
ಬಾಗಲಕೋಟೆ, 12 ಜುಲೈ (ಹಿ.ಸ.):
ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಯಡಹಳ್ಳಿ ಚಿಂಕಾರ ಅರಣ್ಯ ಪ್ರದೇಶದ ಅಮಲಝರಿ ಗ್ರಾಮ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕತ್ತರಿಸಿ ಮಾರಾಟಕ್ಕೆ ಸಿದ್ಧಪಡಿಸಿದ್ದ ಅಪಾರ ಪ್ರಮಾಣದ ಶ್ರೀಗಂಧದ ಕಟ್ಟಿಗೆಗಳನ್ನು ವಶಪಡಿಸಿಕೊಳ್ಳುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮಹತ್ವದ ಯಶಸ್ಸು ಸಾಧಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಅಂತಾರಾಜ್ಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶ್ರೀಗಂಧ ಕಳ್ಳರ ಜಾಲವನ್ನು ಭೇದಿಸಿ, ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳು ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೆ ಸೇರಿದವರಾಗಿದ್ದು, ಹಲವು ದಿನಗಳಿಂದ ಶ್ರೀಗಂಧ ಮರಗಳನ್ನು ಅಕ್ರಮವಾಗಿ ಕಡಿದು ವಿವಿಧ ರಾಜ್ಯಗಳಿಗೆ ಸಾಗಣೆ ಮಾಡುವ ಜಾಲದಲ್ಲಿ ತೊಡಗಿಕೊಂಡಿದ್ದರೆಂಬ ಮಾಹಿತಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಆರೋಪಿಗಳು ಮಾರಾಟಕ್ಕಾಗಿ ಸಂಗ್ರಹಿಸಿಟ್ಟಿದ್ದ ಅಪಾರ ಪ್ರಮಾಣದ ಗಂಧದ ಕಟ್ಟಿಗೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ತಂಡ, ಅಕ್ರಮ ಚಟುವಟಿಕೆಯನ್ನು ಪತ್ತೆಹಚ್ಚಿ ಆರೋಪಿಗಳನ್ನು ಸ್ಥಳದಲ್ಲೇ ಸೆರೆಹಿಡಿಯುವಲ್ಲಿ ಯಶಸ್ವಿಯಾಯಿತು. ವಶಪಡಿಸಿಕೊಂಡಿರುವ ಶ್ರೀಗಂಧದ ಕಟ್ಟಿಗೆಗಳ ಮೌಲ್ಯ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಇತರೆ ಮಾಹಿತಿಯನ್ನು ತನಿಖೆಯ ನಂತರ ಬಹಿರಂಗಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಗಲಕೋಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ವಪ್ನಿಲ್ ಅಹಿರೇ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರದೀಪ್ ರಾಠೋಡ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಯಶಸ್ವಿಯಾಗಿ ನಡೆಯಿತು. ಈ ಕಾರ್ಯಾಚರಣೆಯಲ್ಲಿ ಆರ್ಎಫ್ಒ ಅಮೃತ ಗಂಡೋಸಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಬಿ.ಜಿ. ಕಮತಾರ, ಪ್ರಭು ಗುಡ್ಡಕಾರ, ವಿದ್ಯಾನಂದ ಹೊಸಮನಿ, ಯಲ್ಲಪ್ಪ ಹಿರೇಕುರಬರ, ವಿಠಲ ಮೂಲಿಮನಿ, ಅಶೋಕ ಪೂಜಾರಿ, ಶಿವಾಜಿ ಮಾದರ, ಪೀರಪ್ಪ, ಗಣೇಶ, ಮಹಾಂತೇಶ ಹಾಗೂ ವೆಂಕಣ್ಣ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು.
ಅರಣ್ಯ ಸಂಪತ್ತಿನ ಸಂರಕ್ಷಣೆ ಹಾಗೂ ಶ್ರೀಗಂಧ ಕಳ್ಳಸಾಗಣೆ ತಡೆಗೆ ಅರಣ್ಯ ಇಲಾಖೆ ನಿರಂತರವಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಅರಣ್ಯ ಪ್ರದೇಶಗಳಲ್ಲಿ ಗಸ್ತು ಹಾಗೂ ಗುಪ್ತಚರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದ್ದು, ಈ ಜಾಲದ ಹಿಂದೆ ಇನ್ನೂ ಯಾರಾದರೂ ಇದ್ದಾರೆಯೇ ಎಂಬ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಈ ಯಶಸ್ವಿ ಕಾರ್ಯಾಚರಣೆಯಿಂದ ಅರಣ್ಯ ಸಂಪತ್ತನ್ನು ಲೂಟಿ ಮಾಡುವ ಜಾಲಗಳಿಗೆ ತೀವ್ರ ಎಚ್ಚರಿಕೆಯ ಸಂದೇಶ ರವಾನೆಯಾಗಿದೆ. ಸ್ಥಳೀಯರು ಕೂಡ ಅರಣ್ಯ ಸಂರಕ್ಷಣೆಯಲ್ಲಿ ಇಲಾಖೆಯೊಂದಿಗೆ ಕೈಜೋಡಿಸಿ, ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande