ಗದಗದಲ್ಲಿ ಅಕ್ರಮ ಬಡ್ಡಿ ದಂಧೆ ಕಿರುಕುಳಕ್ಕೆ ಯುವಕ ಆತ್ಮಹತ್ಯೆ
ಗದಗ, 10 ಜುಲೈ (ಹಿ.ಸ.) ಆ್ಯಂಕರ್:- ಗದಗ ಜಿಲ್ಲೆಯಲ್ಲಿ ಅಕ್ರಮ ಮೀಟರ್ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಮತ್ತೊಂದು ಜೀವ ಬಲಿಯಾಗಿರುವ ಆರೋಪ ಕೇಳಿಬಂದಿದೆ. ನಿರಂತರ ಸಾಲ ವಸೂಲಿಯ ಒತ್ತಡ, ಬೆದರಿಕೆ ಮತ್ತು ಮಾನಸಿಕ ಕಿರುಕುಳದಿಂದ ಮನನೊಂದ 38 ವರ್ಷದ ವ್ಯಾಪಾರಿ ಸಂಪತ್ ಕುಮಾರ್ ನೇಣು ಬಿಗಿದುಕೊಂಡು ಆತ್ಮಹತ್
ಫೋಟೋ


ಗದಗ, 10 ಜುಲೈ (ಹಿ.ಸ.)

ಆ್ಯಂಕರ್:- ಗದಗ ಜಿಲ್ಲೆಯಲ್ಲಿ ಅಕ್ರಮ ಮೀಟರ್ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಮತ್ತೊಂದು ಜೀವ ಬಲಿಯಾಗಿರುವ ಆರೋಪ ಕೇಳಿಬಂದಿದೆ. ನಿರಂತರ ಸಾಲ ವಸೂಲಿಯ ಒತ್ತಡ, ಬೆದರಿಕೆ ಮತ್ತು ಮಾನಸಿಕ ಕಿರುಕುಳದಿಂದ ಮನನೊಂದ 38 ವರ್ಷದ ವ್ಯಾಪಾರಿ ಸಂಪತ್ ಕುಮಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗ ನಗರದ ಕರಿಯಮ್ಮ ಕಲ್ಲು ಬಡಾವಣೆಯಲ್ಲಿ ನಡೆದಿದೆ.

ಆತ್ಮಹತ್ಯೆಗೂ ಮುನ್ನ ಸಂಪತ್ ಕುಮಾರ್ ವಿಡಿಯೋ ದಾಖಲಿಸಿ, ಡೆತ್ ನೋಟ್ ಬರೆದಿಟ್ಟು ಜೀವ ಅಂತ್ಯಗೊಳಿಸಿದ್ದಾನೆ ಎನ್ನಲಾಗಿದೆ. ತನ್ನ ಸಾವಿಗೆ ಕಾರಣರಾದವರ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. ಈ ಘಟನೆ ಇಡೀ ಕುಟುಂಬವನ್ನು ಶೋಕಸಾಗರದಲ್ಲಿ ಮುಳುಗಿಸಿದ್ದು, ಪತ್ನಿ, ಮೂರು ಮಕ್ಕಳು ಹಾಗೂ ತಂದೆ-ತಾಯಿ ಕಣ್ಣೀರಿನಲ್ಲಿ ಮುಳುಗಿದ್ದಾರೆ.

ಕುಟುಂಬದವರ ಮಾಹಿತಿ ಪ್ರಕಾರ, ಸಂಪತ್ ಕುಮಾರ್ ವ್ಯಾಪಾರ ನಡೆಸುತ್ತಿದ್ದನು. ಬಳಿಕ ಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿ ರಿಯಲ್ ಎಸ್ಟೇಟ್ ಹಾಗೂ ಹಣಕಾಸಿನ ವ್ಯವಹಾರಕ್ಕೆ ಪ್ರವೇಶಿಸಿದ್ದ. ಆದರೆ ವ್ಯವಹಾರದಲ್ಲಿ ನಷ್ಟ ಉಂಟಾದ ಪರಿಣಾಮ ಲಕ್ಷಾಂತರ ರೂಪಾಯಿ ಸಾಲದ ಹೊರೆ ಹೆಚ್ಚಾಗಿತ್ತು. ಸಾಲದ ಬಡ್ಡಿಯನ್ನು ಪಾವತಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕೆಲವರು ನಿರಂತರವಾಗಿ ಹಣಕ್ಕಾಗಿ ಒತ್ತಡ ಹೇರಿ, ದೂರವಾಣಿ ಮೂಲಕ ಬೆದರಿಕೆ ಹಾಕುತ್ತಿದ್ದರು ಎಂದು ಆರೋಪಿಸಲಾಗಿದೆ.

ಘಟನೆ ನಡೆದ ದಿನವೂ ಸಾಲ ವಸೂಲಿಗೆ ಸಂಬಂಧಿಸಿದಂತೆ ಕರೆ ಮಾಡಿ ಬೆದರಿಕೆ ಹಾಕಲಾಗಿತ್ತು. ಇದರಿಂದ ಮನನೊಂದ ಸಂಪತ್ ಮನೆಯ ಮೊದಲ ಮಹಡಿಗೆ ತೆರಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪತ್ನಿ ಮೇಲಕ್ಕೆ ತೆರಳಿ ನೋಡಿದಾಗ ಪತಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ಮೃತನ ತಂದೆ ತುಕಾರಾಂ ಮಾತನಾಡಿ, ತಮ್ಮ ಮಗನ ಸಾವಿಗೆ ಅಕ್ರಮ ಬಡ್ಡಿ ದಂಧೆಕೋರರ ಕಿರುಕುಳವೇ ಕಾರಣ ಎಂದು ಆರೋಪಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.

ಮೃತನ ಪತ್ನಿ ಸ್ನೇಹಾ ಅವರ ಪ್ರಕಾರ, ಧರ್ಮಗೌಡ ಎಂಬಾತನಿಂದ ಸುಮಾರು 19 ಲಕ್ಷ ರೂಪಾಯಿ ಸಾಲ ಪಡೆದಿದ್ದು, ಶೇ.3.5ರ ಬಡ್ಡಿದರದಲ್ಲಿ ಹಣ ಪಾವತಿಸಲಾಗುತ್ತಿತ್ತು. ವ್ಯಾಪಾರದಲ್ಲಿ ನಷ್ಟವಾದ ನಂತರ ಹಣ ಪಾವತಿಸಲು ಸಾಧ್ಯವಾಗದಿದ್ದರೂ ಕುಟುಂಬಸ್ಥರು ಸಾಲವನ್ನು ತೀರಿಸುವುದಾಗಿ ತಿಳಿಸಿದ್ದರು. ಆದರೂ ಸಾಲದಾತರು ನಿರಂತರವಾಗಿ ಬೆದರಿಕೆ ಹಾಕುತ್ತಿದ್ದರು ಎಂದು ಆರೋಪಿಸಿದ್ದಾರೆ.

ಇದಲ್ಲದೆ, ಪತ್ನಿಯ ಹೆಸರಿನಲ್ಲಿ ಖಾಲಿ ಬಾಂಡ್ಗೆ ಸಹಿ ಮಾಡಿಸಿಕೊಂಡು ಕಿರುಕುಳ ನೀಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಮತ್ತೊಬ್ಬರಾದ ರವಿ ಶಿವನಗುತ್ತಿ ಎಂಬಾತ ಪತ್ನಿಯ ಹೆಸರಿನಲ್ಲಿದ್ದ ಚೆಕ್ನ್ನು ಬ್ಯಾಂಕ್ಗೆ ಹಾಕಿ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ದೂರಿದ್ದಾರೆ. ಈ ನಿರಂತರ ಮಾನಸಿಕ ಹಿಂಸೆಯಿಂದಲೇ ಸಂಪತ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪತ್ನಿ ಕಣ್ಣೀರಿಟ್ಟಿದ್ದಾರೆ.

ಈ ಘಟನೆ ಗದಗ-ಬೆಟಗೇರಿ ಅವಳಿ ನಗರದಲ್ಲಿ ಅಕ್ರಮ ಮೀಟರ್ ಬಡ್ಡಿ ವ್ಯವಹಾರದ ಬಗ್ಗೆ ಮತ್ತೆ ಆತಂಕ ಮೂಡಿಸಿದ್ದು, ಇಂತಹ ದಂಧೆಕೋರರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಮೃತ ಕುಟುಂಬಕ್ಕೆ ನ್ಯಾಯ ದೊರಕಿಸುವುದರ ಜೊತೆಗೆ ಅಕ್ರಮ ಬಡ್ಡಿ ದಂಧೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ವಿಶೇಷ ಕಾರ್ಯಾಚರಣೆ ನಡೆಸಬೇಕು ಎಂಬ ಆಗ್ರಹವೂ ವ್ಯಕ್ತವಾಗಿದೆ.

ಪ್ರಕರಣ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದು, ಆತ್ಮಹತ್ಯೆ ಪತ್ರ, ವಿಡಿಯೋ ಸೇರಿದಂತೆ ಇತರ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಆರೋಪಗಳ ಸತ್ಯಾಸತ್ಯತೆ ಪರಿಶೀಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande