
ಗದಗ, 10 ಜುಲೈ (ಹಿ.ಸ.)
ಆ್ಯಂಕರ್:- ಭಾರತೀಯ ಸನಾತನ ಸಂಸ್ಕೃತಿಯಲ್ಲಿರುವ ಸಂಪ್ರದಾಯಗಳು ಕೇವಲ ಆಚರಣೆಗಳಲ್ಲ; ಅವುಗಳ ಹಿಂದೆ ವೈಜ್ಞಾನಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಮಹತ್ವ ಅಡಗಿದೆ. ವಿಶೇಷವಾಗಿ ಮಹಿಳೆಯರ ಗೌರವ, ಸುರಕ್ಷತೆ ಮತ್ತು ಸಾಮಾಜಿಕ ಸ್ಥಾನಮಾನವನ್ನು ಕಾಪಾಡುವ ಉದ್ದೇಶದಿಂದ ಹಿರಿಯರು ರೂಪಿಸಿದ ಪದ್ಧತಿಗಳನ್ನು ಇಂದಿನ ಪೀಳಿಗೆ ಆಧುನಿಕತೆಯ ಹೆಸರಿನಲ್ಲಿ ಕಡೆಗಣಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಕೃಷ್ಣಾ ಎಚ್. ಹಡಪದ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತುಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರು ಸೀರೆ ಧರಿಸುವುದು, ಹಣೆಯ ಮಧ್ಯಭಾಗದಲ್ಲಿ ಕುಂಕುಮ ಇಡುವುದು, ಕೈಯಲ್ಲಿ ಬಳೆ ಧರಿಸುವುದು, ಕಾಲಿನಲ್ಲಿ ಬೆಳ್ಳಿಯ ಗೆಜ್ಜೆ ಅಥವಾ ಚೈನ್ ಧರಿಸುವುದು ಹಾಗೂ ತಲೆಯ ಮೇಲೆ ಶರಗು ಹಾಕಿಕೊಳ್ಳುವುದು ಕೇವಲ ಅಲಂಕಾರಕ್ಕಾಗಿ ಅಲ್ಲ. ಈ ಪದ್ಧತಿಗಳು ಮಹಿಳೆಯರಿಗೆ ಸಾಮಾಜಿಕ ಗೌರವ, ಆತ್ಮವಿಶ್ವಾಸ ಹಾಗೂ ಸುರಕ್ಷತೆಯ ಸಂಕೇತಗಳಾಗಿದ್ದವು ಎಂದು ತಿಳಿಸಿದ್ದಾರೆ.
ಇಂತಹ ಸಾಂಪ್ರದಾಯಿಕ ಮೌಲ್ಯಗಳನ್ನು ಪಾಲಿಸುತ್ತಿದ್ದ ಮಹಿಳೆಯರನ್ನು ಸಮಾಜ ಅತ್ಯಂತ ಗೌರವದಿಂದ ಕಾಣುತ್ತಿತ್ತು. ಆದರೆ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದಾಗಿ ಇತ್ತೀಚಿನ ದಿನಗಳಲ್ಲಿ ಅನೇಕ ಮಹಿಳೆಯರು ಸಾಂಪ್ರದಾಯಿಕ ಉಡುಗೆ-ತೊಡುಗೆಗಳಿಂದ ದೂರ ಸರಿಯುತ್ತಿದ್ದಾರೆ. ಸೀರೆ ಬದಲಾಗಿ ಚೂಡಿದಾರ್ ಧರಿಸುವುದು, ಕುಂಕುಮ ಇಡದಿರುವುದು, ಬಳೆ ಧರಿಸದಿರುವುದು ಹಾಗೂ ದುಪಟ್ಟಾ ಬಳಸುವ ಪದ್ಧತಿಯೂ ಕಡಿಮೆಯಾಗುತ್ತಿರುವುದು ಸಮಾಜದ ಮೌಲ್ಯಗಳ ಮೇಲೂ ಪರಿಣಾಮ ಬೀರುತ್ತಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಮಾಜದಲ್ಲಿ ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗುತ್ತಿರುವುದಕ್ಕೆ ನಮ್ಮದೇ ಸಂಸ್ಕೃತಿಯಿಂದ ನಾವು ದೂರವಾಗುತ್ತಿರುವುದು ಪ್ರಮುಖ ಕಾರಣವಾಗಿದೆ. ಹಿರಿಯರು ಮಹಿಳೆಯರ ಗೌರವ ಮತ್ತು ರಕ್ಷಣೆಯ ದೃಷ್ಟಿಯಿಂದ ರೂಪಿಸಿದ್ದ ಪದ್ಧತಿಗಳನ್ನು ನಾವು ಕೈಬಿಡುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಹೇಳಿದ್ದಾರೆ.
ಭಾರತೀಯ ನಾರಿಯರ ಶೀಲ, ಸಂಸ್ಕಾರ ಮತ್ತು ಜೀವನ ಮೌಲ್ಯಗಳನ್ನು ಒಂದು ಕಾಲದಲ್ಲಿ ಇಡೀ ಜಗತ್ತು ಕೊಂಡಾಡುತ್ತಿತ್ತು. ಆದರೆ ಇಂದು ಭಾರತೀಯ ಸಮಾಜದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಬದಲಾವಣೆಗಳು ಆತಂಕ ಮೂಡಿಸುತ್ತಿವೆ. ವೈಜ್ಞಾನಿಕ ಹಿನ್ನೆಲೆಯುಳ್ಳ ಅನೇಕ ಸಂಪ್ರದಾಯಗಳನ್ನು ಮೂಢನಂಬಿಕೆ ಎಂದು ತಳ್ಳಿಹಾಕುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಹೊಸ ಜೀವನಶೈಲಿ ತಾತ್ಕಾಲಿಕ ಆಧುನಿಕತೆಯನ್ನು ನೀಡಬಹುದು, ಆದರೆ ಶಾಶ್ವತ ಗೌರವ ಮತ್ತು ಮೌಲ್ಯಗಳನ್ನು ನೀಡಲು ಸಾಧ್ಯವಿಲ್ಲ ಎಂಬುದನ್ನು ಸಮಾಜ ಅರಿಯಬೇಕಿದೆ ಎಂದು ಅವರು ಹೇಳಿದ್ದಾರೆ.
ಹಿರಿಯರು ರೂಪಿಸಿದ ಸನಾತನ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವುದು ಇಂದಿನ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಗದಗ ಜಿಲ್ಲೆ ಸೇರಿದಂತೆ ರಾಜ್ಯ ಹಾಗೂ ದೇಶದ ಮಹಿಳೆಯರು ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ಮರೆಯದೆ, ಸನಾತನ ಪರಂಪರೆಯನ್ನು ಮುಂದುವರಿಸಿ, ಮುಂದಿನ ಪೀಳಿಗೆಗೂ ಅದರ ಮಹತ್ವವನ್ನು ಪರಿಚಯಿಸಬೇಕು ಎಂದು ಕೃಷ್ಣಾ ಎಚ್. ಹಡಪದ ಮನವಿ ಮಾಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP