ಏತ ನೀರಾವರಿ ಯೋಜನೆಗಳಿಗೆ ವಿದ್ಯುತ್ ಕಡಿತ: ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ
ಬೆಂಗಳೂರು, 10 ಜುಲೈ (ಹಿ.ಸ.): ಆ್ಯಂಕರ್: ರಾಜ್ಯದ 350ಕ್ಕೂ ಹೆಚ್ಚು ಏತ ನೀರಾವರಿ ಯೋಜನೆಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿರುವ ವಿಚಾರವನ್ನು ಮುಂದಿಟ್ಟುಕೊಂಡು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್
ಅಶೋಕ ಸಂಗ್ರಹ ಚಿತ್ರ


ಬೆಂಗಳೂರು, 10 ಜುಲೈ (ಹಿ.ಸ.):

ಆ್ಯಂಕರ್:

ರಾಜ್ಯದ 350ಕ್ಕೂ ಹೆಚ್ಚು ಏತ ನೀರಾವರಿ ಯೋಜನೆಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿರುವ ವಿಚಾರವನ್ನು ಮುಂದಿಟ್ಟುಕೊಂಡು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ, ಸರ್ಕಾರದ ಆಡಳಿತ ವೈಫಲ್ಯದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿದ್ದಾರೆ.

ಅಧಿಕಾರಕ್ಕೆ ಬಂದರೆ ರೈತರ ಪರವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದ ಕಾಂಗ್ರೆಸ್ ಸರ್ಕಾರವೇ ಇಂದು ಕೃಷಿ ವಲಯವನ್ನು ಸಂಕಷ್ಟಕ್ಕೆ ತಳ್ಳಿದೆ ಎಂದು ಅವರು ಟೀಕಿಸಿದ್ದಾರೆ. ಮಳೆ ಕೊರತೆಯಿಂದ ಈಗಾಗಲೇ ಕಂಗಾಲಾಗಿರುವ ರೈತರಿಗೆ ನೆರವಾಗಬೇಕಾದ ಸರ್ಕಾರ, ವಿದ್ಯುತ್ ಬಿಲ್ ಪಾವತಿಸದ ಕಾರಣ 350ಕ್ಕೂ ಹೆಚ್ಚು ಎತ್ತ ನೀರಾವರಿ ಯೋಜನೆಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಇದರಿಂದ ರೈತರ ಬೆಳೆಗಳಿಗೆ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಜಲಸಂಪನ್ಮೂಲ ಇಲಾಖೆ ಸುಮಾರು ₹5,000 ಕೋಟಿ ವಿದ್ಯುತ್ ಬಾಕಿ ಉಳಿಸಿಕೊಂಡಿದ್ದು, ಕಳೆದ ಮೂರು ವರ್ಷಗಳಿಂದ ಆ ಇಲಾಖೆಯ ಜವಾಬ್ದಾರಿಯನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿರ್ವಹಿಸುತ್ತಿದ್ದರು ಎಂದು ಅಶೋಕ್ ಆರೋಪಿಸಿದ್ದಾರೆ. ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳು ಒಟ್ಟಾರೆ ₹12,000 ಕೋಟಿಗೂ ಅಧಿಕ ಮೊತ್ತವನ್ನು ಎಸ್ಕಾಂಗಳಿಗೆ ಬಾಕಿ ಉಳಿಸಿಕೊಂಡಿರುವುದರಿಂದ ಇಂಧನ ವಲಯವೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂದು ದೂರಿದ್ದಾರೆ.

ತುಂಗಾ, ತುಂಗಭದ್ರಾ ಹಾಗೂ ವರದಾ ನದಿಗಳಲ್ಲಿ ನೀರು ಲಭ್ಯವಿದ್ದರೂ, ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಕೆರೆಗಳಿಗೆ ನೀರು ತುಂಬಿಸಲು ಸಾಧ್ಯವಾಗುತ್ತಿಲ್ಲ. ಇದು ಆಡಳಿತದ ಸಂಪೂರ್ಣ ವೈಫಲ್ಯವಾಗಿದ್ದು, ರೈತರಿಗೆ ಆಗುತ್ತಿರುವ ಅನ್ಯಾಯ ಎಂದು ಅವರು ಹೇಳಿದ್ದಾರೆ.

ಬಾಕಿ ಸಮಸ್ಯೆ ಬಗೆಹರಿಸುವ ಬದಲು ಸರ್ಕಾರ ಈಗ ಮುಂಗಡ ಹಣ ಪಾವತಿ (ಪ್ರೀ-ಪೇಯ್ಡ್) ವ್ಯವಸ್ಥೆ ಜಾರಿಗೆ ತರುವ ಬಗ್ಗೆ ಮಾತನಾಡುತ್ತಿರುವುದು ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಎಂದು ಅಶೋಕ್ ಟೀಕಿಸಿದ್ದಾರೆ. ಸರ್ಕಾರದ ಇಲಾಖೆಗಳ ನಡುವಿನ ಸಮನ್ವಯದ ಕೊರತೆ, ಅಸಮರ್ಥ ಆಡಳಿತ ಮತ್ತು ಆರ್ಥಿಕ ದುರ್ವ್ಯವಸ್ಥೆಯ ಹೊರೆ ರೈತರ ಮೇಲೆ ಬೀಳಬಾರದು ಎಂದು ಅವರು ಒತ್ತಾಯಿಸಿದ್ದಾರೆ.

ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯದ ಖಜಾನೆ ಖಾಲಿಯಾಗಿದೆ. ಅಭಿವೃದ್ಧಿ ಯೋಜನೆಗಳಿಗೆ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಅದರ ಪರಿಣಾಮವಾಗಿ ರೈತರು ಕತ್ತಲಲ್ಲಿ ಕುಳಿತುಕೊಳ್ಳುವಂತಾಗಿದೆ ಎಂದು ಆರೋಪಿಸಿರುವ ಅಶೋಕ್, ಕೂಡಲೇ ₹5,000 ಕೋಟಿ ವಿದ್ಯುತ್ ಬಾಕಿಯನ್ನು ಬಿಡುಗಡೆ ಮಾಡಿ, ಸ್ಥಗಿತಗೊಂಡಿರುವ ಎಲ್ಲಾ ಎತ್ತ ನೀರಾವರಿ ಯೋಜನೆಗಳ ವಿದ್ಯುತ್ ಸಂಪರ್ಕವನ್ನು ಮರುಸ್ಥಾಪಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಸರ್ಕಾರ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ರೈತರ ಪರವಾಗಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಪ್ರತಿಪಕ್ಷ ನಾಯಕ ಆರ್. ಅಶೋಕ್ ಎಚ್ಚರಿಕೆ ನೀಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande