
ಕೋಲಾರ, ೧೧ ಜುಲೈ (ಹಿ.ಸ):
ಆ್ಯಂಕರ್ : ಕೋಲಾರ ನಗರದ ಗೌರಿಪೇಟೆ ೪ನೇ ಮುಖ್ಯರಸ್ತೆಯಲ್ಲಿ ಬೀದಿ ನಾಯಿಯೊಂದು ಮೃತಪಟ್ಟಿದ್ದು, ಅದರ ಮೃತದೇಹವನ್ನು ಅನಾಥವಾಗಿ ಬಿಟ್ಟು ಹೋಗದೆ ಮಾನವೀಯತೆ ಮೆರೆದ ಸ್ಥಳೀಯ ನಿವಾಸಿಗಳು ಅಂತ್ಯಕ್ರಿಯೆ ನೆರವೇರಿಸಿರುವ ಘಟನೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಗೌರಿಪೇಟೆಯ ನಿವಾಸಿಗಳಾದ ಮುನಿಸ್ವಾಮಿ ಅವರ ಧರ್ಮಪತ್ನಿ ರೂಪ, ಮೂರ್ತಿ, ಸುಗುಣ, ಅರುಣ್ ಕುಮಾರ್, ಕೆ ಎನ್ ರವೀಂದ್ರನಾಥ್ ಅವರು ಮೃತಪಟ್ಟಿದ್ದ ಬೀದಿ ನಾಯಿಯ ಅಂತ್ಯಕ್ರಿಯೆಯನ್ನು ಗೌರವಯುತವಾಗಿ ನೆರವೇರಿಸಿದರು. ಜೀವಿಗಳ ಮೇಲಿನ ಕರುಣೆ ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಉದ್ದೇಶದಿಂದ ಅವರು ಈ ಕಾರ್ಯ ಕೈಗೊಂಡಿದ್ದು, ಸ್ಥಳೀಯ ನಿವಾಸಿಗಳು ಅವರ ಸೇವಾ ಮನೋಭಾವವನ್ನು ಶ್ಲಾಘಿಸಿದ್ದಾರೆ.
ಸಮಾಜದಲ್ಲಿ ಪ್ರಾಣಿಗಳ ಮೇಲಿನ ಪ್ರೀತಿ, ಕಾಳಜಿ ಮತ್ತು ಜವಾಬ್ದಾರಿಯುತ ನಡವಳಿಕೆಗೆ ಈ ಘಟನೆ ಉತ್ತಮ ಮಾದರಿಯಾಗಿದ್ದು, ಪರಿಸರ ಸ್ವಚ್ಛತೆ ಹಾಗೂ ಜೀವಜಾಲದ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕೆಂಬ ಸಂದೇಶವನ್ನು ಈ ಮಾನವೀಯ ಕಾರ್ಯ ಸಾರಿದೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್