
ಅಹಮದಾಬಾದ್, 12 ಜುಲೈ (ಹಿ.ಸ.):
ಆ್ಯಂಕರ್:
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಹಮದಾಬಾದ್‌ನಲ್ಲಿ ₹405 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿದರು.
ಅಹಮದಾಬಾದ್ ಮಹಾನಗರ ಪಾಲಿಕೆಯ 'ಮಿಷನ್ ಫೈವ್ ಮಿಲಿಯನ್ ಟ್ರೀ' ಅಭಿಯಾನದ ಅಂಗವಾಗಿ ನಡೆದ ಬೃಹತ್ ವೃಕ್ಷಾರೋಪಣ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು, ಹೆರಿಟೇಜ್ ಪಾರ್ಕ್, 101 ಆಮ್ಲಜನಕ ಉದ್ಯಾನಗಳು ಹಾಗೂ ನಗರ ಅರಣ್ಯಗಳನ್ನು ಉದ್ಘಾಟಿಸಿದರು. ಜೊತೆಗೆ ಬಿಆರ್‌ಟಿಎಸ್‌ಗೆ 80 ಹೊಸ ಹವಾನಿಯಂತ್ರಿತ ವಿದ್ಯುತ್ ಬಸ್‌ಗಳು ಮತ್ತು ಎಎಂಟಿಎಸ್‌ಗೆ 75 ಹೊಸ ಹವಾನಿಯಂತ್ರಿತ ಬಸ್‌ಗಳನ್ನು ಸೇರ್ಪಡೆಗೊಳಿಸಲಾಯಿತು.
₹60.68 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ 188 ಸರ್ಕಾರಿ ವಸತಿ ಗೃಹಗಳನ್ನೂ ಇ-ಉದ್ಘಾಟನೆ ಮಾಡಲಾಯಿತು. ಬಳಿಕ ಭಾಡಜ್, ಬೋಪಲ್ ಮತ್ತು ವಾಡಜ್ ಪ್ರದೇಶಗಳಲ್ಲಿ ನಡೆದ ಸಾಮೂಹಿಕ ವೃಕ್ಷಾರೋಪಣ ಕಾರ್ಯಕ್ರಮದಲ್ಲಿ ಅಮಿತ್ ಶಾ ಭಾಗವಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ 'ತಾಯಿಯ ಹೆಸರಿನಲ್ಲಿ ಒಂದು ಮರ' ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರೆತಿದ್ದು, ಗಾಂಧಿನಗರ ಲೋಕಸಭಾ ಕ್ಷೇತ್ರದಲ್ಲಿ ಒಂದೇ ದಿನ 1.25 ಕೋಟಿಗೂ ಅಧಿಕ ಸಸಿಗಳನ್ನು ನೆಡುವ ಗುರಿ ಸಾಧಿಸಲಾಗುತ್ತಿದೆ ಎಂದು ತಿಳಿಸಿದರು.
ಪರಿಸರ ಸಂರಕ್ಷಣೆ ಇಂದಿನ ಅಗತ್ಯವಾಗಿದ್ದು, ವಾಹನಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ನಗರಗಳಲ್ಲಿ ಹಸಿರು ಪ್ರದೇಶಗಳ ವಿಸ್ತರಣೆ ಅನಿವಾರ್ಯ ಎಂದು ಹೇಳಿದರು. ಗಾಂಧಿನಗರ ಲೋಕಸಭಾ ಕ್ಷೇತ್ರದಲ್ಲಿ ಇದುವರೆಗೆ ₹28,492 ಕೋಟಿ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿದ್ದು, 2029ರೊಳಗೆ ಈ ಪ್ರದೇಶದಲ್ಲಿ ಶೇ.20ರಷ್ಟು ಹಸಿರು ವಿಸ್ತರಣೆ ಮಾಡುವ ಸಂಕಲ್ಪ ಹೊಂದಿದ್ದೇನೆ ಎಂದು ಅಮಿತ್ ಶಾ ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.