
ಬಳ್ಳಾರಿ, 12 ಜುಲೈ (ಹಿ.ಸ.):
ಆ್ಯಂಕರ್ : ಬಳ್ಳಾರಿ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಮತ್ತು ಮನೆ ಮನೆ ಸಮೀಕ್ಷೆ ಕಾರ್ಯವು ಅತ್ಯಂತ ತೀವ್ರಗತಿಯಲ್ಲಿ ಪ್ರಗತಿಯಲ್ಲಿದ್ದು, ಶುಕ್ರವಾರದ ಅಂತ್ಯಕ್ಕೆ ಜಿಲ್ಲೆಯಲ್ಲಿ ಒಟ್ಟು 11,95,880 (ಶೇ. 97.26) ಎಸ್ಐಆರ್ ಗಣತಿ ನಮೂನೆಗಳನ್ನು ಯಶಸ್ವಿಯಾಗಿ ವಿತರಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್. ಕೆ ಅವರು ತಿಳಿಸಿದ್ದಾರೆ.
ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟು 12,29,586 ಜನ ಅರ್ಹ ಮತದಾರರಿದ್ದು, ಈ ಪೈಕಿ ಶೇಕಡಾ 97.83 ರಷ್ಟು ಮತದಾರರನ್ನು ಯಶಸ್ವಿಯಾಗಿ ಮ್ಯಾಪಿಂಗ್ ಮಾಡಲಾಗಿದೆ. ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ನಿಖರವಾದ ಮಾಹಿತಿ ಸಂಗ್ರಹಣೆಯಲ್ಲಿ ನಿರತರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮತದಾರರ ಪಟ್ಟಿಯ ಗಣಕೀಕರಣ ಮತ್ತು ಕ್ಷೇತ್ರ ಮಟ್ಟದ ಪರಿಶೀಲನೆಗಾಗಿ ನಿಯೋಜಿಸಲಾಗಿರುವ ನಮೂನೆಗಳನ್ನು ಈಗಾಗಲೇ ಮುದ್ರಿಸಿ, ಬೂತ್ ಮಟ್ಟದ ಅಧಿಕಾರಿಗಳಿಗೆ ವಿತರಿಸಲಾಗಿದೆ. ಈ ಮನೆ ಮನೆ ಸಮೀಕ್ಷೆ ಹಾಗೂ ಡಿಜಿಟಲೀಕರಣ ಪ್ರಕ್ರಿಯೆಯು ಜುಲೈ 29 ರವರೆಗೆ ಮುಂದುವರಿಯಲಿದೆ ಎಂದಿದ್ದಾರೆ.
ಪ್ರಸ್ತುತ 3,19,861 ನಮೂನೆಗಳನ್ನು (ಶೇ. 26.01) ಗಣಕೀಕೃತಗೊಳಿಸಲಾಗಿದೆ. ಮತದಾರರು ಸ್ವತಃ ಆನ್ಲೈನ್ ಮೂಲಕ 1,851 (ಶೇ. 0.15) ನಮೂನೆಗಳನ್ನು ಸಲ್ಲಿಕೆ ಮಾಡಿದ್ದಾರೆ. ಮತದಾರರ ಪಟ್ಟಿಯ ಪಾವಿತ್ರ್ಯತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಡಳಿತವು ತಪಾಸಣೆಯನ್ನು ಕಟ್ಟುನಿಟ್ಟಾಗಿಸಿದೆ.
ಪ್ರಸ್ತುತ ಸಮೀಕ್ಷೆಯ ಅವಧಿಯಲ್ಲಿ ಒಟ್ಟು 4,526 ಮತದಾರರನ್ನು ವಿವಿಧ ಕಾರಣಗಳಿಗಾಗಿ ಗೈರುಹಾಜರಿ, ಸ್ಥಳಾಂತರಗೊಂಡ, ಮರಣ ಹೊಂದಿದ, ನಕಲು ಹಾಗೂ ಇತರೆ ವರ್ಗದ ಅಡಿಯಲ್ಲಿ ಗುರುತಿಸಲಾಗಿದೆ. ಇದರಲ್ಲಿ ಶಾಶ್ವತವಾಗಿ ಸ್ಥಳಾಂತರಗೊಂಡ 1,617 ಮತದಾರರು, ಮರಣ ಹೊಂದಿದ 2,253 ಮತದಾರರು, ಈಗಾಗಲೇ ಬೇರೆಡೆ ಹೆಸರು ನೋಂದಾಯಿಸಿಕೊಂಡಿರುವ 548 ಮತದಾರರು ಹಾಗೂ ದೀರ್ಘಕಾಲದಿಂದ ಗೈರುಹಾಜರಾಗಿರುವ 86 ಮತದಾರರನ್ನು ಪಟ್ಟಿ ಮಾಡಲಾಗಿದ್ದು, ಇವರ ಹೆಸರನ್ನು ನಿಯಮಾನುಸಾರ ಪರಿಷ್ಕರಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.
ವಿಧಾನಸಭಾವಾರು ಸಮೀಕ್ಷೆಯ ವಿವರ:
91-ಕಂಪ್ಲಿ: ಒಟ್ಟು 242 ಮತಗಟ್ಟೆಗಳಿದ್ದು, 2,24,615 ನಮೂನೆಗಳನ್ನು ವಿತರಿಸಲಾಗಿದೆ. ಈ ಪೈಕಿ 88,846 ಡಿಜಿಟಲೀಕರಣಗೊಂಡಿದ್ದು, 305 ಅನರ್ಹ ಮತದಾರರನ್ನು ಗುರುತಿಸಲಾಗಿದೆ.
92-ಸಿರುಗುಪ್ಪ: ಒಟ್ಟು 229 ಮತಗಟ್ಟೆಗಳಿದ್ದು, 2,26,870 ನಮೂನೆಗಳನ್ನು ವಿತರಿಸಲಾಗಿದೆ. ಈ ಪೈಕಿ 73,485 ಡಿಜಿಟಲೀಕರಣಗೊಂಡಿದ್ದು, 980 ಅನರ್ಹ ಮತದಾರರನ್ನು ಪತ್ತೆಹಚ್ಚಲಾಗಿದೆ.
93-ಬಳ್ಳಾರಿ ಗ್ರಾಮೀಣ: ಒಟ್ಟು 236 ಮತಗಟ್ಟೆಗಳಿದ್ದು, 2,49,438 ನಮೂನೆಗಳನ್ನು ವಿತರಿಸಲಾಗಿದೆ. ಈ ಪೈಕಿ 35,566 ಡಿಜಿಟಲೀಕರಣಗೊಂಡಿದ್ದು, ಜಿಲ್ಲೆಯಲ್ಲೇ ಗರಿಷ್ಠ ಅಂದರೆ 720 ಮರಣ ಹೊಂದಿದ ಮತದಾರರು ಇಲ್ಲಿ ಪತ್ತೆಯಾಗಿದ್ದಾರೆ.
94-ಬಳ್ಳಾರಿ ನಗರ: ಒಟ್ಟು 261 ಮತಗಟ್ಟೆಗಳಿದ್ದು, 2,53,182 ನಮೂನೆಗಳನ್ನು ವಿತರಿಸಲಾಗಿದೆ. ಇಲ್ಲಿ 24,750 ಡಿಜಿಟಲೀಕರಣಗೊಂಡಿದೆ, ಒಟ್ಟು ಯುಇಎಫ್ ಸಂಖ್ಯೆ 987 ಆಗಿದೆ.
95-ಸಂಡೂರು: ಒಟ್ಟು 259 ಮತಗಟ್ಟೆಗಳಿದ್ದು, 2,41,775 ನಮೂನೆಗಳನ್ನು ವಿತರಿಸಲಾಗಿದೆ. 97,214 ನಮೂನೆಗಳ ಡಿಜಿಟಲೀಕರಣ ಪ್ರಕ್ರಿಯೆ ಪೂರ್ಣಗೊಂಡಿದೆ.
ಸಾರ್ವಜನಿಕರು ತಮಗೆ ಸಂಬಂಧಿಸಿದ ಸರಿಯಾದ ಮಾಹಿತಿಯನ್ನು ಮನೆ ಮನೆಗೆ ಭೇಟಿ ನೀಡುವ ಬೂತ್ ಮಟ್ಟದ ಅಧಿಕಾರಿಗಳಿಗೆ ನೀಡಿ, ದೋಷಮುಕ್ತ ಹಾಗೂ ಪಾರದರ್ಶಕ ಮತದಾರರ ಪಟ್ಟಿ ತಯಾರಿಕೆಗೆ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್. ಕೆ ಅವರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್