ರೋಣ–ಗಜೇಂದ್ರಗಡದಲ್ಲಿ ವಿಬಿ-ಜಿ ರಾಮ್ (ಜಿ) ಯೋಜನೆಗೆ ಭರದ ಸಿದ್ಧತೆ
ಗದಗ, 10 ಜುಲೈ (ಹಿ.ಸ.) ಆ್ಯಂಕರ್:- ಗ್ರಾಮೀಣ ಪ್ರದೇಶದ ಕೂಲಿಕಾರರು ಉದ್ಯೋಗಕ್ಕಾಗಿ ಊರು ಬಿಟ್ಟು ವಲಸೆ ಹೋಗುವ ಪರಿಸ್ಥಿತಿಗೆ ಕಡಿವಾಣ ಹಾಕುವ ಉದ್ದೇಶದಿಂದ ಜಾರಿಯಾಗುತ್ತಿರುವ ವಿಬಿ-ಜಿ ರಾಮ್ (ಜಿ) ಯೋಜನೆ ಅನುಷ್ಠಾನಕ್ಕೆ ರೋಣ ಹಾಗೂ ಗಜೇಂದ್ರಗಡ ತಾಲೂಕುಗಳಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ. ಯೋಜನೆಯ
ಫೋಟೋ


ಗದಗ, 10 ಜುಲೈ (ಹಿ.ಸ.)

ಆ್ಯಂಕರ್:- ಗ್ರಾಮೀಣ ಪ್ರದೇಶದ ಕೂಲಿಕಾರರು ಉದ್ಯೋಗಕ್ಕಾಗಿ ಊರು ಬಿಟ್ಟು ವಲಸೆ ಹೋಗುವ ಪರಿಸ್ಥಿತಿಗೆ ಕಡಿವಾಣ ಹಾಕುವ ಉದ್ದೇಶದಿಂದ ಜಾರಿಯಾಗುತ್ತಿರುವ ವಿಬಿ-ಜಿ ರಾಮ್ (ಜಿ) ಯೋಜನೆ ಅನುಷ್ಠಾನಕ್ಕೆ ರೋಣ ಹಾಗೂ ಗಜೇಂದ್ರಗಡ ತಾಲೂಕುಗಳಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ. ಯೋಜನೆಯಡಿ ಅರ್ಹ ಗ್ರಾಮೀಣ ಕುಟುಂಬಗಳಿಗೆ ವರ್ಷಕ್ಕೆ 125 ದಿನಗಳ ಕೌಶಲರಹಿತ ಉದ್ಯೋಗ ಖಾತರಿ ಹಾಗೂ ದಿನಕ್ಕೆ ₹382 ಕೂಲಿ ನೀಡಲಾಗುತ್ತದೆ.

ಈ ಬಾರಿ ಮುಂಗಾರು ನಿರೀಕ್ಷೆಯಂತೆ ಆರಂಭವಾಗದ ಹಿನ್ನೆಲೆಯಲ್ಲಿ ಹಲವು ಗ್ರಾಮಗಳಲ್ಲಿ ಕೃಷಿ ಚಟುವಟಿಕೆಗಳು ವಿಳಂಬವಾಗಿವೆ. ಇದರಿಂದ ಕೃಷಿ ಕೂಲಿಕಾರರಿಗೆ ಉದ್ಯೋಗದ ಕೊರತೆ ಎದುರಾಗಿದ್ದು, ಇಂತಹ ಸಂದರ್ಭದಲ್ಲಿ ಸ್ಥಳೀಯ ಮಟ್ಟದಲ್ಲೇ ಉದ್ಯೋಗ ಒದಗಿಸುವ ಈ ಯೋಜನೆ ಗ್ರಾಮೀಣ ಕುಟುಂಬಗಳಿಗೆ ಮಹತ್ವದ ಆಸರೆಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಯೋಜನೆಯ ಆರಂಭಿಕ ಹಂತದಲ್ಲಿ ಈಗಾಗಲೇ ಇ-ಕೆವೈಸಿ ಪೂರ್ಣಗೊಳಿಸಿರುವ ಹಳೆಯ ನರೇಗಾ ಜಾಬ್ ಕಾರ್ಡ್ಗಳನ್ನು ಮಾನ್ಯಗೊಳಿಸಿ ಕೆಲಸ ನೀಡಲಾಗುತ್ತದೆ. ನಂತರ ಹಂತ ಹಂತವಾಗಿ ಎಲ್ಲ ಅರ್ಹ ಕುಟುಂಬಗಳಿಗೆ ಹೊಸ ಗ್ರಾಮೀಣ ರೋಜ್ಗಾರ್ ಗ್ಯಾರಂಟಿ ಕಾರ್ಡ್ ವಿತರಿಸಲಾಗುತ್ತದೆ. ಇದುವರೆಗೆ ಯಾವುದೇ ಉದ್ಯೋಗ ಖಾತರಿ ಯೋಜನೆಯಲ್ಲಿ ಹೆಸರು ನೋಂದಾಯಿಸದ ಕುಟುಂಬಗಳಿಗೂ ಹೊಸದಾಗಿ ಅರ್ಜಿ ಸಲ್ಲಿಸಿ ಯೋಜನೆಯ ಲಾಭ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ರೋಣ ಹಾಗೂ ಗಜೇಂದ್ರಗಡ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಯೋಜನೆ ಅನುಷ್ಠಾನಕ್ಕೆ ಅಗತ್ಯ ಪೂರ್ವಸಿದ್ಧತೆ ಕೈಗೊಳ್ಳಲಾಗಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ ಹಾಗೂ ಸಂಬಂಧಿತ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದ್ದು, ಗ್ರಾಮಸಭೆಗಳ ಮೂಲಕ ಕಾಮಗಾರಿಗಳ ಕ್ರಿಯಾ ಯೋಜನೆ ಸಿದ್ಧಪಡಿಸುವ ಕಾರ್ಯ ಪ್ರಗತಿಯಲ್ಲಿದೆ. ಜಲ ಸಂರಕ್ಷಣೆ, ಗ್ರಾಮೀಣ ರಸ್ತೆ ಮತ್ತು ಮೂಲಸೌಕರ್ಯ ಅಭಿವೃದ್ಧಿ, ಜೀವನೋಪಾಯ ವೃದ್ಧಿ ಹಾಗೂ ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ.

ಯೋಜನೆಯಲ್ಲಿ ಪಾರದರ್ಶಕತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಕೆಲಸದ ಸ್ಥಳಗಳಲ್ಲಿ ಫೇಸ್ ಅಥೆಂಟಿಕೇಶನ್ ಮೂಲಕ ಹಾಜರಾತಿ ದಾಖಲಿಸುವ ವ್ಯವಸ್ಥೆ ಜಾರಿಯಾಗಲಿದೆ. ಕಾರ್ಮಿಕರಿಗೆ ಸುರಕ್ಷಿತ ಕುಡಿಯುವ ನೀರು, ನೆರಳು, ವಿಶ್ರಾಂತಿ ಸೌಲಭ್ಯ ಹಾಗೂ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಒದಗಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ತಾಂತ್ರಿಕ ಸಮಸ್ಯೆಗಳು ಎದುರಾದರೆ ಸರ್ಕಾರದ ಮಾರ್ಗಸೂಚಿಯಂತೆ ಪರ್ಯಾಯ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ.

ಕೃಷಿ ಹಂಗಾಮಿನಲ್ಲಿ ರೈತರಿಗೆ ಕಾರ್ಮಿಕರ ಕೊರತೆ ಉಂಟಾಗದಂತೆ ಬಿತ್ತನೆ ಮತ್ತು ಕೊಯ್ಲಿನ ಅವಧಿಯಲ್ಲಿ ಯೋಜನೆಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳದಂತೆ ಯೋಜನೆ ರೂಪಿಸಲಾಗಿದೆ. ಉಳಿದ ಅವಧಿಯಲ್ಲಿ ಹೆಚ್ಚಿನ ಕಾಮಗಾರಿಗಳನ್ನು ಆರಂಭಿಸಿ ಗ್ರಾಮೀಣ ಕುಟುಂಬಗಳಿಗೆ ನಿರಂತರ ಉದ್ಯೋಗ ದೊರೆಯುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳೊಂದಿಗೆ ಸಮನ್ವಯ ಸಾಧಿಸಿ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೂ ಆದ್ಯತೆ ನೀಡಲಾಗುತ್ತಿದೆ.

ಈ ಕುರಿತು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ. ಕಂದಕೂರ ಮಾತನಾಡಿ, ವಿಬಿ-ಜಿ ರಾಮ್ (ಜಿ) ಯೋಜನೆ ಅನುಷ್ಠಾನಕ್ಕೆ ತಾಲೂಕು ಮಟ್ಟದಲ್ಲಿ ಅಗತ್ಯ ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ. ಗ್ರಾಮ ಪಂಚಾಯಿತಿಗಳಿಗೆ ತರಬೇತಿ ಹಾಗೂ ಮಾರ್ಗದರ್ಶನ ನೀಡಲಾಗಿದೆ. ಅರ್ಹ ಗ್ರಾಮೀಣ ಕುಟುಂಬಗಳಿಗೆ ಸ್ಥಳೀಯ ಮಟ್ಟದಲ್ಲೇ ಉದ್ಯೋಗ ದೊರೆಯುವಂತೆ ಕ್ರಮವಹಿಸಿದ್ದು, ಎಲ್ಲ ಅರ್ಹ ಕಾರ್ಮಿಕರು ಯೋಜನೆಯ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು, ಎಂದು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande