
ಕೋಲಾರ, ೧೦ ಜುಲೈ (ಹಿ.ಸ):
ಆ್ಯಂಕರ್: ಸರ್ಕಾರಿ ಶಾಲೆಗಳ ಕುರಿತು ಕೀಳಿರಿಮೆ ಅಗತ್ಯವಿಲ್ಲ, ಇಲ್ಲಿ ಸಿಗುವ ಸೌಲಭ್ಯ ಬಳಸಿಕೊಂಡು ವಿದ್ಯಾರ್ಥಿಗಳು ಸಾಧಕರಾಗಿ ಹೊರಹೊಮ್ಮಬೇಕು, ಸಂಸ್ಕಾರ ರೂಢಿಸಿಕೊಳ್ಳಬೇಕು ಎಂದು ನೂತನ ಸರ್ಕಾರಿ ಪ್ರೌಢಶಾಲೆ ಉಪಪ್ರಾಂಶುಪಾಲೆ ಕೆ.ಎಸ್.ಸುನಂದಮ್ಮ ಕರೆ ನೀಡಿದರು.
ಶಾಲೆಯ ಮಕ್ಕಳಿಗೆ ದಾನಿಗಳು ಕೊಡುಗೆಯಾಗಿ ವಿತರಿಸಿದ್ದ ಟ್ರಾö್ಯಕ್ ಸೂಟ್ ವಿತರಿಸಿ ಅವರು ಮಾತನಾಡಿ, ಅಕ್ಷರ ಕಲಿಯುವುದರ ಜತೆಗೆ ಸಂಸ್ಕಾರವನ್ನು ಕಲಿತರೆ ಮಾತ್ರ ವಿದ್ಯೆಗೆ ಭೂಷಣ ಮತ್ತು ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ. ವಿದ್ಯಾರ್ಥಿ ಜೀವನದಲ್ಲಿ ಸ್ವಚ್ಚತೆ ಕಾಪಾಡಿಕೊಂಡರೆ ಉತ್ತಮ ಆರೋಗ್ಯ ಸಿಗುತ್ತದೆ, ಆರೋಗ್ಯದಿಂದ ಅಕ್ಷರ ಕಲಿಕೆಗೆ ಆಸಕ್ತಿ ಹೆಚ್ಚುತ್ತದೆ, ಓದಬೇಕೆಂಬ ಛಲ,ಶ್ರದ್ಧೆ ಜತೆಗೆ ಸಮಾಜದಲ್ಲಿ ಗೌರವ ತಾನಾಗಿಯೇ ನಿಮ್ಮ ಹೆಗಲೇರುವುದರಿಂದ ನಿಮ್ಮ ಸಾಧನೆಯ ದಾರಿ ಸುಲಭವಾಗುತ್ತದೆ ಎಂದು ಹೇಳಿದರು.
ಪೋಷಕರು ನಿಮ್ಮನ್ನು ಸಾಧಕರನ್ನಾಗಿ ಕಾಣಲು ಶಾಲೆಗೆ ಕಳುಹಿಸಿದ್ದಾರೆ, ಶಾಲೆಯಲ್ಲಿ ಶಿಕ್ಷಕರು ನಿಮಗೆ ಅಕ್ಷರ ಕಲಿಸಲು ಶ್ರಮಿಸುತ್ತಿದ್ದಾರೆ ಎಂಬುದನ್ನು ಮರೆಯಬಾರದು ಎಂದರು. ಎಸ್ಸೆಸ್ಸೆಲ್ಸಿ ಗುಣಮಟ್ಟದ ಫಲಿತಾಂಶಕ್ಕಾಗಿ ಶಿಕ್ಷಕರು ಶ್ರಮಿಸುತ್ತಿದ್ದಾರೆ, ಅವರ ಆಶಯಗಳಿಗೆ ಭಂಗ ತಾರದೇ ಶಾಲೆಗೆ ನಿರಂತರವಾಗಿ ಬನ್ನಿ, ಗೈರಾದರೆ ಅದು ನಿಮ್ಮ ಶೈಕ್ಷಣಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದರು.
ತಾಲ್ಲೂಕು ಸಹಶಿಕ್ಷಕರ ಸಂಘದ ಉಪಾಧ್ಯಕ್ಷ ಸತೀಶ್ ಕುಮಾರ್ ಮಾತನಾಡಿ, ಕೆಟ್ಟವರ ಸಂಗ ಸೇರದಿರಿ, ಕೆಟ್ಟದ್ದು ಬೇಗ ಮನಸ್ಸಿಗೆ ಹಿತ ನೀಡುತ್ತದೆ ಆದರೆ ಒಳ್ಳೆಯದು ಹೆಚ್ಚು ಜನರಿಗೆ ಹಿತ ನೀಡದು ಅದರೆ ಅವುಗಳಿಂದ ಸಿಗುವ ಫಲಿತಾಂಶ ಮುಖ್ಯವಾಗಿದೆ, ಕೆಟ್ಟದ್ದನ್ನು ನಂಬಿದವರು ಜೀವನದಲ್ಲಿ ಸೋಲುತ್ತಾರೆ, ಒಳ್ಳೆಯ ಹಾದಿಯನ್ನು ಅನುಸರಿಸಿದವರು ಜೀವನದಲ್ಲಿ ಯಶಸ್ಸು ಕಾಣುತ್ತಾರೆ ಆದ್ದರಿಂದ ದುಷ್ಟರು,ದುಶ್ಚಟಗಳಿಂದ ದೂರಿವಿರಿ. ಪೋಷಕರ ಆಶಯ, ಶಿಕ್ಷಕರ ಪರಿಶ್ರಮ ವ್ಯರ್ಥವಾಗದಿರಲು ನಿಮ್ಮಲ್ಲಿ ಕಲಿಕೆಗೆ ಆಸಕ್ತಿ ಅಗತ್ಯವಿದೆ, ನೀವು ಜೀವನದಲ್ಲಿ ಸಾಧನೆ ಮಾಡಲೇಬೇಕು ಎಂಬ ಛಲದಿಂದ ಓದಿನ ಕಡೆ ಗಮನ ನೀಡಿ, ಗುರುಹಿರಿಯರೊಂದಿಗೆ ಗೌರವದಿಂದ ನಡೆದುಕೊಳ್ಳುವ ಸಂಸ್ಕಾರ ಕಲಿಯಿರಿ ಗೆಲುವು ನಿಮ್ಮನ್ನರಿಸಿ ಬರುತ್ತದೆ ಎಂದರು.
ಎಲ್ಲಾ ಉಳ್ಳವರಿಗೂ ನೆರವಾಗುವ ಮನಸ್ಸು ಇರುವುದಿಲ್ಲ ಆದರೆ ಕೆಲವು ಹೃದಯವಂತರು ತಮ್ಮ ಸಂಪಾದನೆಯ ಹೆಚ್ಚು ಭಾಗವನ್ನು ಕಷ್ಟದಲ್ಲಿರುವವರಿಗೆ ನೆರವಾಗಲು ಖರ್ಚು ಮಾಡುತ್ತಿದ್ದಾರೆ ಅವರ ಆಶಯಗಳಿಗೆ ಭಂಗವಾದ0ತೆ ಮಕ್ಕಳು ಚೆನ್ನಾಗಿ ಓದಿ ಸಾಧಕರಾಗಬೇಕು ಎಂದು ತಿಳಿಸಿ ಮಕ್ಕಳಿಗೆ ನೆರವಾದ ದಾನಿಗಳಿಗೆ ಧನ್ಯವಾದ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಸತೀಶ್ ಕುಮಾರ್,ಶಿಕ್ಷಕರಾದ ಸಿ.ಎಂ.ವೆಂಕಟರಮಣಪ್ಪ,ವಾಣಿ,ಭಾರತಿ,ಉಮೇರಾಫಾತಿಮಾ, ಕೋಮಲ, ಕಾಳಿದಾಸ,ಜಮೀರಾಬೇಗಂ,ನಿರುಪಮ,ಮೇಘನಾ, ರಕ್ಷಿತಾ ಪಾಲ್ಗೊಂಡಿದ್ದರು
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್