
ಕೋಲಾರ ಜುಲೈ ೧೧ :(ಹಿ.ಸ.):
ಆ್ಯಂಕರ್:ಭೂಮಿಯ ಮೇಲಿನ ಗಿಡ-ಮರಗಳು ಎಷ್ಟು ದಿನ ಉಸಿರಾಡುತ್ತವೆಯೋ, ಅಷ್ಟು ದಿನ ಮಾತ್ರ ಮಾನವ ಬದುಕಲು ಸಾಧ್ಯ. ಮರಗಳ ಉಸಿರಾಟ ನಿಂತರೆ ಮಾನವನ ಅಸ್ತಿತ್ವವೇ ಅಪಾಯಕ್ಕೆ ಸಿಲುಕುತ್ತದೆ. ಹೀಗಾಗಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಜವಾಬ್ದಾರಿಯಾಗಬೇಕು ಎಂದು ಕರ್ನಾಟಕ ಉಪಲೋಕಾಯುಕ್ತ ಕೆ.ಎನ್. ಫಣೀಂದ್ರ ಎಚ್ಚರಿಸಿದರು.
ಶ್ರೀನಿವಾಸಪುರ ತಾಲ್ಲೂಕಿನ ಚಿಂತನಕುಂಟೆ ಅರಣ್ಯ ಪ್ರದೇಶದಲ್ಲಿ ಶನಿವಾರ ಕರ್ನಾಟಕ ಲೋಕಾಯುಕ್ತ, ಜಿಲ್ಲಾಡಳಿತ, ಜಿಲ್ಲಾ ಮತ್ತು ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಅರಣ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ 'ವನಮಹೋತ್ಸವ' ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಗತ್ತಿನಲ್ಲಿ ಕನಿಷ್ಠ ಶೇ.೩೩ರಷ್ಟು ಅರಣ್ಯ ಪ್ರದೇಶ ಇರಬೇಕು. ಆದರೆ, ಪ್ರಸ್ತುತ ಶೇ.೨೫ರಷ್ಟು ಮಾತ್ರ ಉಳಿದಿದೆ. ಇರುವ ಅರಣ್ಯವನ್ನೂ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ನಾಶ ಮಾಡುತ್ತಿರುವುದರಿಂದ ಮಾಲಿನ್ಯ ಮಿತಿಮೀರುತ್ತಿದೆ. ಓಜೋನ್ ಪದರ ಹಾನಿಗೊಳಗಾಗಿ ನಾನಾ ಕಾಯಿಲೆಗಳು ಹುಟ್ಟಿಕೊಳ್ಳುತ್ತಿವೆ. ಮುಂದಿನ ಪೀಳಿಗೆಗೆ ಆರೋಗ್ಯಕರ ವಾತಾವರಣ ನಿರ್ಮಿಸಲು ಪ್ರತಿಯೊಬ್ಬರೂ ಗಿಡ ನೆಟ್ಟು ಮರಗಳಾಗಿ ಬೆಳೆಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕರ್ನಾಟಕದ ಮತ್ತೋರ್ವ ಉಪಲೋಕಾಯುಕ್ತ ಬಿ. ವೀರಪ್ಪ, ಶಿಕ್ಷಕರು ರಾಜಕೀಯ ನಂಟಿನಿಂದ ಅಂತರ ಕಾಯ್ದುಕೊಂಡು, ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವತ್ತ ಗಮನಹರಿಸಬೇಕು. ವಿದ್ಯಾರ್ಥಿಗಳಲ್ಲಿ ಪರಿಸರ ಹಾಗೂ ವೃಕ್ಷಸಂಪತ್ತಿನ ಮಹತ್ವದ ಬಗ್ಗೆ ಅರಿವು ಮೂಡಿಸುವ ಜೊತೆಗೆ ಶಾಲೆಗಳಲ್ಲಿ ಪ್ರಾಯೋಗಿಕ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್ ಮಾತನಾಡಿ, ಪ್ರಕೃತಿ ದೇವರು ನಮಗೆ ನೀಡಿದ ಅಮೂಲ್ಯ ವರ. ಆದರೆ ಇತ್ತೀಚಿನ ದಿನಗಳಲ್ಲಿ ಶುದ್ಧ ಗಾಳಿಯ ಬದಲು ರಾಸಾಯನಿಕಯುಕ್ತ ಗಾಳಿ ಉಸಿರಾಡುವ ದುಸ್ಥಿತಿ ನಿರ್ಮಾಣವಾಗಿದೆ. ಇದನ್ನು ತಡೆಗಟ್ಟಲು ಪ್ರತಿಯೊಂದು ಗ್ರಾಮದಲ್ಲಿ, ಮನೆಗಳ ಸುತ್ತಮುತ್ತ 'ಮಗುವಿಗೊಂದು ಸಸಿ' ನೆಟ್ಟು ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಬಳುವಳಿಯಾಗಿ ನೀಡಬೇಕು ಎಂದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಸರೀನಾ ಸಿಕ್ಕಲಿಗಾರ್ ಮಾತನಾಡಿ, ಮಕ್ಕಳಲ್ಲಿ ಗಿಡ ನೆಟ್ಟು ಪೋಷಿಸುವ ಸಂಸ್ಕಾರವನ್ನು ಎಳೆಯ ವಯಸ್ಸಿನಲ್ಲೇ ಬೆಳೆಸಬೇಕು. ಪರಿಸರದ ಬಗ್ಗೆ ಪ್ರೀತಿ, ಕಾಳಜಿ ಮತ್ತು ಜವಾಬ್ದಾರಿ ಮೂಡಿದಾಗ ಮಾತ್ರ ಹಸಿರು ಉಳಿಯಲು ಸಾಧ್ಯ. ಮನೆ ಹಾಗೂ ಶಾಲೆಗಳಲ್ಲಿ ಈ ಬಗ್ಗೆ ನಿರಂತರ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಒತ್ತಿ ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಭುನೀಲಚಾರಿ ಬಡಿಗಾರ್, ಅಪರ ಜಿಲ್ಲಾಧಿಕಾರಿ ಎಸ್.ಎಂ ಮಂಗಳ, ತಾಲೂಕು ಪ್ರಧಾನ ಸಿವಿಲ್ ನ್ಯಾಯಾಧೀಶ ಕರಣ್ ಸಿಂಗ್, ಅಪರ ಸಿವಿಲ್ ನ್ಯಾಯಾಧೀಶೆ ಪಿ. ಲಾವಣ್ಯ, ಡಿವೈಎಸ್ಪಿ ಮೊನಿಶಾ, ತಹಶೀಲ್ದಾರ್ ಜಿ.ಎನ್. ಸುದೀಂದ್ರ, ಇಒ ಕೆ. ಸರ್ವೇಶ್ ಸಾಮಾಜಿಕ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಎ. ಆನಂದ್, ಎಸಿಎಫ್ಗಳಾದ ಎಂ.ಎಸ್. ಶಿವರಾತ್ರೇಶ್ವರಸ್ವಾಮಿ ಮತ್ತು ಆರ್. ಗಿರೀಶ್, ವಲಯ ಅರಣ್ಯಾಧಿಕಾರಿ ಹರ್ಷವರ್ಧನ್, ಸಾಮಾಜಿಕ ವಲಯ ಅರಣ್ಯಾಧಿಕಾರಿ ಜಿ. ಹರೀಶ್ ಕುಮಾರ್, ಪೊಲೀಸ್ ಇನ್ಸ್ಪೆಕ್ಟರ್ ಶಂಕರಾಚಾರ್, ಪ್ರಭಾರ ಬಿಇಒ ಶಂಕರೇಗೌಡ, ಪುರಸಭೆ ಮುಖ್ಯಾಧಿಕಾರಿ ವಿ. ನಾಗರಾಜ್, ಲೋಕಾಯುಕ್ತ ಇನ್ಸ್ಪೆಕ್ಟರ್ ರೇಣುಕ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್