
ಬಾಗಲಕೋಟೆ, 10 ಜುಲೈ (ಹಿ.ಸ.)
ಆ್ಯಂಕರ್ : 2026–27ನೇ ಸಾಲಿನ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರಾಗಿ ಡಾ. ಕ್ಷಮತಾ ಕೆರೂಡಿ ಅವರು ಆಯ್ಕೆಯಾಗಿದ್ದು, ಬಾಗಲಕೋಟೆ ಜಿಲ್ಲೆಯ ಲಯನ್ಸ್ ಕ್ಲಬ್ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ಅಧ್ಯಕ್ಷೆಯಾಗಿ ಆಯ್ಕೆಯಾಗಿರುವುದು ವಿಶೇಷ ಹಾಗೂ ಹೆಮ್ಮೆಯ ಸಂಗತಿಯಾಗಿದೆ.
ಸಾಮಾಜಿಕ ಸೇವೆ, ಆರೋಗ್ಯ ಜಾಗೃತಿ, ಶಿಕ್ಷಣ, ಮಹಿಳಾ ಸಬಲೀಕರಣ ಹಾಗೂ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಡಾ. ಕ್ಷಮತಾ ಕೆರೂಡಿ ಅವರ ಆಯ್ಕೆ ಲಯನ್ಸ್ ಕ್ಲಬ್ ಸದಸ್ಯರಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಅವರ ನೇತೃತ್ವದಲ್ಲಿ ಕ್ಲಬ್ ಇನ್ನಷ್ಟು ಜನಪರ ಮತ್ತು ಸೇವಾಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂಬ ವಿಶ್ವಾಸ ಸದಸ್ಯರು ವ್ಯಕ್ತಪಡಿಸಿದ್ದಾರೆ.
ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಡಾ. ಕ್ಷಮತಾ ಕೆರೂಡಿ, ಲಯನ್ಸ್ ಕ್ಲಬ್ ಧ್ಯೇಯೋದ್ದೇಶಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವ ಸಂಕಲ್ಪ ವ್ಯಕ್ತಪಡಿಸಿದರು. ಆರೋಗ್ಯ ಶಿಬಿರಗಳು, ರಕ್ತದಾನ ಶಿಬಿರಗಳು, ಪರಿಸರ ಸಂರಕ್ಷಣೆ, ವಿದ್ಯಾರ್ಥಿಗಳಿಗೆ ನೆರವು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ತಿಳಿಸಿದರು.
ಲಯನ್ಸ್ ಕ್ಲಬ್ ಪದಾಧಿಕಾರಿಗಳು ಹಾಗೂ ಸದಸ್ಯರು ಡಾ. ಕ್ಷಮತಾ ಕೆರೂಡಿ ಅವರಿಗೆ ಅಭಿನಂದನೆ ಸಲ್ಲಿಸಿ, ಅವರ ನಾಯಕತ್ವದಲ್ಲಿ ಸಂಸ್ಥೆ ಮತ್ತಷ್ಟು ಎತ್ತರಕ್ಕೆ ಬೆಳೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ವಿವಿಧ ಸಾಮಾಜಿಕ, ಶೈಕ್ಷಣಿಕ ಹಾಗೂ ಸಾರ್ವಜನಿಕ ವಲಯದ ಗಣ್ಯರು ಕೂಡ ಶುಭಾಶಯಗಳನ್ನು ತಿಳಿಸಿ, ಅವರ ಅವಧಿ ಯಶಸ್ವಿಯಾಗಲಿ ಎಂದು ಹಾರೈಸಿದರು.
ಬಾಗಲಕೋಟೆಯಲ್ಲಿ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಈ ಸಾಧನೆ ಮಹಿಳಾ ನಾಯಕತ್ವಕ್ಕೆ ಹೊಸ ಮೈಲಿಗಲ್ಲಾಗಿದ್ದು, ಸಮಾಜ ಸೇವೆಯಲ್ಲಿ ಮಹಿಳೆಯರ ಪಾತ್ರವನ್ನು ಇನ್ನಷ್ಟು ಬಲಪಡಿಸುವ ಮಹತ್ವದ ಬೆಳವಣಿಗೆಯಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande