ಬಂದಷ್ಟೇ ವೇಗದಲ್ಲಿ ಸೊರಗಿದ ಘಟಪ್ರಭಾ ನದಿ ಹರಿವು – ಒಂದೇ ದಿನದಲ್ಲಿ ನೀರಿನ ಪ್ರಮಾಣದಲ್ಲಿ ಭಾರೀ ಇಳಿಕೆ
ಬಾಗಲಕೋಟೆ, 11 ಜುಲೈ (ಹಿ.ಸ.) ಆ್ಯಂಕರ್ : ಕಳೆದ ಒಂದು ವಾರದಿಂದ ಏರಿಕೆಯಾಗುತ್ತಿದ್ದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನಲ್ಲಿ ಹರಿಯುತ್ತಿರುವ ಘಟಪ್ರಭಾ ನದಿಯ ನೀರಿನ ಹರಿವು ಇದೀಗ ಬಂದಷ್ಟೇ ವೇಗದಲ್ಲಿ ಕುಸಿತ ಕಂಡಿದ್ದು, ನದಿ ಪಾತ್ರದ ಚಿತ್ರಣ ಸಂಪೂರ್ಣ ಬದಲಾಗಿದೆ. ಬೆಳಗಾವಿ ಜಿಲ್ಲೆ ಹಾಗೂ ಜಲಾನಯನ
ನಡಿ


ಬಾಗಲಕೋಟೆ, 11 ಜುಲೈ (ಹಿ.ಸ.)

ಆ್ಯಂಕರ್ : ಕಳೆದ ಒಂದು ವಾರದಿಂದ ಏರಿಕೆಯಾಗುತ್ತಿದ್ದ ಬಾಗಲಕೋಟೆ ಜಿಲ್ಲೆಯ

ಮುಧೋಳ ತಾಲೂಕಿನಲ್ಲಿ ಹರಿಯುತ್ತಿರುವ

ಘಟಪ್ರಭಾ ನದಿಯ ನೀರಿನ ಹರಿವು ಇದೀಗ ಬಂದಷ್ಟೇ ವೇಗದಲ್ಲಿ ಕುಸಿತ ಕಂಡಿದ್ದು, ನದಿ ಪಾತ್ರದ ಚಿತ್ರಣ ಸಂಪೂರ್ಣ ಬದಲಾಗಿದೆ. ಬೆಳಗಾವಿ ಜಿಲ್ಲೆ ಹಾಗೂ ಜಲಾನಯನ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವ ಪರಿಣಾಮ ನದಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಗಣನೀಯ ಇಳಿಕೆ ದಾಖಲಾಗಿದೆ.

ಕೆಲವೇ ದಿನಗಳ ಹಿಂದೆ 15 ಸಾವಿರ ಕ್ಯುಸೆಕ್ಗಿಂತಲೂ ಅಧಿಕ ಪ್ರಮಾಣದಲ್ಲಿ ಹರಿಯುತ್ತಿದ್ದ ಘಟಪ್ರಭಾ ನದಿ, ಇದೀಗ ಅರ್ಧಕ್ಕಿಂತಲೂ ಕಡಿಮೆ ಹರಿವಿಗೆ ಇಳಿದಿದೆ. ಇದರಿಂದ ನದಿ ತೀರದ ಗ್ರಾಮಗಳಲ್ಲಿ ಪ್ರವಾಹದ ಆತಂಕ ತಗ್ಗಿದ್ದು, ನದಿ ಪಾತ್ರವೂ ನಿಧಾನವಾಗಿ ಸಹಜ ಸ್ಥಿತಿಯತ್ತ ಮರಳುತ್ತಿದೆ.

ಇಂದು ಬೆಳಗಿನ ವೇಳೆಯವರೆಗೆ ಧೂಪದಾಳ ಜಲಾಶಯದಿಂದ 7,350 ಕ್ಯುಸೆಕ್ ಹಾಗೂ ಬಳ್ಳಾರಿ ನಾಲಾದಿಂದ 200 ಕ್ಯುಸೆಕ್ ಸೇರಿ ಒಟ್ಟು 7,550 ಕ್ಯುಸೆಕ್ ನೀರು ಲೋಳಸೂರ ಬ್ಯಾರೇಜ್ ಮೂಲಕ ಘಟಪ್ರಭಾ ನದಿಗೆ ಹರಿದುಬಂದಿತ್ತು. ಆದರೆ ಇದೀಗ ನೀರಿನ ಹರಿವಿನಲ್ಲಿ ಮತ್ತಷ್ಟು ಇಳಿಕೆಯಾಗಿದ್ದು, ನದಿಯಲ್ಲಿ ಕೇವಲ 3,780 ಕ್ಯುಸೆಕ್ ನೀರು ಮಾತ್ರ ಹರಿಯುತ್ತಿರುವುದು ದಾಖಲಾಗಿದೆ.

ಧೂಪದಾಳ ಜಲಾಶಯಕ್ಕೆ ಪ್ರಸ್ತುತ ಒಟ್ಟು 5,950 ಕ್ಯುಸೆಕ್ ನೀರಿನ ಒಳಹರಿವು ಇದೆ. ಈ ಪೈಕಿ 2,400 ಕ್ಯುಸೆಕ್ ನೀರನ್ನು ಘಟಪ್ರಭಾ ಬಲದಂಡೆ ಕಾಲುವೆ ಮೂಲಕ ನೀರಾವರಿ ಉದ್ದೇಶಕ್ಕಾಗಿ ಹರಿಸಲಾಗುತ್ತಿದ್ದು, ಉಳಿದ ನೀರನ್ನು ನದಿಗೆ ಬಿಡಲಾಗುತ್ತಿದೆ.

ಜಲಾನಯನ ಪ್ರದೇಶಗಳಲ್ಲಿ ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾದರೆ ಮಾತ್ರ ನದಿಯ ಹರಿವು ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ. ಸದ್ಯಕ್ಕೆ ಮಳೆ ತಗ್ಗಿರುವುದರಿಂದ ನದಿಯ ನೀರಿನ ಪ್ರಮಾಣದಲ್ಲಿ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ನೀರಾವರಿ ಇಲಾಖೆ ಮೂಲಗಳು ತಿಳಿಸಿವೆ.

ಪ್ರವಾಹ ಭೀತಿಯಿಂದ ಆತಂಕದಲ್ಲಿದ್ದ ನದಿ ತೀರದ ಜನರು ಈಗ ಸ್ವಲ್ಪ ನಿರಾಳರಾಗಿದ್ದರೂ, ಮಳೆಯ ಸ್ಥಿತಿಗತಿಗಳನ್ನು ಗಮನದಲ್ಲಿಟ್ಟುಕೊಂಡು ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande