
ಹಾವೇರಿ, 12 ಜುಲೈ (ಹಿ.ಸ.):
ಆ್ಯಂಕರ್:
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ಜಂಟಿಯಾಗಿ ಶ್ರಮಿಸುತ್ತಿದ್ದು, ಹಿರಿಯರ ವಯಸ್ಸಿನ ಸಮಸ್ಯೆಗಳಿಗೆ ಆಸರೆಯಾಗಲು ಸಮಾಜ ಮತ್ತು ಸರ್ಕಾರಗಳು ಸದಾ ಬದ್ಧವಾಗಿವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಇಂದು ಹಾವೇರಿಯ ಜಿ.ಹೆಚ್ ಕಾಲೇಜಿನ ಸಭಾಂಗಣದಲ್ಲಿ ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಕೇಂದ್ರ ಸರ್ಕಾರದ ರಾಷ್ಟ್ರೀಯ ವಯೋಶ್ರೀ ಯೋಜನೆ ಅಡಿಯಲ್ಲಿ ಹಿರಿಯ ನಾಗರಿಕರಿಗೆ ಉಚಿತ ದೈಹಿಕ ಸಲಕರಣೆಗಳು ಮತ್ತು ಸಹಾಯಕ ಸಾಧನಗಳ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನನ್ನ ಹೆತ್ತ ತಂದೆ-ತಾಯಂದಿರನ್ನು ಒಂದೇ ವೇದಿಕೆಯಲ್ಲಿ ಒಟ್ಟಿಗೆ ನೋಡಿದಷ್ಟು ಸಂತೋಷವಾಗುತ್ತಿದೆ. ಹಿರಿಯ ನಾಗರಿಕರಿಗೆ ನೆರವಾಗಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಪಿಂಚಣಿ ಯೋಜನೆಯನ್ನು ಅನುಷ್ಠಾನಗೊಳಿಸಿವೆ. ಪ್ರಸ್ತುತ ಜಿಲ್ಲೆಯಲ್ಲಿ ಸುಮಾರು 1,40,000 ಕ್ಕೂ ಹೆಚ್ಚು ಜನ ಹಿರಿಯ ನಾಗರಿಕರು ಈ ಪಿಂಚಣಿ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಸರಿಸುಮಾರು 1,60,000 ರಷ್ಟು ಹಿರಿಯ ನಾಗರಿಕರು ಹಾಗೂ 39,000 ದಷ್ಟು ವಿಕಲಚೇತನರು ಇದ್ದಾರೆ. ಇವರೆಲ್ಲರೂ ನಮ್ಮ ಸಮಾಜ ಮತ್ತು ಸರ್ಕಾರದ ಅವಿಭಾಜ್ಯ ಅಂಗವಾಗಿದ್ದಾರೆ ಎಂದು ಅವರು ತಿಳಿಸಿದರು.
*ಆಸರೆಯಾದ ವ್ಯವಸ್ಥೆ:*
ಹಿರಿಯ ನಾಗರಿಕರಿಗೆ ವಯೋಸಹಜವಾಗಿ ಎದುರಾಗುವ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಆಸರೆಯಾಗಲು ಈ ರೀತಿಯ ಉಚಿತ ಸಲಕರಣೆಗಳ ವಿತರಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಮಾಜ ಮತ್ತು ಸರ್ಕಾರಗಳು ನಿಮ್ಮ ಜೊತೆಗಿದ್ದಾಗ ಜೀವನದ ಹಾದಿ ಸುಲಭವಾಗುತ್ತದೆ ಎಂದು ಬೊಮ್ಮಾಯಿ ಹಿರಿಯರಿಗೆ ಧೈರ್ಯ ತುಂಬಿದರು.
ನಮ್ಮ ದೇಶದ ಸಂಸ್ಕೃತಿ ಮತ್ತು ಸಂಸ್ಕಾರದಲ್ಲಿ ಹಿರಿಯರನ್ನು ಗೌರವಿಸುವುದು ಹಾಗೂ ತಂದೆ-ತಾಯಿಯರನ್ನು ಪ್ರೀತಿಯಿಂದ ನೋಡಿಕೊಳ್ಳುವುದು ಅತ್ಯಂತ ಪ್ರಮುಖವಾಗಿದೆ,ಪಾಶ್ಚಾತ್ಯ ದೇಶಗಳಲ್ಲಿ ಕೌಟುಂಬಿಕ ವ್ಯವಸ್ಥೆ ಭಿನ್ನ. ಮಕ್ಕಳನ್ನು ದೊಡ್ಡವರನ್ನಾಗಿ ಮಾಡುವಾಗ ಪೋಷಕರು ಯಾವುದೇ ರೀತಿಯ ಸ್ವಾರ್ಥವಿಲ್ಲದೆ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡುತ್ತಾರೆ. ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಕ್ಕಳು ಚೆನ್ನಾಗಿ ಓದಬೇಕು, ಒಳ್ಳೆಯ ನೌಕರಿ ಹಿಡಿಯಬೇಕು ಮತ್ತು ಸುಖವಾಗಿರಬೇಕು ಎಂಬ ಆಸೆ ಇರುತ್ತದೆ. ಆದರೆ, ವಯಸ್ಸಾದ ಮೇಲೆ ಅದೇ ಪೋಷಕರು ಮಕ್ಕಳ ಪಾಲಿಗೆ ಮಗುವಿನಂತಾಗುತ್ತಾರೆ, ಎಂದು ಅವರು ನುಡಿದರು.
Child is the father of man (ಮಗುವು ಮಾನವನ ತಂದೆ) ಎಂಬ ಇಂಗ್ಲಿಷ್ ಗಾದೆಯನ್ನು ಉಲ್ಲೇಖಿಸಿದ ಅವರು, ವಯಸ್ಸಾದ ಬಳಿಕ ಪ್ರತಿಯೊಬ್ಬರೂ ಮಕ್ಕಳಲ್ಲಿ ಕೌಟುಂಬಿಕ ಪ್ರೀತಿ ಮತ್ತು ಕಾಳಜಿಯನ್ನು ನಿರೀಕ್ಷಿಸುತ್ತಾರೆ. ಪಾಶ್ಚಾತ್ಯ ದೇಶಗಳಲ್ಲಿ 18 ವರ್ಷ ತುಂಬಿದ ನಂತರ ಮಕ್ಕಳು ತಮ್ಮದೇ ದಾರಿ ನೋಡಿಕೊಳ್ಳುತ್ತಾರೆ. ಅದೇ ರೀತಿ ಪೋಷಕರಿಗೆ ವಯಸ್ಸಾದಾಗ ಅಲ್ಲಿ ಯಾರೂ ನೋಡಿಕೊಳ್ಳುವುದಿಲ್ಲ. ಅಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚು. ಆದರೆ ಭಾರತದಲ್ಲಿ ಕುಟುಂಬ ಕೇಂದ್ರಿತವಾದ ಸಂಸ್ಕಾರವಿರುವುದರಿಂದ ಪ್ರತಿಯೊಬ್ಬ ಸದಸ್ಯರ ನಡುವೆ ಅವಿನಾಭಾವ ಹಾಗೂ ಗುಣಾತ್ಮಕವಾದ ಸಂಬಂಧವಿರುತ್ತದೆ, ಎಂದು ತಿಳಿಸಿದರು.
*ವೃದ್ಧಾಶ್ರಮ ಉದ್ಘಾಟನೆಗೆ ನಿರಾಕರಣೆ*
ತಮ್ಮ ವೈಯಕ್ತಿಕ ಜೀವನದ ಘಟನೆಯೊಂದನ್ನು ನೆನಪಿಸಿಕೊಂಡ ಬೊಮ್ಮಾಯಿ ಬೆಂಗಳೂರಿನಲ್ಲಿ ನನ್ನ ಸ್ನೇಹಿತರೊಬ್ಬರು ಸುಮಾರು 25-30 ಎಕರೆ ಜಾಗದಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ವೃದ್ಧಾಶ್ರಮವೊಂದನ್ನು ನಿರ್ಮಿಸಿ, ಅದರ ಉದ್ಘಾಟನೆಗೆ ನನ್ನನ್ನು ಆಹ್ವಾನಿಸಿದ್ದರು. ಆದರೆ ನಾನು ಅಲ್ಲಿಗೆ ಹೋಗಲು ನಿರಾಕರಿಸಿದೆ. ಯಾವುದೇ ತಂದೆ-ತಾಯಿಯರನ್ನು ಅವರ ಮಕ್ಕಳು ವೃದ್ಧಾಶ್ರಮಕ್ಕೆ ಸೇರಿಸಬಾರದು. ಎಷ್ಟೇ ಆಧುನಿಕ ಸೌಕರ್ಯಗಳಿದ್ದರೂ ಅಂತಹ ವೃದ್ಧಾಶ್ರಮವನ್ನು ಉದ್ಘಾಟಿಸಲು ನನ್ನ ಮನಸ್ಸು ಒಪ್ಪುವುದಿಲ್ಲ ಎಂದು ಅವರಿಗೆ ನೇರವಾಗಿಯೇ ಹೇಳಿದ್ದೆ, ಎಂದು ಘಟನೆಯನ್ನು ಹಂಚಿಕೊಂಡರು. ಮಕ್ಕಳಲ್ಲಿ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಬೆಳೆಸಿದರೆ, ಅವರು ಎಂದಿಗೂ ಹೆತ್ತವರನ್ನು ಕೈಬಿಡುವುದಿಲ್ಲ. ಜಗತ್ತಿನಲ್ಲಿ ಮಾನವೀಯತೆಯನ್ನು ನೋಡಬೇಕಾದರೆ ಅದು ಭಾರತ ದೇಶದಲ್ಲೇ ಸಾಧ್ಯ ಎಂದು ಅವರು ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
*ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಬದ್ಧ*
ಸಮಾಜದಲ್ಲಿ ನಾಗರಿಕತೆ ಬೆಳೆದಂತೆಲ್ಲಾ ಮಾನವೀಯ ಮೌಲ್ಯಗಳು ಹಾಗೂ ನಮ್ಮ ಸಾಂಪ್ರದಾಯಿಕ ಸಂಸ್ಕೃತಿಗಳು ನಶಿಸುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ತಾಂತ್ರಿಕತೆ ಮತ್ತು ಆಧುನಿಕ ಸೌಲಭ್ಯಗಳ ಸದ್ಬಳಕೆ ಎಷ್ಟು ಮುಖ್ಯವೋ, ಅಷ್ಟೇ ಮುಖ್ಯವಾಗಿ ಹಿರಿಯರ ಬಗ್ಗೆ ಪ್ರೀತಿ, ವಿಶ್ವಾಸ ಹಾಗೂ ಗೌರವವನ್ನು ತೋರ್ಪಡಿಸುವುದು ಇಂದಿನ ಪೀಳಿಗೆಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಸಮಾಜದ ಪ್ರತಿಯೊಂದು ವರ್ಗದ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ಮಗು ತಾಯಿಯ ಗರ್ಭದಲ್ಲಿರುವ ಸಮಯದಿಂದ ಹಿಡಿದು, ವೃದ್ಧಾಪ್ಯದವರೆಗೂ ಹಂತ-ಹಂತವಾಗಿ ದೇಶದ ಪ್ರಜೆಗಳಿಗೆ ರಕ್ಷಣೆ ಹಾಗೂ ಸೌಲಭ್ಯಗಳನ್ನು ಒದಗಿಸಲು ಹತ್ತು-ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇದರಲ್ಲಿ 'ಮಾತೃ ವಂದನಾ ಯೋಜನೆ', 'ಸ್ತ್ರೀ ಸಬಲೀಕರಣ ಯೋಜನೆ', ಹೆಣ್ಣು ಮಕ್ಕಳ ಶಿಕ್ಷಣಕ್ಕೆ ವಿಶೇಷ ಉತ್ತೇಜನ ನೀಡುವ ಯೋಜನೆಗಳು ಪ್ರಮುಖವಾಗಿವೆ. ಅದೇ ರೀತಿ, ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ಜಾರಿಗೆ ತಂದಿರುವ 'ರಾಷ್ಟ್ರೀಯ ವಯೋಶ್ರೀ ಯೋಜನೆ'ಯು ಅತ್ಯಂತ ಮಹತ್ವದ್ದಾಗಿದ್ದು, ಇದು ಕೇವಲ ಕಚೇರಿಯ ಕಡತಗಳಲ್ಲಿ ಸೀಮಿತವಾಗಿರದೆ, ಪ್ರಧಾನಿಯವರ ಅಂತಃಕರಣದಿಂದ ಮೂಡಿಬಂದಿರುವ ಜನಸ್ನೇಹಿ ಯೋಜನೆಯಾಗಿದೆ. ವಯೋಸಹಜ ದೌರ್ಬಲ್ಯ ಎದುರಿಸುತ್ತಿರುವ ಹಿರಿಯರಿಗೆ ಈ ಸಹಾಯಕ ಸಾಧನಗಳು ಆಸರೆಯಾಗಲಿವೆ ಎಂದು ಅವರು ಆಶಿಸಿದರು.
*ಅರ್ಹರಿಗೆ ಸೌಲಭ್ಯ*
ಜಿಲ್ಲೆಯ ಸುಮಾರು 1,364 ಹಿರಿಯ ನಾಗರಿಕರಿಗೆ ಅವರ ದೈನಂದಿನ ಜೀವನಕ್ಕೆ ಅಗತ್ಯವಿರುವ ವಿವಿಧ ಸಹಾಯಕ ಸಾಧನ ಹಾಗೂ ಸಲಕರಣೆಗಳನ್ನು ಈ ಯೋಜನೆಯಡಿ ವಿತರಿಸಲಾಗುತ್ತಿದೆ. ಈ ಮಹತ್ವಾಕಾಂಕ್ಷಿ ಕಾರ್ಯಕ್ರಮಕ್ಕಾಗಿ ಕೇಂದ್ರ ಸರ್ಕಾರವು ಸುಮಾರು 80 ಲಕ್ಷ ರೂಪಾಯಿಗಳ ವೆಚ್ಚವನ್ನು ಭರಿಸಿದೆ. ಮುಂಬರುವ ದಿನಗಳಲ್ಲಿ ಜಿಲ್ಲೆಯ ಇನ್ನುಳಿದ ಸುಮಾರು 2,000ಕ್ಕೂ ಹೆಚ್ಚು ಅರ್ಹ ಹಿರಿಯ ನಾಗರಿಕರಿಗೆ ಈ ಸೌಲಭ್ಯವನ್ನು ವಿಸ್ತರಿಸಲು ಅಂದಾಜು 1.5 ಕೋಟಿ ರೂಪಾಯಿಗಳ ಅಗತ್ಯವಿದ್ದು, ಅದನ್ನೂ ಸಹ ಒದಗಿಸಲು ಸರ್ಕಾರ ಬದ್ಧವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಹಿರಿಯ ನಾಗರಿಕರನ್ನು ತಮ್ಮ ಸ್ವಂತ ಸಹೋದರರಂತೆ ಭಾವಿಸಿ ಈ ಸೌಲಭ್ಯಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಸಾಧನಗಳನ್ನು ತಯಾರಿಸುವ ಸಂಸ್ಥೆಗಳು ಹಿರಿಯರ ವಯಸ್ಸು ಮತ್ತು ಅಗತ್ಯಕ್ಕೆ ತಕ್ಕಂತೆ ಗುಣಮಟ್ಟದ ಸಂಶೋಧನೆ ನಡೆಸಿ, ಅವರ ಮುಖದಲ್ಲಿ ಮುಗುಳ್ನಗೆ ಮೂಡಿಸುವಂತಹ ಸುಲಭ ಹಾಗೂ ಉಪಯುಕ್ತ ಸಾಧನಗಳನ್ನು ಒದಗಿಸಬೇಕು ಎಂದರು.
*ಕೇಂದ್ರ ಸರ್ಕಾರದ ಯೋಜನೆಗಳಿಗೆ ಶ್ಲಾಘನೆ*
ಇದೇ ಸಂದರ್ಭದಲ್ಲಿ ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ಜಾರಿಗೆ ತಂದಿರುವ ಇಂತಹ ಉಪಯುಕ್ತ ಯೋಜನೆಗಳಿಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಬೊಮ್ಮಾಯಿ ಅವರು ಧನ್ಯವಾದಗಳನ್ನು ಅರ್ಪಿಸಿದರು. ಅಲ್ಲದೆ, ಯಾವುದೇ ಸರ್ಕಾರ ಇರಲಿ, ಅದು ಜನರ ಒಳಿತಿಗಾಗಿ ಮಾಡುವ ಒಳ್ಳೆಯ ಕೆಲಸಗಳಿಗೆ ನಮ್ಮ ಸಂಪೂರ್ಣ ಬೆಂಬಲ ಇರುತ್ತದೆ. ನಾವೆಲ್ಲರೂ ಒಟ್ಟಾಗಿ ಸಮಾಜದ ಅಭಿವೃದ್ಧಿಗೆ ಶ್ರಮಿಸೋಣ, ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ವಿಧಾನ ಸಭೆಯ ಸಭಾಧ್ಯಕ್ಷರಾದ ರುದ್ರಪ್ಪ ಲಮಾಣಿ, ಮಾಜಿ ಶಾಸಕರಾದ ಎಸ್.ಆರ್ ಪಾಟೀಲ್, ಮುಖಂಡರಾದ ಎಂ.ಎಂ.ಮೈದೂರ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳಾದ ಶ್ರೀಮತಿ ಆಶು ನದಾಫ, ಆಲಿಮ್ಕೊದ ಮ್ಯಾನೇಜರ ಶಿವಕುಮಾರ, ಕುಮಾರಿ ಕೃಷ್ಣಪ್ರಭಾ ಸೇರಿದಂತೆ ಹಲವಾರು ಪ್ರಮುಖರು ಹಾಗೂ ಹಿರಿಯರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.