
ನವದೆಹಲಿ, 12 ಜುಲೈ (ಹಿ.ಸ.):
ಆ್ಯಂಕರ್:
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವಿಯಾ ಅವರು ಜುಲೈ 14ರಂದು ದೇಶದ ವಿವಿಧ ಭಾಗಗಳಲ್ಲಿ ₹668 ಕೋಟಿ ವೆಚ್ಚದ ಏಳು ಉದ್ಯೋಗಿಗಳ ರಾಜ್ಯ ವಿಮೆ (ಇಎಸ್‌ಐ) ಆರೋಗ್ಯ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.
ತೆಲಂಗಾಣದ ಸನತ್‌ನಗರದಲ್ಲಿರುವ ಇಎಸ್‌ಐಸಿ ಆಸ್ಪತ್ರೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹೊಸ ಹೊರರೋಗಿ ವಿಭಾಗ (ಒಪಿಡಿ) ಕಟ್ಟಡವನ್ನು ನೇರವಾಗಿ ಉದ್ಘಾಟಿಸಲಿದ್ದು, ಅಸ್ಸಾಂ, ತಮಿಳುನಾಡು, ಆಂಧ್ರಪ್ರದೇಶ, ಗುಜರಾತ್ ಹಾಗೂ ರಾಜಸ್ಥಾನದಲ್ಲಿನ ಆರು ಆರೋಗ್ಯ ಯೋಜನೆಗಳಿಗೆ ಆನ್‌ಲೈನ್ ಮೂಲಕ ಚಾಲನೆ ನೀಡಲಿದ್ದಾರೆ. ಈ ಯೋಜನೆಗಳಿಂದ ದೇಶಾದ್ಯಂತ ಸುಮಾರು 53 ಲಕ್ಷ ವಿಮಾದಾರರು ಮತ್ತು ಫಲಾನುಭವಿಗಳಿಗೆ ಆಧುನಿಕ ಆರೋಗ್ಯ ಸೇವೆಗಳು ಲಭ್ಯವಾಗಲಿವೆ.
ಸನತ್‌ನಗರದ ಹೊಸ ಒಪಿಡಿ ಕಟ್ಟಡವನ್ನು ₹211.13 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಸಾಮಾನ್ಯ ವೈದ್ಯಕೀಯ, ವಿವಿಧ ತಜ್ಞ ವಿಭಾಗಗಳು, ಆಯುಷ್ ಸೇವೆಗಳು, ರೇಡಿಯಾಲಜಿ, ಯೋಗ, ಪುನರ್ವಸತಿ ಕೇಂದ್ರ, 180 ಸಾಮಾನ್ಯ ಹಾಸಿಗೆಗಳು, 25 ಐಸಿಯು ಹಾಗೂ 20 ನವಜಾತ ಶಿಶುಗಳ ತೀವ್ರ ನಿಗಾ ಘಟಕ (ಎನ್‌ಐಸಿಯು) ಹಾಸಿಗೆಗಳ ಸೌಲಭ್ಯವನ್ನು ಒಳಗೊಂಡಿದೆ. ಈ ಕೇಂದ್ರವು ತೆಲಂಗಾಣದ 12.30 ಲಕ್ಷಕ್ಕೂ ಹೆಚ್ಚು ವಿಮಾದಾರರು ಮತ್ತು ಫಲಾನುಭವಿಗಳಿಗೆ ಸೇವೆ ಒದಗಿಸಲಿದೆ.
ಕಾರ್ಯಕ್ರಮದಲ್ಲಿ ಕೇಂದ್ರ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ ಭಾಗವಹಿಸಲಿದ್ದು, ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಕಾರ್ಮಿಕರನ್ನು ಸನ್ಮಾನಿಸುವುದರ ಜೊತೆಗೆ ಇಎಸ್‌ಐ ಫಲಾನುಭವಿಗಳಿಗೆ ನಗದು ಸೌಲಭ್ಯವನ್ನೂ ವಿತರಿಸಲಾಗುತ್ತದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.