
ಬೆಂಗಳೂರು, 11 ಜುಲೈ (ಹಿ.ಸ.):
ಆ್ಯಂಕರ್:ರಾಜ್ಯದಲ್ಲಿ ಖಾಲಿ ಇರುವ ಗ್ರೂಪ್ ‘ಸಿ’ ವೃಂದದ 750 ಭೂಮಾಪಕರ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಯುವಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಕರೆ ನೀಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಲ್ಯಾಣ ಕರ್ನಾಟಕ ಭಾಗದಲ್ಲಿ 190 ಹುದ್ದೆಗಳು ಸೇರಿದಂತೆ ಒಟ್ಟು 750 ಹುದ್ದೆಗಳು ಭರ್ತಿಯಾಗಲಿದ್ದು, ಇಂಜಿನಿಯರಿಂಗ್ ಅಥವಾ ತಂತ್ರಜ್ಞಾನದಲ್ಲಿ ಪದವಿ, ಬಿಎಸ್‌ಸಿ ಪದವಿ ಅಥವಾ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.
ಉದ್ಯೋಗಾಕಾಂಕ್ಷಿಗಳ ಅನುಕೂಲಕ್ಕಾಗಿ ಒಂದು ಬಾರಿಗೆ ಮಾತ್ರ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ ಐದು ವರ್ಷಗಳ ಸಡಿಲಿಕೆ ನೀಡಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್ ಮೂಲಕ ಆಗಸ್ಟ್ 7ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಹೇಳಿದ್ದಾರೆ.
ಯುವಕರಿಗೆ ಉದ್ಯೋಗ ಕಲ್ಪಿಸಿ ಅವರನ್ನು ಆರ್ಥಿಕವಾಗಿ ಸದೃಢಗೊಳಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಸರ್ಕಾರಿ ಉದ್ಯೋಗದ ಕನಸು ಹೊಂದಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಂಡು ತಕ್ಷಣವೇ ಅರ್ಜಿ ಸಲ್ಲಿಸಬೇಕು ಎಂದು ಡಿಸಿಎಂ ಪರಮೇಶ್ವರ ಮನವಿ ಮಾಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.