



ಕೊಪ್ಪಳ, 10 ಜುಲೈ (ಹಿ.ಸ.)
ಆ್ಯಂಕರ್: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಹಾಗೂ ಕಲಿಕಾ ಟಾಟಾ ಟ್ರಸ್ಟ್ ಸಹಯೋಗದೊಂದಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಕೊಪ್ಪಳ ಯೋಜನೆಯ ಹಿರೇ ಸೂಳಿಕೇರಿ ತಾಂಡಾದಲ್ಲಿ ಅಂಗನವಾಡಿ ಮಕ್ಕಳಿಗೆ ಅಕ್ಷರಾಭ್ಯಾಸ ಹಾಗೂ ಒಂದನೇ ತರಗತಿಗೆ ಹೋಗುವ 10 ಮಕ್ಕಳಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಅಂಗನವಾಡಿಗೆ ಪ್ರವೇಶ ಪಡೆಯುವ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವ ಮೂಲಕ ಅಂಗನವಾಡಿಯಲ್ಲಿ ಮೂರು ವರ್ಷ ಶಾಲಾ ಪೂರ್ವ ಶಿಕ್ಷಣ ಅಧ್ಯಯನ ಮಾಡಿ ಒಂದನೇ ತರಗತಿಗೆ ಹೋಗುವ ಮಕ್ಕಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ಮಾಡಲಾಯಿತು ಹಾಗೂ ಅತಿಥಿಗಳಿಂದ ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಮಾಡಿಸಲಾಯಿತು.
ಒಂದನೇ ತರಗತಿಗೆ ಹೋಗುವ ಮಕ್ಕಳು ಪ್ರಸ್ತುತ ಇಲ್ಲಿಯವರೆಗೆ ಅಂಗನವಾಡಿಯಲ್ಲಿ ಕಲಿತ ಚಟುವಟಿಕೆಗಳು, ಆಕಾರಗಳು, ಬಣ್ಣಗಳು, ಅಂಕಿಗಳು, ಅಂಗನವಾಡಿ ನಿಯಮಗಳು, ಶಿಶು ಗೀತೆಗಳು, ಚಿಕ್ಕದು ದೊಡ್ಡದು, ಭೌತಿಕ ಚಟುವಟಿಕೆ ಹಾಗೂ ಅಂಕಿಗಳ ಕುರಿತು ಮಕ್ಕಳಿಂದ ಚಟುವಟಿಕೆ ಮಾಡಿಸಲಾಯಿತು. ಕಾರ್ಯಕ್ರಮಕ್ಕೆ ಶಾಲಾಪೂರ್ವ ಶಿಕ್ಷಣದ ಕುರಿತು ಮಾಹಿತಿ ನೀಡಿ ಮಕ್ಕಳು ಚಟುವಟಿಕೆ ಆಧಾರಿತ ಶಿಕ್ಷಣವನ್ನು ನೀಡುವಲ್ಲಿ ಶಾಲಾ ಪೂರ್ವ ಶಿಕ್ಷಣವು ಯಶಸ್ವಿ ಕಾರ್ಯಕ್ರಮವಾಗಿರುತ್ತದೆ. ಮಕ್ಕಳಿಗೆ ಅಂಗನವಾಡಿ ಕೇಂದ್ರವು ಭದ್ರಬುನಾದಿಯಾಗಿ ಕೆಲಸ ನಿರ್ವಹಿಸುತ್ತದೆ ಎಂದು ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸಿದ್ದಪ್ಪ ಕುರಿ ಹೇಳಿದರು.
ಪ್ರಾಥಮಿಕ ಶಾಲಾ ಮುಖ್ಯ ಗುರುಗಳಾದ ಹನುಮಂತಪ್ಪ ಮಾತನಾಡಿ, ನಾವು ಕಲಿಯುವಾಗ ಯಾವುದೇ ಚಟುವಟಿಕೆಯನ್ನು ಮಾಡುತ್ತಿರಲಿಲ್ಲ. ಇಂದಿನ ಮಕ್ಕಳು ಕಂಪ್ಯೂಟರ್ನಂತೆ ಉತ್ತರವನ್ನು ನೀಡುತ್ತಾರೆ. ಅಂಗನವಾಡಿಯಲ್ಲಿ ಕಲಿತ ಮಕ್ಕಳು ಒಂದನೇ ತರಗತಿಗೆ ಬಂದಾಗ ಧೈರ್ಯವಾಗಿ ಉತ್ತರಿಸುವ ಮತ್ತು ಪ್ರತಿದಿನ ಶಾಲೆಗೆ ಬರುವ ಹವ್ಯಾಸವನ್ನು ರೂಢಿಸಿಕೊಂಡಿದ್ದಾರೆ. ಇದು ನಮಗೆ ಬಹಳ ಖುಷಿಯನ್ನು ತಂದುಕೊಡುತ್ತದೆ. ಮಕ್ಕಳ ತೊದಲು ನುಡಿಯಲ್ಲಿ ಚಟುವಟಿಕೆಗಳನ್ನು ಮಾಡುವುದನ್ನು ನೋಡಿದಾಗ ಬಹಳ ಖುಷಿ ಆಗುತ್ತದೆ ಎಂದು ಹೇಳಿದರು. ಹಾಗೆಯೇ ಪಾಲಕರು ಕೂಡ ಇನ್ನು ಮೇಲೆ ತಪ್ಪದೇ ಸಹಾಯಕಿ ಅಂಗನವಾಡಿಗೆ ಕರೆದುಕೊಂಡು ಹೋಗುವ ಮೊದಲು ಮಕ್ಕಳನ್ನು ಶಾಲೆಗೆ ತಯಾರಿ ಮಾಡಿ ಕಳಿಸುತ್ತೇವೆ ಎಂದು ಸಭೆಯಲ್ಲಿ ಹೇಳಿಕೊಂಡರು.
ಕಾರ್ಯಕ್ರಮದಲ್ಲಿ ಮೇಲ್ವಿಚಾರಕರು ಕಾರ್ಯಕ್ರಮ ನಿರೂಪಿಸಿದರು. ಅಂಗನವಾಡಿ ಶಿಕ್ಷಕಿಯರು ಮತ್ತು ಸಹಾಯಕಿಯರು, ಶಾಲಾ ಅಧ್ಯಕ್ಷರು, ಬಾಲ ವಿಕಾಸ ಕಮಿಟಿ ಅಧ್ಯಕ್ಷರು ಹಾಗೂ ಪ್ರಾಥಮಿಕ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಕೃಷ್ಣಪ್ಪ, ಮೇಲ್ವಿಚಾರಕಿ ಮಂಜುಳಾ ಕುಂಬಾರ್, ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕರು ಸೇರಿದಂತೆ ಇನ್ನಿತರರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್