ಸಿ.ಎಂ. ಮುನಿಯಪ್ಪ ಅವರ ಕಾಲಡಿಯ ಕಣ್ಣು ಕೃತಿಗೆ ಅಭೂತಪೂರ್ವ ಪ್ರತಿಕ್ರಿಯೆ
ಸಿ.ಎಂ. ಮುನಿಯಪ್ಪ ಅವರ 'ಕಾಲಡಿಯ ಕಣ್ಣು' ಕೃತಿಗೆ ಅಭೂತಪೂರ್ವ ಪ್ರತಿಕ್ರಿಯೆ
ಸಿ.ಎಂ.ಮುನಿಯಪ್ಪನವರು ರಚಿಸಿರುವ 'ಕಾಲಡಿಯ ಕಣ್ಣು' ಪ್ರತಿಯನ್ನು ಚಂದ್ರಮೌಳಿ ಹಾಗೂ ಇತರ ಗೆಳೆಯರು ಖರೀದಿಸಿ ಶುಭ ಹಾರೈಸಿದರು.


ಕೋಲಾರ,೧೧ ಜುಲೈ (ಹಿ.ಸ):

ಆ್ಯಂಕರ್ : ಕೋಲಾರ ಜಿಲ್ಲೆಯ ದಲಿತ ಚಳವಳಿಯ ಇತಿಹಾಸದಲ್ಲಿ ೧೯೭೪-೭೫ರ ಕಾಲಘಟ್ಟವು ಒಂದು ಮೈಲಿಗಲ್ಲು. ಹಸಿವು, ಅವಮಾನ, ಅಸ್ಪೃಶ್ಯತೆ ಮತ್ತು ಬಡತನದ ನೋವುಗಳನ್ನು ಅನುಭವಿಸುತ್ತಲೇ, ಸಮಾನತೆಯ ಕನಸನ್ನು ಹೊತ್ತು ಹುಟ್ಟಿದ ಈ ಚಳವಳಿಗೆ ಪ್ರೊ. ಬಿ. ಕೃಷ್ಣಪ್ಪ, ದೇವನೂರು ಮಹದೇವ, ಡಾ. ಸಿದ್ದಲಿಂಗಯ್ಯ, ವಿ. ನಾಗರಾಜ್, ಸಿ.ಎಂ. ಮುನಿಯಪ್ಪ ಸೇರಿದಂತೆ ಅನೇಕ ದಿಗ್ಗಜರು ನಾಯಕತ್ವ ವಹಿಸಿದ್ದರು. ಇಂತಹ ಹೋರಾಟದ ಹಾದಿಯಲ್ಲಿ ನಿರಂತರವಾಗಿ ದನಿ ಎತ್ತಿದ ಸಮಾನತೆಯ ಹರಿಕಾರ ಹಾಗೂ 'ಸಂಚಿಕೆ' ದಿನಪತ್ರಿಕೆಯ ಸಂಪಾದಕ ಸಿ.ಎಂ. ಮುನಿಯಪ್ಪ ಅವರ ಬದುಕು ಇಂದಿನ ಯುವಪೀಳಿಗೆಗೆ ದಾರಿದೀಪವಾಗಿದೆ.

ಅಂದಿನ ದಿನಗಳ ನೋವು, ಅವಮಾನ ಮತ್ತು ಅಸಹನೀಯ ಕಷ್ಟಗಳನ್ನು ಎದೆಗೊಟ್ಟು ಎದುರಿಸಿದ ಮುನಿಯಪ್ಪ ಅವರು, ತಮ್ಮ ಅನುಭವಗಳನ್ನು ಅಕ್ಷರ ರೂಪಕ್ಕಿಳಿಸಿ 'ಕಾಲಡಿಯ ಕಣ್ಣು' ಎಂಬ ಕೃತಿಯನ್ನು ಲೋಕಾರ್ಪಣೆಗೊಳಿಸಿದ್ದಾರೆ. ಈ ಪುಸ್ತಕವು ಕೇವಲ ಕಥೆಗಳ ಸಂಗ್ರಹವಲ್ಲ, ಬದಲಾಗಿ ದಶಕಗಳಿಂದ ಅಸಮಾನತೆಯ ವಿರುದ್ಧ ಮೌನವಾಗಿ ನರಳಿದ ಜೀವಿಗಳ ಆರ್ತನಾದವಾಗಿದೆ. ಮಣ್ಣಿನ ಮಕ್ಕಳ ಬದುಕಿನ ಕಠೋರ ವಾಸ್ತವಗಳನ್ನು ಕನ್ನಡಿಯಂತೆ ಪ್ರತಿಬಿಂಬಿಸುವ ಈ ಕೃತಿಯು, ವ್ಯವಸ್ಥೆಯ ಕಣ್ಣು ತೆರೆಸುವ ಶಕ್ತಿಯನ್ನು ಹೊಂದಿದೆ. ಗಾಢಾಂಧಕಾರದ ಮಬ್ಬಿನಲ್ಲಿ ಅಸಮಾನತೆಯ ವಿರುದ್ಧ ಸಿಡಿದೆದ್ದು ಹೋರಾಡಿದ ಆ ಘಟನೆಗಳು ಇಂದಿನ ಯುವಜನತೆಗೆ ಹೋರಾಟದ ಸ್ಫೂರ್ತಿಯನ್ನು ನೀಡಬಲ್ಲವು.

ಈ ಮಹತ್ವದ ಕೃತಿಯ ಕುರಿತು ಪ್ರತಿಕ್ರಿಯಿಸಿರುವ ಸಂವಿಧಾನ ಸಂರಕ್ಷಣಾ ಪಡೆಯ ಅಧ್ಯಕ್ಷ ಎಂ. ಚಂದ್ರಮೌಳಿ, ಸಮಾಜದ ಕತ್ತಲೆಯನ್ನು ಸೀಳಿ ಬೆಳಕಿನೆಡೆಗೆ ಕರೆದೊಯ್ಯುವ 'ಕಾಲಡಿಯ ಕಣ್ಣು' ಕೃತಿಯು ಪ್ರತಿಯೊಬ್ಬರ ಕೈಗೂ ತಲುಪಬೇಕು. ಸಿ.ಎಂ. ಮುನಿಯಪ್ಪ ಅವರ ಈ ಸಾಹಿತ್ಯಿಕ ಮತ್ತು ಸಾಮಾಜಿಕ ಪಯಣ ಯಶಸ್ವಿಯಾಗಲಿ, ಎಂದು ಹಾರೈಸಿದ್ದಾರೆ.

ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಯೋಜಕ ಹಾಗೂ ತಮ್ಮ ಗುರುಗಳಾದ ವಿ. ನಾಗರಾಜ್ ಮತ್ತು ಕೋಲಾರ ತಾಲ್ಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಮುನಿಯಪ್ಪ ಅವರೊಂದಿಗೆ 'ಸಂಚಿಕೆ' ಪತ್ರಿಕಾ ಕಚೇರಿಗೆ ಭೇಟಿ ನೀಡಿ, ಪುಸ್ತಕವನ್ನು ಖರೀದಿಸಿ ಓದುವ ಮೂಲಕ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande