
ವಿಜಯಪುರ, 12 ಜುಲೈ (ಹಿ.ಸ.)
ಆ್ಯಂಕರ್ : ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ ಎಸ್ ಎಸ) ನಡೆಸುವ ಪಥಸಂಚಲನವು ಶಿಸ್ತು, ಸೇವಾ ಮನೋಭಾವ ಹಾಗೂ ದೇಶಭಕ್ತಿಯ ಪ್ರತೀಕವಾಗಿದ್ದು, ಅದಕ್ಕೆ ಅನಗತ್ಯ ಅನುಮತಿ ಹಾಗೂ ನೋಂದಣಿ ನಿಯಮಗಳನ್ನು ಜಾರಿಗೊಳಿಸುವ ಮೂಲಕ ರಾಜ್ಯ ಸರ್ಕಾರ ಬೇಜವಾಬ್ದಾರಿತನದಿಂದ ನಡೆದುಕೊಳ್ಳುತ್ತಿದೆ ಎಂದು ಸಹಕಾರ ಭಾರತಿ ವಿಜಯಪುರ ಜಿಲ್ಲಾ ಅಧ್ಯಕ್ಷ ಶ್ರೀಹರ್ಷಗೌಡ ಪಾಟೀಲ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಆರ್ ಎಸ್ ಎಸ್ ಪಥಸಂಚಲನವು ಕೇವಲ ಮೆರವಣಿಗೆಯಲ್ಲ; ಅದು ಶಿಸ್ತು, ರಾಷ್ಟ್ರೀಯತೆ ಹಾಗೂ ಸಮಾಜ ಸೇವೆಯ ಮೌಲ್ಯಗಳನ್ನು ಯುವಜನತೆಗೆ ಬೋಧಿಸುವ ರಾಷ್ಟ್ರ ನಿರ್ಮಾಣದ ಕಾರ್ಯವಾಗಿದೆ ಎಂದು ಹೇಳಿದ್ದಾರೆ. ಇಂತಹ ಸಂಘಟನೆಯ ಚಟುವಟಿಕೆಗಳಿಗೆ ಸರ್ಕಾರ ಅನಗತ್ಯ ಅನುಮತಿ ಹಾಗೂ ನೋಂದಣಿ ನಿಯಮಗಳನ್ನು ಮುಂದಿಡುತ್ತಿರುವುದು ಆಶ್ಚರ್ಯಕರ ಬೆಳವಣಿಗೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪಥಸಂಚಲನದಲ್ಲಿ ಶಿಸ್ತುಬದ್ಧ ಮೆರವಣಿಗೆ, ದೇಶಾಭಿಮಾನ ಬೆಳೆಸುವ ಬೌದ್ಧಿಕ ಕಾರ್ಯಕ್ರಮಗಳು ಹಾಗೂ ರಾಷ್ಟ್ರಸೇವೆಯ ಸಂದೇಶಗಳನ್ನು ನೀಡಲಾಗುತ್ತದೆ. ಯುವಜನತೆಯಲ್ಲಿ ದೇಶದ ಬಗ್ಗೆ ಬದ್ಧತೆ, ಸೇವಾ ಮನೋಭಾವ ಹಾಗೂ ರಾಷ್ಟ್ರ ನಿರ್ಮಾಣದ ಸಂಕಲ್ಪವನ್ನು ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮಗಳು ನಡೆಯುತ್ತವೆ. ಇಂತಹ ಸಕಾರಾತ್ಮಕ ಕಾರ್ಯಕ್ಕೂ ಸರ್ಕಾರದ ಅನುಮತಿ ಕಡ್ಡಾಯ ಎನ್ನುವುದು ಎಷ್ಟರ ಮಟ್ಟಿಗೆ ಸಮಂಜಸ ಎಂಬ ಪ್ರಶ್ನೆಯನ್ನು ಶ್ರೀಹರ್ಷಗೌಡ ಪಾಟೀಲ ಎತ್ತಿದ್ದಾರೆ.
ರಾಷ್ಟ್ರ ನಿರ್ಮಾಣದಲ್ಲಿ ಪಾಲ್ಗೊಳ್ಳುವುದು ಪ್ರತಿಯೊಬ್ಬ ಭಾರತೀಯನ ಮೂಲಭೂತ ಕರ್ತವ್ಯವಾಗಿದೆ. ದೇಶದ ಅಭಿವೃದ್ಧಿಗಾಗಿ ಶ್ರಮಿಸುವುದು ಸಂವಿಧಾನವೇ ಪ್ರತಿಪಾದಿಸಿರುವ ಜವಾಬ್ದಾರಿಯಾಗಿದ್ದು, ಆರ್ಎಸ್ಎಸ್ ಇದೇ ಉದ್ದೇಶದೊಂದಿಗೆ ಹಲವು ದಶಕಗಳಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ದೇಶದ ವಿವಿಧ ಭಾಗಗಳಲ್ಲಿ ನಡೆದ ಆರ್ಎಸ್ಎಸ್ ಪಥಸಂಚಲನಗಳಿಗೆ ವಿವಿಧ ಸಮುದಾಯಗಳ ಜನರು, ಅದರಲ್ಲೂ ಮುಸ್ಲಿಂ ಬಾಂಧವರೂ ಸಹ ಪುಷ್ಪವೃಷ್ಟಿ ಮಾಡುವ ಮೂಲಕ ಸ್ವಾಗತಿಸಿರುವ ಉದಾಹರಣೆಗಳಿವೆ ಎಂದು ಉಲ್ಲೇಖಿಸಿದ ಅವರು, ಇಂತಹ ಸಂಘಟನೆಯ ಕುರಿತು ಅನಗತ್ಯ ಅನುಮಾನಗಳನ್ನು ಸೃಷ್ಟಿಸುವ ಪ್ರಯತ್ನ ಸರಿಯಲ್ಲ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವುದು ಜನರನ್ನು ಕಳವಳಗೊಳಿಸಿದೆ. ಅಪರಾಧ ಪ್ರಕರಣಗಳ ನಿಯಂತ್ರಣ, ಸಾರ್ವಜನಿಕರ ಸುರಕ್ಷತೆ ಹಾಗೂ ಶಾಂತಿ ಕಾಪಾಡುವತ್ತ ಸರ್ಕಾರ ಹೆಚ್ಚಿನ ಗಮನ ಹರಿಸಬೇಕಾದ ಸಂದರ್ಭದಲ್ಲಿ, ಆರ್ಎಸ್ಎಸ್ ಪಥಸಂಚಲನದಂತಹ ವಿಷಯಗಳನ್ನು ಮುನ್ನೆಲೆಗೆ ತರುವುದು ಸರ್ಕಾರದ ಆದ್ಯತೆಯ ವೈಫಲ್ಯವನ್ನು ತೋರಿಸುತ್ತದೆ ಎಂದು ಅವರು ಆರೋಪಿಸಿದ್ದಾರೆ.
ವಿಶೇಷವಾಗಿ ಗೃಹ ಸಚಿವರು ಪಥಸಂಚಲನಕ್ಕೆ ಸಂಬಂಧಿಸಿದಂತೆ ಅನಗತ್ಯ ವಿಚಾರಗಳನ್ನು ಪ್ರಸ್ತಾಪಿಸುವ ಬದಲು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸುಧಾರಣೆ, ಅಪರಾಧ ನಿಯಂತ್ರಣ ಹಾಗೂ ಸಾರ್ವಜನಿಕರ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸಂಘ ಪರಿವಾರವು ರಾಷ್ಟ್ರ ಸೇವೆ, ಸಾಮಾಜಿಕ ಸಮರಸತೆ ಹಾಗೂ ದೇಶದ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿರುವ ಸಂಘಟನೆಯಾಗಿದೆ. ಇಂತಹ ಸಂಘಟನೆಗಳ ಚಟುವಟಿಕೆಗಳಿಗೆ ಅಡ್ಡಿಪಡಿಸುವ ಬದಲು, ರಾಷ್ಟ್ರ ನಿರ್ಮಾಣದ ಕಾರ್ಯಗಳಿಗೆ ಸರ್ಕಾರ ಸಹಕಾರ ನೀಡಬೇಕು ಎಂದು ಶ್ರೀಹರ್ಷಗೌಡ ಪಾಟೀಲ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande