಶ್ಚಂದ್ರ ಪಾಟೀಲ, ಲೋಕಾಯುಕ್ತ ಡಿಎಸ್ಪಿ ಬಸವರಾಜ ಯಲಿಗಾರ, ಸುರೇಶ ದೇಸಾಯಿ, ಅದೃಶ್ಯಪ್ಪ ದೇಸಾಯಿ, ಪ್ರಕಾಶ ಪರನಾಕರ ಸೇರಿದಂತೆ ಅನೇಕ ಗಣ್ಯರು ಮಾತನಾಡಿ, ದುಂದು ವೆಚ್ಚ, ಅನಗತ್ಯ ಆಚರಣೆಗಳು, ವಿವಾಹ ವಿಚ್ಛೇದನಗಳ ಹೆಚ್ಚಳ ಹಾಗೂ ವೃದ್ಧಾಪ್ಯದಲ್ಲಿ ಪೋಷಕರ ನಿರ್ಲಕ್ಷ್ಯ ಮುಂತಾದ ಸಾಮಾಜಿಕ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಿದರು.

ಕೊಲೂರ ಗ್ರಾಮದ ಶಿವಪ್ಪ ಸಂಗಪ್ಪ ತಿಪರೆಡ್ಡಿ ಹಾಗೂ ಬರಟಗಿ ಗ್ರಾಮದ ಗುರುಪಾದಗೌಡ ದಾಶ್ಯಾಳ ತಮ್ಮ ಕುಟುಂಬದ ಮುಂದಿನ ಎಲ್ಲಾ ಕಾರ್ಯಕ್ರಮಗಳನ್ನು ಸರಳವಾಗಿ ನಡೆಸುವುದಾಗಿ ಸಭೆಯಲ್ಲಿ ಘೋಷಿಸಿದರು.

ಸಭೆಯಲ್ಲಿ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ, ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ, ದೇವಕಾಂತ ಬಿಜ್ಜರಗಿ, ಶರಣು ಸಬರದ, ಎಚ್.ಎಸ್. ಕೋರಡ್ಡಿ, ಮಲ್ಲಪ್ಪ ಕಾಳಗಿ, ಮಲ್ಲಿಕಾರ್ಜುನ ಬಾರಡ್ಡಿ ಸೇರಿದಂತೆ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ವಿವಿಧ ಸಮುದಾಯಗಳ ಮುಖಂಡರು ಭಾಗವಹಿಸಿದ್ದರು.

ಸಭೆಯ ಅಂತ್ಯದಲ್ಲಿ, ತಮ್ಮ ತಮ್ಮ ಸಮುದಾಯಗಳಲ್ಲಿ ಹಾಗೂ ಗ್ರಾಮಗಳಲ್ಲಿ ಸರಳ ವಿವಾಹ, ಸರಳ ಕುಟುಂಬ ಕಾರ್ಯಕ್ರಮಗಳು ಮತ್ತು ಅನಗತ್ಯ ಆಡಂಬರಕ್ಕೆ ಕಡಿವಾಣ ಹಾಕುವ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಂಕಲ್ಪವನ್ನು ಸಭಿಕರು ಕೈಗೊಂಡರು

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande