ಭಾರತೀಯ ಸಂಗೀತ ಲೋಕದ ಗಾನ ಕೋಗಿಲೆ ಎಸ್. ಜಾನಕಿ ಇನ್ನಿಲ್ಲ
ಮೈಸೂರು, 11 ಜುಲೈ (ಹಿ.ಸ.): ಆ್ಯಂಕರ್: ಭಾರತೀಯ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ, ದಕ್ಷಿಣ ಭಾರತದ ಗಾನ ಕೋಗಿಲೆ ಎಂದೇ ಹೆಸರಾದ ಎಸ್. ಜಾನಕಿ ಅವರು ಶನಿವಾರ ಮೈಸೂರಿನಲ್ಲಿ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊ
ಎಸ್.ಜಾನಕಿ ಸಂಗ್ರಹ ಚಿತ್ರ


ಮೈಸೂರು, 11 ಜುಲೈ (ಹಿ.ಸ.):

ಆ್ಯಂಕರ್:

ಭಾರತೀಯ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ, ದಕ್ಷಿಣ ಭಾರತದ ಗಾನ ಕೋಗಿಲೆ ಎಂದೇ ಹೆಸರಾದ ಎಸ್. ಜಾನಕಿ ಅವರು ಶನಿವಾರ ಮೈಸೂರಿನಲ್ಲಿ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.

1938ರ ಏಪ್ರಿಲ್ 23ರಂದು ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಜನಿಸಿದ ಎಸ್. ಜಾನಕಿ ಅವರು 1957ರಲ್ಲಿ ಹಿನ್ನೆಲೆ ಗಾಯನ ಆರಂಭಿಸಿದರು. ಬಳಿಕ ಆರು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಧ್ವನಿಯಿಂದ ಅಸಂಖ್ಯಾತ ಸಂಗೀತಾಭಿಮಾನಿಗಳ ಮನ ಗೆದ್ದರು. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ 17ಕ್ಕೂ ಹೆಚ್ಚು ಭಾಷೆಗಳಲ್ಲಿ ಸುಮಾರು 48 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿ ಅಪರೂಪದ ದಾಖಲೆ ನಿರ್ಮಿಸಿದರು.

ಕನ್ನಡ ಚಿತ್ರರಂಗದಲ್ಲಿ ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್ ಸೇರಿದಂತೆ ಹಲವು ತಲೆಮಾರಿನ ನಟರ ಚಿತ್ರಗಳಿಗೆ ಅವರು ಹಿನ್ನೆಲೆ ಗಾಯನ ನೀಡಿದ್ದರು. ಅವರ ಕಂಠದಿಂದ ಮೂಡಿಬಂದ ಅನೇಕ ಹಾಡುಗಳು ಇಂದಿಗೂ ಸಂಗೀತಾಸಕ್ತರ ನೆಚ್ಚಿನ ಗೀತೆಗಳಾಗಿವೆ.

ಅತ್ಯುತ್ತಮ ಹಿನ್ನೆಲೆ ಗಾಯಕಿಯಾಗಿ ಎಸ್. ಜಾನಕಿ ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಸೇರಿದಂತೆ ಹಲವು ರಾಜ್ಯ ಸರ್ಕಾರಗಳ ಪ್ರಶಸ್ತಿಗಳು ಮತ್ತು ಅನೇಕ ಗೌರವಗಳಿಗೆ ಭಾಜನರಾಗಿದ್ದರು. 2013ರಲ್ಲಿ ಘೋಷಿಸಲಾದ ಪದ್ಮಭೂಷಣ ಪ್ರಶಸ್ತಿಯನ್ನು ತಡವಾಗಿ ನೀಡಲಾಗಿದೆ ಎಂದು ಹೇಳಿ ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ರಾಷ್ಟ್ರದ ಗಮನ ಸೆಳೆದಿತ್ತು.

ಎಸ್.ಜಾನಕಿ ನಿಧನಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂತಾಪ ಸೂಚಿಸಿದ್ದು, ಪ್ರಖ್ಯಾತ ಗಾಯಕಿ, 'ಗಾನ ಕೋಗಿಲೆ' ಎಸ್. ಜಾನಕಿ ಅಮ್ಮ ಅವರ ನಿಧನವಾರ್ತೆ ತಿಳಿದು, ದುಃಖಿತನಾಗಿದ್ದೇನೆ. 17 ಭಾಷೆಗಳಲ್ಲಿ ತಮ್ಮ ಇಂಪಾದ ಕಂಠದ ಮೂಲಕ ಸಾವಿರಾರು ಹಾಡುಗಳನ್ನು ಹಾಡಿದ ಅವರ ಅಗಲಿಕೆ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ. ಗಾಯನವನ್ನೇ ಉಸಿರಾಗಿಸಿಕೊಂಡಿದ್ದ ಜಾನಕಮ್ಮನವರು, ಅವರ ಹಾಡುಗಳ ಮೂಲಕ ಸದಾ ಸಂಗೀತಪ್ರಿಯರ ಮನಸ್ಸಿನಲ್ಲಿ ಹಸಿರಾಗಿರುತ್ತಾರೆ ಎಂದು ಹೇಳಿದ್ದು, ಅವರ ಅಸಂಖ್ಯಾತ ಅಭಿಮಾನಿಗಳು, ಆಪ್ತರು, ಕುಟುಂಬ ವರ್ಗಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ. ಮೃತರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು‌ ಪ್ರಾರ್ಥಿಸಿದ್ದಾರೆ.

ಇದೇ ವೇಳೆ ಚಿತ್ರರಂಗದ ಗಣ್ಯರು ಹಾಗೂ ಸಂಗೀತ ಕ್ಷೇತ್ರದ ಅನೇಕ ಕಲಾವಿದರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಅಗಲಿಕೆಯಿಂದ ಭಾರತೀಯ ಸಂಗೀತ ಲೋಕ ತನ್ನ ಅಪರೂಪದ ಮಧುರ ಕಂಠವನ್ನು ಕಳೆದುಕೊಂಡಿದ್ದು, ಅವರ ಗಾಯನ ಸದಾಕಾಲ ಸಂಗೀತಪ್ರಿಯರ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿಯಲಿದೆ ಎಂದು ಸಂಗೀತ ಪ್ರಿಯರು ಸಾಮಾಜಿಕ ಜಾಲತಾಣದಲ್ಲಿ ಸಂತಾಪ‌ ಸೂಚಿಸಿದ್ದಾರೆ.

ಮೃತ ಎಸ್.ಜಾನಕಿ ‌ಅವರ ಅಂತಿಮ ಸಂಸ್ಕಾರ ನಾಳೆ ಮೈಸೂರಿನ ಅವರ ಸಾಕು ಮಗ ನವೀನ ಅವರ ಫಾರ್ಮ್ ಹೌಸನಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande