ವೈದ್ಯರಿಗೆ ಕೋಲಾರದಲ್ಲಿ ತಾಯಿ ಮತ್ತು ಶಿಶು ಮರಣ ತಡೆಗಟ್ಟುವ ಕಾರ್ಯಗಾರ
ವೈದ್ಯರಿಗೆ ಕೋಲಾರದಲ್ಲಿ ತಾಯಿ ಮತ್ತು ಶಿಶು ಮರಣ ತಡೆಗಟ್ಟುವ ಕಾರ್ಯಗಾರ
ಶಿಶು ಮರಣಗಳ ತಡೆಗಟ್ಟುವ ಬಗ್ಗೆ ಕೋಲಾರದಲ್ಲಿ ನಡೆದ ಕಾರ್ಯಾಗಾರವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕಿ ಡಾ. ರಜನಿ ಉದ್ಘಾಟಿಸಿದರು.


ಕೋಲಾರ: ೧೦ ಜುಲೈ (ಹಿ.ಸ):

ಆಂಕರ್ : ಒಂದು ತಾಯಿ ಸತ್ತರೆ, ಇಡೀ ಕುಟುಂಬವೇ ಸಾಯುತ್ತದೆ; ಒಂದು ಕುಟುಂಬ ಸತ್ತರೆ, ಸಮಾಜವೇ ಸಾಯುತ್ತದೆ. ಹೀಗಾಗಿ ಹೆರಿಗೆಯ ಸಮಯದಲ್ಲಿ ಯಾವುದೇ ತಾಯಿ ಪ್ರಾಣ ಕಳೆದುಕೊಳ್ಳಬಾರದು ಹಾಗೂ ಜನಿಸಿದ ಮಗು ನಾಳೆಯ ಸೂರ್ಯನನ್ನು ನೋಡುವ ಹಕ್ಕಿನಿಂದ ವಂಚಿತವಾಗಬಾರದು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕಿ ಡಾ. ರಜನಿ ವೈದ್ಯರಿಗೆ ಕರೆ ನೀಡಿದರು.

ಬಂಗಾರಪೇಟೆ ರಸ್ತೆಯ ಹಂಚಾಳದ 'ಜಿಯಾನ್ ಹಿಲ್ಸ್'ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸಂಸ್ಥೆಗಳ ವೈದ್ಯರಿಗಾಗಿ ಏರ್ಪಡಿಸಲಾಗಿದ್ದ 'ತಾಯಿ ಮತ್ತು ಶಿಶು ಮರಣ ತಡೆಗಟ್ಟುವ ಕುರಿತ ಕಾರ್ಯಗಾರ'ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತಾಯಿ ಮತ್ತು ಶಿಶು ಮರಣ ಪ್ರಮಾಣವು ಕೇವಲ ಅಂಕಿ-ಅಂಶಗಳಲ್ಲ, ಅದು ಇಡೀ ರಾಷ್ಟ್ರದ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಯನ್ನು ಪ್ರತಿಬಿಂಬಿಸುವ ಕನ್ನಡಿಯಾಗಿದೆ. ತಡೆಗಟ್ಟಬಹುದಾದ ಕಾರಣಗಳಿಂದಾಗಿ ಗರ್ಭಿಣಿ ಅಥವಾ ಶಿಶು ಮರಣ ಹೊಂದಿದರೆ ಅದು ದೊಡ್ಡ ಅಪರಾಧ. ವೈದ್ಯರು ಹೆರಿಗೆಯ ಸಂದರ್ಭದಲ್ಲಿ ಎದುರಾಗುವ ಸಂಕೀರ್ಣತೆಗಳನ್ನು ಎದುರಿಸಲು ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಬೇಕು ಹಾಗೂ 'ಗೋಲ್ಡನ್ ಮಿನಿಟ್' ಪರಿಕಲ್ಪನೆಯಡಿ ಜನಿಸಿದ ಮಗುವಿನ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.

ಕೋಲಾರ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಮಾತನಾಡಿ ಸರ್ಕಾರಿ ಇಲಾಖೆಗಳಲ್ಲಿ ಸಮನ್ವಯದ ಕೊರತೆ ಇರುತ್ತದೆ ಎಂಬ ಸಾಮಾನ್ಯ ಮಾತಿದೆ. ಆದರೆ ಕೋಲಾರದಲ್ಲಿ ತಾಯಿ-ಶಿಶು ಮರಣ ತಡೆಯಲು ಜಾರಿಗೆ ತಂದಿರುವ ಈ ಮಾದರಿಯು ಇಲಾಖೆಗಳ ನಡುವಿನ ಅತ್ಯುತ್ತಮ ಸಮನ್ವಯಕ್ಕೆ ಒಂದು ಶ್ರೇಷ್ಠ ಉದಾಹರಣೆಯಾಗಿದೆ. ಆರ್.ಎಲ್. ಜಾಲಪ್ಪ ಆಸ್ಪತ್ರೆಯಂತಹ ಖಾಸಗಿ ಸಂಸ್ಥೆಗಳು ಹಾಗೂ ವೈದ್ಯರು ಈ ಅಭಿಯಾನದಲ್ಲಿ ಕೈಜೋಡಿಸಿ ಉಚಿತ ಸೇವೆ ನೀಡಲು ಮುಂದೆ ಬಂದಿರುವುದು ಅಭಿನಂದನಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಿಶು ಮರಣ ಪ್ರಮಾಣವನ್ನು ತಗ್ಗಿಸಲು ಗರ್ಭಿಣಿಯರ ಆರೋಗ್ಯವನ್ನು ಆಶಾ ಕಾರ್ಯಕರ್ತೆಯರು ಒಂಬತ್ತು ತಿಂಗಳ ಕಾಲ ಸಂಪೂರ್ಣವಾಗಿ ಟ್ರ್ಯಾಕ್ ಮಾಡಬೇಕು. ಪ್ರಸ್ತುತ ವಾಟ್ಸಾಪ್ ಗ್ರೂಪ್ ಮೂಲಕ ಮಾಹಿತಿ ಹಂಚಿಕೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಇದಕ್ಕಾಗಿ ಪ್ರತ್ಯೇಕ ಸಾಫ್ಟ್ವೇರ್ ಅಥವಾ ಆಪ್ ಅಭಿವೃದ್ಧಿಪಡಿಸುವ ಮೂಲಕ ವ್ಯವಸ್ಥೆಯನ್ನು ಮತ್ತಷ್ಟು ಸುಲಭಗೊಳಿಸಲಾಗುವುದು. ಸರ್ಕಾರಿ ಸೇವೆಯಲ್ಲಿರುವ ವೈದ್ಯರೇ ಅತ್ಯುತ್ತಮ ಪ್ರತಿಭಾವಂತರು . ವೈದ್ಯರು ರೋಗಿಗಳ ಕೇವಲ ದೈಹಿಕ ಆರೋಗ್ಯದ ಕಡೆಗಷ್ಟೇ ಅಲ್ಲದೆ, ಮಾನಸಿಕ ಆರೋಗ್ಯದ ಕಡೆಗೂ ಗಮನಹರಿಸಿ, ಮಾನವೀಯತೆಯಿಂದ ಸ್ಪಂದಿಸಬೇಕು ಎಂದು ಹೇಳಿದರು

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಿ. ಶ್ರೀನಿವಾಸ್ ಮಾತನಾಡಿ ತಾಯಿ-ಶಿಶು ಮರಣ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವ ನಿಟ್ಟಿನಲ್ಲಿ ಕೋಲಾರ ಜಿಲ್ಲೆಯಲ್ಲಿ ಜಾರಿಗೆ ತರಲಾಗಿರುವ ನೂತನ 'ಟ್ರಿಪಲ್ ಆರ್' (ಖಖಖ) ಮಾದರಿಯನ್ನು ವಿವರಿಸಿದರು.

ಹೆರಿಗೆಗೆ ೧.೫ ರಿಂದ ೨ ತಿಂಗಳಿರುವಾಗಲೇ ಗರ್ಭಿಣಿಯ ಆರೋಗ್ಯವನ್ನು ಮರು-ಪರಿಶೀಲಿಸಿ ಅಪಾಯಕಾರಿ ಅಂಶಗಳನ್ನು ಗುರುತಿಸುವುದು. ಹೆರಿಗೆಯ ಲಕ್ಷಣಗಳು ಕಾಣಿಸಿಕೊಂಡ ತಕ್ಷಣವೇ ಗರ್ಭಿಣಿಯನ್ನು ಹೆರಿಗೆ ಆಸ್ಪತ್ರೆಗೆ ಸ್ಥಳಾಂತರಿಸುವುದರಲ್ಲಿ ಆಗುವ ವಿಳಂಬವನ್ನು ತಪ್ಪಿಸುವುದು. ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆ ಫಲಕಾರಿಯಾಗದಿದ್ದಾಗ, ಹೆಚ್ಚಿನ ಚಿಕಿತ್ಸೆಗಾಗಿ ಮೇಲ್ದರ್ಜೆಯ ಆಸ್ಪತ್ರೆಗಳಿಗೆ ರೋಗಿಗಳನ್ನು ತಕ್ಷಣವೇ ಶಿಫಾರಸು ಮಾಡುವುದು.

ಈ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಲು ಮಾನ್ಯ ಜಿಲ್ಲಾಧಿಕಾರಿಗಳು ಸಂಪೂರ್ಣ ಬೆಂಬಲ ನೀಡಿದ್ದು, ಖಾಸಗಿ ಆಸ್ಪತ್ರೆಗಳು ಕೂಡ ರೆಫರ್ ಆದ ರೋಗಿಗಳಿಗೆ ಉಚಿತ ಸೇವೆ ನೀಡಲು ಮುಂದೆ ಬಂದಿರುವುದು ಶ್ಲಾಘನೀಯ ಎಂದು ಡಾ. ಶ್ರೀನಿವಾಸ್ ತಿಳಿಸಿದರು.

ತಮ್ಮ ಆಡಳಿತಾತ್ಮಕ ಬೆಂಬಲದ ಮೂಲಕ ವೈದ್ಯರ ನೈತಿಕ ಸ್ಥೈರ್ಯವನ್ನು ಹೆಚ್ಚಿಸುವಲ್ಲಿ ಜಿಲ್ಲಾಧಿಕಾರಿಗಳ ಪಾತ್ರವನ್ನು ವೇದಿಕೆಯಲ್ಲಿದ್ದ ಗಣ್ಯರು ಮುಕ್ತಕಂಠದಿAದ ಸ್ಮರಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ. ಚಾರಿಣಿ ಎಂ.ಎ. ಅವರು ಪ್ರಸ್ತುತ ತಾಯಿ ಮತ್ತು ಶಿಶು ಮರಣ (ಪೂರ್ವ ಮತ್ತು ನಂತರ) ಕುರಿತ ಖಖಖ ಪಕ್ಷಿನೋಟವನ್ನು ಮಂಡಿಸಿದರು.

ಕಾರ್ಯಕ್ರಮದಲ್ಲಿ ತಾಯಿ ಆರೋಗ್ಯ ವಿಭಾಗದ ಉಪನಿರ್ದೇಶಕ ಡಾ. ರಾಜ್ ಕುಮಾರ್, ಎಸ್ಎನ್ಆರ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಮೊಹಮ್ಮದ್ ಷರೀಫ್, ಆರ್ಎಲ್ ಜಾಲಪ್ಪ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಭಾಕರ್, ಐಎಂಎ ಅಧ್ಯಕ್ಷರಾದ ಡಾ. ನಾರಾಯಣ ಸ್ವಾಮಿ ಹಾಗೂ ಮಕ್ಕಳ ವೈದ್ಯರ ಸಂಘದ ಅಧ್ಯಕ್ಷ ಡಾ. ಬೀರೇಗೌಡ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande