
ಬಾಗಲಕೋಟೆ, 10 ಜುಲೈ (ಹಿ.ಸ.)
ಆ್ಯಂಕರ್ : ಪರಿಸರ ಮತ್ತು ವನ್ಯಜೀವಿಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವಂತಹ ಅಪರೂಪದ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಕಿಶೋರಿ–ಮೆಳ್ಳಿಗೇರಿ ವ್ಯಾಪ್ತಿಯ ಯಡಹಳ್ಳಿ ಚೀಂಕಾರ ರಕ್ಷಿತಾರಣ್ಯದ ಮಧ್ಯೆ ಹಾದು ಹೋಗಿರುವ ಹಲಗಲಿ ಸಂಪರ್ಕ ರಸ್ತೆಯಲ್ಲಿ ನಡೆದಿದೆ. ರಸ್ತೆ ದಾಟಲು ಹೆಣಗಾಡುತ್ತಿದ್ದ ಹಸಿರು ಹಾವಿಗೆ ಪರಿಸರ ಸ್ನೇಹಿ ರಮೇಶ್ ಮೈದರಗಿ ಅವರು ಸುರಕ್ಷಿತವಾಗಿ ರಸ್ತೆ ದಾಟಲು ನೆರವಾಗುವ ಮೂಲಕ ಮಾನವೀಯತೆ ಹಾಗೂ ಪರಿಸರ ಕಾಳಜಿಗೆ ಮಾದರಿಯಾಗಿದ್ದಾರೆ.
ಮಳೆಗಾಲದ ಸಂದರ್ಭದಲ್ಲಿ ಕಾಡು ಪ್ರದೇಶಗಳಿಂದ ವಿವಿಧ ಜಾತಿಯ ಹಾವುಗಳು, ಕಾಡುಪ್ರಾಣಿಗಳು ಮತ್ತು ಇತರ ಜೀವಿಗಳು ಆಹಾರ ಹಾಗೂ ಆಶ್ರಯದ ಹುಡುಕಾಟದಲ್ಲಿ ರಸ್ತೆಗಳನ್ನು ದಾಟುವುದು ಸಾಮಾನ್ಯ. ಇದೇ ವೇಳೆ ವಾಹನಗಳ ವೇಗದ ಸಂಚಾರದಿಂದ ಅನೇಕ ಜೀವಿಗಳು ಅಪಘಾತಕ್ಕೆ ಒಳಗಾಗಿ ಸಾವನ್ನಪ್ಪುವ ಘಟನೆಗಳು ನಡೆಯುತ್ತವೆ. ಆದರೆ ಈ ಬಾರಿ ಪರಿಸರದ ಬಗ್ಗೆ ಕಾಳಜಿ ಹೊಂದಿದ್ದ ವ್ಯಕ್ತಿಯೊಬ್ಬರು ಸಮಯಪ್ರಜ್ಞೆ ಪ್ರದರ್ಶಿಸಿ, ಮರದ ಸಣ್ಣ ಕಟ್ಟಿಗೆಯ ನೆರವಿನಿಂದ ಹಾವನ್ನು ಯಾವುದೇ ಹಾನಿಯಾಗದಂತೆ ರಸ್ತೆ ದಾಟಿಸಿದರು.
ಈ ದೃಶ್ಯವನ್ನು ಅಲ್ಲಿದ್ದ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ವನ್ಯಜೀವಿಗಳೂ ಪ್ರಕೃತಿಯ ಅಮೂಲ್ಯ ಸಂಪತ್ತಾಗಿದ್ದು, ಅವುಗಳ ಜೀವಕ್ಕೂ ಸಮಾನ ಮೌಲ್ಯ ನೀಡಬೇಕು ಎಂಬ ಸಂದೇಶವನ್ನು ಈ ಘಟನೆ ಸಾರಿದೆ. ಹಾವನ್ನು ಕೈಯಿಂದ ಮುಟ್ಟದೆ, ಸುರಕ್ಷಿತ ಅಂತರ ಕಾಯ್ದುಕೊಂಡೇ ರಸ್ತೆ ದಾಟಿಸಿರುವ ಕ್ರಮವು ಸಾರ್ವಜನಿಕರಿಗೆ ಉತ್ತಮ ಮಾದರಿಯಾಗಿದೆ.
ಅರಣ್ಯ ಪ್ರದೇಶಗಳಲ್ಲಿ ವಾಹನ ಚಾಲಕರು ವೇಗ ನಿಯಂತ್ರಿಸಿ ಸಂಚರಿಸಿದರೆ ಇಂತಹ ವನ್ಯಜೀವಿಗಳ ಜೀವ ಉಳಿಸಲು ಸಾಧ್ಯವಾಗುತ್ತದೆ ಎಂದು ಪರಿಸರ ಪ್ರೇಮಿಗಳು ಅಭಿಪ್ರಾಯಪಟ್ಟಿದ್ದಾರೆ. ಅರಣ್ಯ ಇಲಾಖೆ ಸಹ ಸಾರ್ವಜನಿಕರು ವನ್ಯಜೀವಿಗಳನ್ನು ಕಂಡಾಗ ಅವುಗಳಿಗೆ ತೊಂದರೆ ನೀಡದೇ, ಸುರಕ್ಷಿತ ಅಂತರ ಕಾಯ್ದುಕೊಂಡು ಅಗತ್ಯವಿದ್ದರೆ ಪರಿಣಿತರ ನೆರವು ಪಡೆಯುವಂತೆ ಸಲಹೆ ನೀಡಿದೆ.
ಈ ಘಟನೆ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದ್ದು, ಪರಿಸರ ಸಂರಕ್ಷಣೆ ಹಾಗೂ ವನ್ಯ ಜೀವಿಗಳ ರಕ್ಷಣೆ ಎಂದರೆ ಕೇವಲ ಮರ ನೆಡುವುದಲ್ಲ, ಪ್ರತಿಯೊಂದು ಜೀವಿಯ ಬದುಕನ್ನು ಗೌರವಿಸುವ ಮನೋಭಾವವೂ ಆಗಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande