
ಗದಗ, 11 ಜುಲೈ (ಹಿ.ಸ.)
ಆ್ಯಂಕರ್:ಗದಗ ನಗರದ ಐತಿಹಾಸಿಕ ಶ್ರೀ ತ್ರಿಕೂಟೇಶ್ವರ ದೇವಸ್ಥಾನದ ಆವರಣದಲ್ಲಿರುವ ಪುರಾತನ ಶ್ರೀ ಸರಸ್ವತಿ ದೇವಿಯ ಮೂರ್ತಿಯನ್ನು ದುಷ್ಕರ್ಮಿಗಳು ಭಗ್ನಗೊಳಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಭಕ್ತರು ಹಾಗೂ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸುಮಾರು ಎಂಟನೇ ಶತಮಾನಕ್ಕೆ ಸೇರಿದ ಐತಿಹಾಸಿಕ ಮೂರ್ತಿಯ ಎದೆಭಾಗಕ್ಕೆ ಹಾನಿ ಮಾಡಲಾಗಿದ್ದು, ಈ ಕೃತ್ಯ ನಿನ್ನೆ ರಾತ್ರಿ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಇಂದು ಮಧ್ಯಾಹ್ನ ದೇವಸ್ಥಾನಕ್ಕೆ ಬಂದ ಭಕ್ತರು ಮೂರ್ತಿ ಹಾನಿಗೊಳಗಾಗಿರುವುದನ್ನು ಗಮನಿಸಿ ಸಂಬಂಧಿಸಿದ ಭಕ್ತರು ಕೇಂದ್ರ ಪುರಾತತ್ವ ಇಲಾಖೆ ಹಾಗೂ ಪೊಲೀಸರ ಗಮನಕ್ಕೆ ತಂದಿದ್ದಾರೆ.
ಗದಗದ ಐತಿಹಾಸಿಕ ಪರಂಪರೆಯ ಪ್ರತೀಕವಾಗಿರುವ ಶ್ರೀ ತ್ರಿಕೂಟೇಶ್ವರ ದೇವಸ್ಥಾನವು ಕೇಂದ್ರ ಪುರಾತತ್ವ ಇಲಾಖೆಯ ಸಂರಕ್ಷಣೆಯಲ್ಲಿದೆ. ಈ ದೇವಸ್ಥಾನದ ಆವರಣದಲ್ಲಿರುವ ಶ್ರೀ ಸರಸ್ವತಿ ದೇವಿಯ ಮೂರ್ತಿಯು ಅಪರೂಪದ ಶಿಲ್ಪಕಲೆಗೆ ಸಾಕ್ಷಿಯಾಗಿದ್ದು, ಶತಮಾನಗಳ ಇತಿಹಾಸವನ್ನು ತನ್ನೊಳಗೆ ಹೊತ್ತಿದೆ. ಇಂತಹ ಮಹತ್ವದ ಪಾರಂಪರಿಕ ಸ್ಮಾರಕದಲ್ಲಿ ದುಷ್ಕರ್ಮಿಗಳು ವಿಕೃತಿ ಮೆರೆದಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.
ಇತಿಹಾಸದ ಪ್ರಕಾರ, ಶ್ರೀ ಸರಸ್ವತಿ ದೇವಸ್ಥಾನವು 8, 9 ಮತ್ತು 10ನೇ ಶತಮಾನಗಳಲ್ಲಿ ಹಂತ ಹಂತವಾಗಿ ನಿರ್ಮಾಣ ಹಾಗೂ ಜೀರ್ಣೋದ್ಧಾರಗೊಂಡಿದೆ. 16ನೇ ಶತಮಾನದಲ್ಲಿ ಆದಿಲ್ ಶಾಹಿ ವಂಶದ ದಾಳಿಯ ಸಂದರ್ಭದಲ್ಲಿ ಮೂಲ ಸರಸ್ವತಿ ದೇವಿಯ ಮೂರ್ತಿಯ ಕೈ ಸೇರಿದಂತೆ ಹಲವು ಭಾಗಗಳಿಗೆ ಹಾನಿಯಾಗಿತ್ತು ಎಂದು ಇತಿಹಾಸಕಾರರು ಉಲ್ಲೇಖಿಸುತ್ತಾರೆ. ನಂತರದ ಅವಧಿಯಲ್ಲಿ ಅದೇ ಆವರಣದಲ್ಲಿ ಮತ್ತೊಂದು ಶ್ರೀ ಸರಸ್ವತಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ನಿತ್ಯ ಪೂಜೆ-ಪುನಸ್ಕಾರ ನಡೆಸಲಾಗುತ್ತಿದೆ. ಆದರೆ ಐತಿಹಾಸಿಕ ಮೂಲ ಮೂರ್ತಿಗೆ ನಿಯಮಿತ ಪೂಜೆ ನಡೆಯುತ್ತಿರಲಿಲ್ಲ.
ಭಕ್ತರ ಪ್ರಕಾರ, ಕೇಂದ್ರ ಪುರಾತತ್ವ ಇಲಾಖೆಯ ಅಧೀನದಲ್ಲಿರುವ ದೇವಸ್ಥಾನದಲ್ಲಿ ಸಮರ್ಪಕ ಭದ್ರತಾ ವ್ಯವಸ್ಥೆ ಇಲ್ಲದಿರುವುದು ಇಂತಹ ಘಟನೆಗಳಿಗೆ ಕಾರಣವಾಗಿದೆ. ದೇವಸ್ಥಾನದ ಆವರಣದಲ್ಲಿ ಸಿಸಿ ಕ್ಯಾಮೆರಾಗಳು ಅಥವಾ ನಿರಂತರ ಭದ್ರತಾ ಸಿಬ್ಬಂದಿ ಇಲ್ಲದಿರುವುದರಿಂದ ದುಷ್ಕರ್ಮಿಗಳು ಸುಲಭವಾಗಿ ಕೃತ್ಯ ಎಸಗಿರುವ ಸಾಧ್ಯತೆಯಿದೆ ಎಂದು ಅವರು ಆರೋಪಿಸಿದ್ದಾರೆ.
ಘಟನೆಯನ್ನು ಖಂಡಿಸಿರುವ ಭಕ್ತರಾದ ವಿಜಯಲಕ್ಷ್ಮಿ ಹಾಗೂ ಚಂದ್ರಶೇಖರ ಸೇರಿದಂತೆ ಹಲವರು, ಐತಿಹಾಸಿಕ ಸ್ಮಾರಕಗಳ ರಕ್ಷಣೆಗೆ ಅಗತ್ಯ ಭದ್ರತಾ ಕ್ರಮಗಳನ್ನು ತಕ್ಷಣ ಜಾರಿಗೊಳಿಸಬೇಕು, ದೇವಸ್ಥಾನದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು ಹಾಗೂ ಕೃತ್ಯ ಎಸಗಿದ ದುಷ್ಕರ್ಮಿಗಳನ್ನು ಶೀಘ್ರ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಗದಗ ಜಿಲ್ಲೆಯಲ್ಲಿ ಈ ಹಿಂದೆಯೂ ಶಿವಲಿಂಗ ಸೇರಿದಂತೆ ವಿವಿಧ ದೇವರ ಮೂರ್ತಿಗಳಿಗೆ ಹಾನಿ ಮಾಡಿರುವ ಘಟನೆಗಳು ನಡೆದಿದ್ದವು. ಇದೀಗ ನಗರದ ಹೃದಯ ಭಾಗದಲ್ಲಿರುವ ಐತಿಹಾಸಿಕ ಶ್ರೀ ಸರಸ್ವತಿ ದೇವಸ್ಥಾನದ ಮೂರ್ತಿಯನ್ನೇ ಗುರಿಯಾಗಿಸಿರುವುದು ಭಕ್ತರ ಭಾವನೆಗಳಿಗೆ ಧಕ್ಕೆ ಉಂಟುಮಾಡಿದೆ. ಈ ಘಟನೆ ಕೇವಲ ಧಾರ್ಮಿಕ ಭಾವನೆಗಳಿಗೆ ಮಾತ್ರವಲ್ಲ, ರಾಜ್ಯದ ಸಾಂಸ್ಕೃತಿಕ ಹಾಗೂ ಪಾರಂಪರಿಕ ಪರಂಪರೆಗೆ ನಡೆದಿರುವ ದಾಳಿಯಾಗಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಪ್ರಕರಣದ ಸಂಪೂರ್ಣ ಸತ್ಯಾಂಶವನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದು, ದುಷ್ಕರ್ಮಿಗಳ ಬಂಧನಕ್ಕಾಗಿ ಅಗತ್ಯ ಕ್ರಮ ಕೈಗೊಂಡಿದ್ದಾರೆ. ಐತಿಹಾಸಿಕ ದೇವಾಲಯಗಳ ಭದ್ರತೆ ಕುರಿತು ಮತ್ತೊಮ್ಮೆ ಗಂಭೀರ ಚರ್ಚೆಗೆ ಈ ಘಟನೆ ಕಾರಣವಾಗಿದ್ದು, ಪುರಾತತ್ವ ಇಲಾಖೆಯೂ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP