ಬೆಂಗಳೂರಿಗರಿಗೆ ಉತ್ತಮ ನಗರ ನಿರ್ಮಾಣ ಗುರಿ: ಕೃಷ್ಣ ಬೈರೇಗೌಡ
Karnataka Minister Krishna Byre Gowda said improving Bengaluru's livability by addressing traffic congestion, poor roads, waste management, and flooding will be the top priority before pursuing the vision of making the city a global metropolis.
ಜಾಗತಿಕ ನಗರ ಕನಸಿಗಿಂತ ಮೊದಲು ಬೆಂಗಳೂರಿಗರಿಗೆ ಉತ್ತಮ ಜೀವನಮಟ್ಟವೇ ಆದ್ಯತೆ. ಟ್ರಾಫಿಕ್, ರಸ್ತೆ, ತ್ಯಾಜ್ಯ ಮತ್ತು ಮಳೆ ನೀರಿನ ಸಮಸ್ಯೆಗಳಿಗೆ ಪರಿಹಾರವೇ ಮೊದಲ ಗುರಿ, ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ


ಬೆಂಗಳೂರು, 10 ಜುಲೈ (ಹಿ.ಸ.)

ಆ್ಯಂಕರ್:

ಬೆಂಗಳೂರು ಜಾಗತಿಕ ನಗರವಾಗಬೇಕು ಎಂಬ ಕನಸು ಎಲ್ಲರಿಗೂ ಇದೆ. ಆದರೆ ಅದಕ್ಕಿಂತ ಮುಖ್ಯವಾಗಿ ಈಗಾಗಲೇ ಇಲ್ಲಿ ವಾಸಿಸುತ್ತಿರುವ ಬೆಂಗಳೂರಿಗರಿಗೆ ಉತ್ತಮ ಜೀವನಮಟ್ಟ ಹೊಂದಿರುವ ನಗರವನ್ನು ನಿರ್ಮಿಸುವುದೇ ನನ್ನ ಮೊದಲ ಆದ್ಯತೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಅವರು ನಗರದ ಅಭಿವೃದ್ಧಿ ಕುರಿತು ತಮ್ಮ ದೃಷ್ಟಿಕೋನವನ್ನು ವಿವರಿಸಿದ್ದಾರೆ.

ನಗರವನ್ನು ಜಾಗತಿಕ ಮಟ್ಟದ ನಗರವನ್ನಾಗಿ ರೂಪಿಸುವ ಕುರಿತು ದೀರ್ಘಾವಧಿಯ ಯೋಜನೆ, ವಿವಿಧ ಇಲಾಖೆಗಳ ಸಮನ್ವಯ, ಭವಿಷ್ಯದ ಬೆಳವಣಿಗೆಗೆ ಅಗತ್ಯವಾದ ಸ್ಥಳಾವಕಾಶ ಕಲ್ಪಿಸುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಬಹುದು. ಆದರೆ ಜನರನ್ನು ನೇರವಾಗಿ ಭೇಟಿಯಾದಾಗ ಅವರು ಮೊದಲು ಪ್ರಸ್ತಾಪಿಸುವ ಸಮಸ್ಯೆಗಳು ಟ್ರಾಫಿಕ್ ದಟ್ಟಣೆ, ಗುಂಡಿ ಬಿದ್ದ ರಸ್ತೆಗಳು, ತ್ಯಾಜ್ಯ ವಿಲೇವಾರಿ ಮತ್ತು ಮಳೆ ಬಂದಾಗ ಉಂಟಾಗುವ ಪ್ರವಾಹ ಪರಿಸ್ಥಿತಿ ಎಂದು ಹೇಳಿದರು.

ಈ ಸಮಸ್ಯೆಗಳಿಗೆ ಆದ್ಯತೆಯಾಗಿ ಪರಿಹಾರ ಕಂಡುಹಿಡಿದು ಬೆಂಗಳೂರಿನ ಜನರ ಜೀವನವನ್ನು ಹೆಚ್ಚು ಸುಗಮ ಮತ್ತು ನೆಮ್ಮದಿಯನ್ನಾಗಿಸುವುದೇ ತಮ್ಮ ಮೊದಲ ಗುರಿ ಎಂದು ಅವರು ತಿಳಿಸಿದರು. ಈ ಕ್ರಮವು ನಗರದ ಜೀವನಮಟ್ಟ ಹೆಚ್ಚಿಸಲು ನೇರವಾಗಿ ಸಹಕಾರಿಯಾಗಲಿದೆ ಎಂದರು.

ಕೃಷಿ, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಕಂದಾಯ ಸೇರಿದಂತೆ ಹಲವು ಕಠಿಣ ಇಲಾಖೆಗಳ ಜವಾಬ್ದಾರಿಯನ್ನು ನಿರ್ವಹಿಸಿರುವ ಅನುಭವವಿದ್ದರೂ, ಬೆಂಗಳೂರು ಅಭಿವೃದ್ಧಿಯ ಸವಾಲು ಅವುಗಳಿಗಿಂತಲೂ ಕಠಿಣವಾಗಿದೆ ಎಂದು ಕೃಷ್ಣ ಬೈರೇಗೌಡ ಅಭಿಪ್ರಾಯಪಟ್ಟಿದ್ದಾರೆ.

ಇದು ಕಳೆದ 30 ವರ್ಷಗಳಿಂದ ಸಂಗ್ರಹವಾಗಿರುವ ಸಮಸ್ಯೆಗಳ ಸವಾಲು. ಎಲ್ಲ ಸಮಸ್ಯೆಗಳನ್ನೂ ಕ್ಷಣಾರ್ಧದಲ್ಲಿ ಪರಿಹರಿಸಲು ಸಾಧ್ಯವಿಲ್ಲ. ಆದರೆ ಗಮನಾರ್ಹ ಸುಧಾರಣೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / SNEHA K


 rajesh pande