
ಗದಗ, 10 ಜುಲೈ (ಹಿ.ಸ.)
ಆ್ಯಂಕರ್:- ಗದಗ ಜಿಲ್ಲೆಯನ್ನು ಬರ ಪೀಡಿತ ಜಿಲ್ಲೆ ಎಂದು ಘೋಷಿಸಿ ಕೂಡಲೇ ರೈತಾಪಿ ಸಮೂಹ ಎದುರಿಸುತ್ತಿರುವ ಕೃಷಿ ಬಿಕ್ಕಟ್ಟು ಹಾಗೂ ಬಾಕಿ ಇರುವ ವಿವಿಧ ಬೇಡಿಕೆಗಳನ್ನು ತಕ್ಷಣವೇ ಈಡೇರಿಸಬೇಕೆಂದು ಬಿಜೆಪಿ ಗದಗ ಜಿಲ್ಲಾ ರೈತ ಮೋರ್ಚಾ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಬಿಜೆಪಿ ಗದಗ ಜಿಲ್ಲಾಧ್ಯಕ್ಷರಾದ ತೋಟಪ್ಪ(ರಾಜು) ಕುರುಡಗಿ ಭಾಗವಹಿಸಿ ಮಾತನಾಡಿದ ಅವರು ಹವಾಮಾನ ವೈಪರೀತ್ಯ, ಅಸಮರ್ಪಕ ಮಳೆ, ಬೆಳೆಹಾನಿ, ಇಳುವರಿ ಕುಂಟಿತ ಹಾಗೂ ಮಾರುಕಟ್ಟೆಯ ದರ ಏರಿಳಿತಗಳ ನಡುವೆಯೂ ದೇಶಕ್ಕೆ ಅನ್ನ ನೀಡುತ್ತಿರುವ ಸಮಸ್ತ ರೈತಕುಲ ಇಂದು ತೀವ್ರ ಕೃಷಿ ಬಿಕ್ಕಟ್ಟಿನಿಂದಾಗಿ ತತ್ತರಿಸಿ ಹೋಗಿದೆ. ದುಬಾರಿ ಬೀಜ, ರಸಗೊಬ್ಬರಗಳ ಅಲಭ್ಯತೆ ಒಂದಡೆಯಾದರೆ ತೀವ್ರ ಮಳೆ ಕೊರತೆ ಕಾರಣದಿಂದಾಗಿ ಜಿಲ್ಲೆಯ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾರಣ ಕೂಡಲೇ ಗದಗ ಜಿಲ್ಲೆಯನ್ನು ಸಂಪೂರ್ಣ ಬರ ಪೀಡಿತ ಎಂದು ಘೋಷಿಸಿ ರೈತರ ನೆರವಿಗೆ ಸರ್ಕಾರ ಬರಬೇಕು ಎಂದರು.
ರೈತ ಮೋರ್ಚಾ ಗದಗ ಜಿಲ್ಲಾಧ್ಯಕ್ಷರಾದ ಡಿ.ವಾಯ್.ಹುನಗುಂದ ರವರು ಮಾತನಾಡಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಮತ್ತು ರಾಜ್ಯ ಪರಿಹಾರ ನಿಧಿಗಳ ಅಡಿಯಲ್ಲಿ ದೀರ್ಘಕಾಲದಿಂದ ಬಾಕಿ ಉಳಿದಿರುವ ಬೆಳೆ ವಿಮೆ ಮತ್ತು ಬೆಳೆ ಹಾನಿ ಪರಿಹಾರದ ಹಣವನ್ನು ಯಾವುದೇ ವಿಳಂಬವಿಲ್ಲದೆ ಮುಂದಿನ ಎರಡು ವಾರಗಳಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಬೇಕು. ರೈತರು ಬೆಳೆಯುವ ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು. ರೈತರನ್ನು ಖಾಸಗಿ ಮಧ್ಯವರ್ತಿಗಳ ಶೋಷಣೆ ಮತ್ತು ಬೆಲೆ ನಷ್ಟದ ಮಾರಾಟದಿಂದ ಮುಕ್ತಗೊಳಿಸಲು ಅಗತ್ಯ ಸಂಖ್ಯೆಯ ಸರ್ಕಾರಿ ಖರೀದಿ ಕೇಂದ್ರಗಳನ್ನು ಜಿಲ್ಲೆಯಲ್ಲಿ ಪ್ರಾರಂಭಿಸಬೇಕು ದುಬಾರಿ ಪಂಪ್ಸೆಟ್ಗಳನ್ನು ಹಾಳುಗೆಡವುತ್ತಿರುವ ಅಘೋಷಿತ ವಿದ್ಯುತ್ ಕಡಿತ ಮತ್ತು ವೋಲ್ಟೇಜ್ ಏರಿಳಿತಗಳನ್ನು ತಕ್ಷಣವೇ ಸರಿಪಡಿಸಬೇಕು ಹಾಗು ಹಗಲು ಹೊತ್ತಿನಲ್ಲಿಯೇ 7 ಗಂಟೆಯ ಗುಣಮಟ್ಟದ ತ್ರಿ- ಪೇಸ್ ವಿದ್ಯುತ್ ಸೌಲಭ್ಯ ಒದಗಿಸಬೇಕು.
ಹಿಂಗಾರಿ ಹಂಗಾಮಿಗೂ ಮುನ್ನವೇ ರೈತ ಸಂಪರ್ಕ ಕೇಂದ್ರ ಹಾಗು ಎಲ್ಲಾ ತಾಲೂಕುಗಳ ಸ್ಥಳೀಯ ಸಹಕಾರ ಸಂಘಗಳ ಮೂಲಕ ಸಬ್ಸಿಡಿ ದರದಲ್ಲಿ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಮತ್ತು ರಸಗೊಬ್ಬರ ಸರಬರಾಜು ಮಾಡಬೇಕು ಎಂದು ಆಗ್ರಹಿಸಿದರು.
ಪಕ್ಷದ ಹಿರಿಯರಾದ ಎಂ.ಎಸ್.ಕರೀಗೌಡ್ರ ಮಾತನಾಡಿ ನಕಲಿ ಕೃಷಿ ಪರಿಕರಗಳನ್ನು ಮಾರಾಟ ಮಾಡುವ ಮತ್ತು ದಾಸ್ತಾನು ಮರೆಮಾಡಿ ಕೃತಕ ಕೊರತೆ ಸೃಷ್ಟಿಸುವ ವ್ಯಾಪಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು, ಜೊತೆಗೆ ಅಂತವರ ಮಾರಾಟ ಲೈಸನ್ಸನ್ನು ರದ್ದುಗೊಳಿಸಬೇಕು ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಕ್ಕಿರೇಶ ರಟ್ಟಿಹಳ್ಳಿ ಮಾತನಾಡಿ ಸರಣಿ ಬೆಳೆ ವೈಫಲ್ಯಗಳಿಂದ ಕಂಗಾಲಾಗಿರುವ ರೈತರಿಗೆ ಪ್ರಾದೇಶಿಕ ಸಹಕಾರ ಮತ್ತು ವಾಣಿಜ್ಯ ಬ್ಯಾಂಕುಗಳಿಂದ ಸಾಲ ವಸೂಲಾತಿಗಾಗಿ ನೀಡಲಾಗುತ್ತಿರುವ ಎಲ್ಲಾ ರೀತಿಯ ಕಿರುಕುಳಗಳನ್ನು ತಕ್ಷಣವೇ ನಿಲ್ಲಿಸಬೇಕು ಹಾಗು ವ್ಯವಸ್ಥಿತ ಕೃಷಿ ಸಾಲ ಮನ್ನಾ ಪ್ರಕ್ರಿಯೆಗೆ ಚಾಲನೆ ನೀಡಬೇಕು. ಕೃಷಿ ಕೂಲಿಕಾರರಿಗೆ ಬರಗಾಲ ಕಾಮಗಾರಿಗಳನ್ನ ಒದಗಿಸಿ ಅನ್ಯ ರಾಜ್ಯಗಳಿಗೆ ಗುಳೆ ಹೋಗುವದನ್ನ ತಪ್ಪಿಸಬೇಕು ಎಂದು ಮಾತನಾಡಿದರು.
ಈ ಎಲ್ಲಾ ನ್ಯಾಯಸಮ್ಮತ ಬೇಡಿಕೆಗಳನ್ನ ಜಿಲ್ಲಾಡಳಿತವು ಕೂಡಲೇ ರಾಜ್ಯ ಸರ್ಕಾರದ ಗಮನಕ್ಕೆ ತರಬೇಕು ಮತ್ತು ಸರಕಾರವು ರೈತರ ನೆರವಿಗೆ ದಾವಿಸಬೇಕು, ಇಲ್ಲದೆ ಹೋದಲ್ಲಿ ಗದಗ ಜಿಲ್ಲಾ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಜಿಲ್ಲಾದ್ಯಂತ ಪ್ರಮುಖ ಹೆದ್ದಾರಿಗಳನ್ನು ತಡೆಯುವದು ಜೊತೆಗೆ ಸರ್ಕಾರಿ ಆಡಳಿತ ಕಚೇರಿಗಳ ಮುಂದೆ ಅನಿರ್ದಿಷ್ಟ ಧರಣಿ ಸತ್ಯಾಗ್ರಹವನ್ನು ಪ್ರಾರಂಭಿಸಲಾಗುವುದು ಎನ್ನುವದನ್ನ ಜಿಲ್ಲಾಡಳಿತ ಹಾಗು ರಾಜ್ಯ ಸರ್ಕಾರದ ಗಮನಕ್ಕೆ ತರಬಯಸಿದರು.
ಈ ಸಂದರ್ಭದಲ್ಲಿ ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ ಶಿರಹಟ್ಟಿ, ಅಶೋಕ ಬ್ಯಾಹಟ್ಟಿ, ಪ್ರಮುಖರಾದ ಭಿಮಸಿಂಗ ರಾಠೋಡ, ಸುರೇಶ ಮರಳಪ್ಪನವರ, ಬೂದಪ್ಪ ಹಳ್ಳಿ, ಸಂತೋಷ ಅಕ್ಕಿ, ಶಂಕರ ಕರಿಬಿಷ್ಠಿ, ಅಪ್ಪಣ್ಣ ಟೆಂಗಿನಕಾಯಿ, ರಮೇಶ ಸಜ್ಜಗಾರ, ರವಿ ವಗ್ಗನವರ, ಮಂಜುನಾಥ ಹಳ್ಳೂರಮಠ, ದೇವಿಂದ್ರಪ್ಪ ಹೂಗಾರ, ವಾಯ್.ಪಿ.ಅಡ್ನೂರ, ಸುನೀತಾ ಹಳ್ಳಿ, ಶಿವಪ್ಪ ಬಿಡನಾಳ, ಬಸವರಾಜ ಹರ್ಲಾಪೂರ, ಮಂಜುನಾಥ ಎಲಿಸೂರ, ಬಸವರಾಜ ನರೆಗಲ್, ಎಂ.ಆರ್.ಹಾದಿಮನಿ, ರಾಘವೇಂದ್ರ ಬಳ್ಳಾರಿ, ಈರಪ್ಪ ಹಡಪದ, ಬಸವರಾಜ ನಾಯಕ, ಪ್ರಕಾಶ, ಎಲ್.ವಾಯ್.ಕಳಸಾಪೂರ, ದೇವರಾಜ ಮೇಟಿ, ವಿನಾಯಕ ಹೊರಕೇರಿ, ಸಚಿನ್ ಮಡಿವಾಳರ ಹಾಗು ಇನ್ನೂ ಹಲವಾರು ಪ್ರಮುಖರುಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP