
ಗದಗ, 10 ಜುಲೈ (ಹಿ.ಸ.)
ಆ್ಯಂಕರ್:- ಗದಗ ಜಿಲ್ಲೆಯ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕಾರ್ಯ ಚುರುಕುಗೊಂಡಿದ್ದು, ಬೂತ್ ಮಟ್ಟದ ಅಧಿಕಾರಿಗಳು (ಬಿ.ಎಲ್.ಓಗಳು) ಮನೆ ಮನೆಗೆ ಭೇಟಿ ನೀಡಿ ಮತದಾರರಿಗೆ ಎನ್ಯುಮರೇಷನ್ ಫಾರ್ಮಗಳನ್ನು ವಿತರಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 9,02,947 ಮತದಾರರು ಹಾಗೂ 967 ಮತಗಟ್ಟೆಗಳು ಇದ್ದು, ಪ್ರತಿಯೊಬ್ಬ ಮತದಾರರ ಮಾಹಿತಿಯನ್ನು ಪರಿಷ್ಕರಿಸುವ ಉದ್ದೇಶದಿಂದ ಎಸ್ಐಆರ್ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಈ ಪ್ರಕ್ರಿಯೆಯಡಿ ಬಿ.ಎಲ್.ಓಗಳು ಜುಲೈ 29ರವರೆಗೆ ಮನೆ ಮನೆಗೆ ತೆರಳಿ ಎನ್ಯುಮರೇಷನ್ ಫಾರ್ಮಗಳನ್ನು ವಿತರಿಸುವುದರ ಜೊತೆಗೆ ಭರ್ತಿ ಮಾಡಿದ ಅರ್ಜಿಗಳನ್ನು ಸಂಗ್ರಹಿಸಲಿದ್ದಾರೆ.
ಜಿಲ್ಲಾಡಳಿತದ ಮಾಹಿತಿ ಪ್ರಕಾರ, ಜುಲೈ 9ರವರೆಗೆ ಒಟ್ಟು 8,90,698 ಎನ್ಯುಮರೇಷನ್ ಫಾರ್ಮಗಳನ್ನು ವಿತರಿಸಲಾಗಿದ್ದು, 96,711 ಫಾರ್ಮಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಉಳಿದ ಅರ್ಜಿಗಳ ಡಿಜಿಟಲೀಕರಣ ಕಾರ್ಯವನ್ನು ಹಂತ ಹಂತವಾಗಿ ಮುಂದುವರಿಸಲಾಗುತ್ತಿದೆ.
ಮತದಾರರು ತಮ್ಮ ವೈಯಕ್ತಿಕ ವಿವರಗಳನ್ನು ಪರಿಶೀಲಿಸಿ, ಅಗತ್ಯ ದಾಖಲೆಗಳೊಂದಿಗೆ ಎನ್ಯುಮರೇಷನ್ ಫಾರ್ಮವನ್ನು ಸರಿಯಾಗಿ ಭರ್ತಿ ಮಾಡಿ ಬಿ.ಎಲ್.ಓಗಳಿಗೆ ಸಲ್ಲಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ಮತದಾರರ ಪಟ್ಟಿಯನ್ನು ದೋಷರಹಿತ ಹಾಗೂ ನಿಖರಗೊಳಿಸುವ ಉದ್ದೇಶದಿಂದ ನಡೆಯುತ್ತಿರುವ ಈ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ಕೆ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP