
ನವದೆಹಲಿ, 12 ಜುಲೈ (ಹಿ.ಸ.):
ಆ್ಯಂಕರ್:
ದೇಶ ಕಂಡ ಶ್ರೇಷ್ಠ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರ ನಿಧನಕ್ಕೆ ರಾಷ್ಟ್ರದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಎಕ್ಸ್‌ನಲ್ಲಿ ಸಂತಾಪ ಸೂಚಿಸಿ, ಎಸ್. ಜಾನಕಿ ಅವರ ಅಗಲಿಕೆಯಿಂದ ಭಾರತ ಸಂಗೀತ ಕ್ಷೇತ್ರದ ಅಮೂಲ್ಯ ರತ್ನವನ್ನು ಕಳೆದುಕೊಂಡಿದೆ ಎಂದು ಹೇಳಿದ್ದಾರೆ. ಆರು ದಶಕಗಳಿಗೂ ಹೆಚ್ಚು ಕಾಲ ಸುಮಾರು 20 ಭಾರತೀಯ ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿ ಹಲವು ತಲೆಮಾರುಗಳನ್ನು ರಂಜಿಸಿದ ಅವರ ಸಂಗೀತ ಸದಾ ಅಮರವಾಗಿರಲಿದೆ ಎಂದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು, ವಿಶಿಷ್ಟ ಕಂಠಸಿರಿ ಮತ್ತು ಅದ್ಭುತ ಬಹುಮುಖ ಪ್ರತಿಭೆಯಿಂದ ಎಸ್. ಜಾನಕಿ ಅವರು ಆರು ದಶಕಗಳ ಕಾಲ ತಮಿಳು, ತೆಲುಗು, ಕನ್ನಡ, ಮಲಯಾಳಂ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಸಾವಿರಾರು ಗೀತೆಗಳನ್ನು ಹಾಡಿ ಭಾರತೀಯ ಸಂಗೀತಕ್ಕೆ ಅಳಿಸಲಾಗದ ಕೊಡುಗೆ ನೀಡಿದ್ದಾರೆ. ಅವರ ಅಗಲಿಕೆ ರಾಷ್ಟ್ರದ ಸಾಂಸ್ಕೃತಿಕ ಪರಂಪರೆಗೆ ತುಂಬಲಾರದ ನಷ್ಟ ಎಂದು ಹೇಳಿದ್ದಾರೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು, ಭಾರತೀಯ ಸಂಗೀತ ಲೋಕ ತನ್ನ ಅತ್ಯಂತ ಅಮೂಲ್ಯ ಕಂಠಗಳಲ್ಲಿ ಒಂದನ್ನು ಕಳೆದುಕೊಂಡಿದೆ. ಅವರ ಸುಮಧುರ ಧ್ವನಿ ಮತ್ತು ಅಮರ ಗೀತೆಗಳು ಮುಂದಿನ ಪೀಳಿಗೆಗಳಿಗೂ ಪ್ರೇರಣೆಯಾಗಲಿವೆ ಎಂದು ಸಂತಾಪ ಸೂಚಿಸಿದ್ದಾರೆ.
ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು, ಸುಮಾರು ಆರು ದಶಕಗಳ ಕಾಲ ಭಾರತೀಯ ಸಂಗೀತಕ್ಕೆ ಎಸ್. ಜಾನಕಿ ಅವರು ನೀಡಿದ ಅಪಾರ ಕೊಡುಗೆ ದೇಶದ ಸಂಗೀತ ಪರಂಪರೆಯಲ್ಲಿ ಶಾಶ್ವತವಾಗಿ ಉಳಿಯಲಿದೆ. ಅವರ ಅಗಲಿಕೆಯಿಂದ ಸಂಗೀತ ಲೋಕಕ್ಕೆ ಅಪಾರ ನಷ್ಟ ಉಂಟಾಗಿದೆ ಎಂದು ಶೋಕ ವ್ಯಕ್ತಪಡಿಸಿ, ಕುಟುಂಬಸ್ಥರು ಹಾಗೂ ಅಭಿಮಾನಿಗಳಿಗೆ ಸಂತಾಪ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.