ಮುಂಗಾರು ಬೆಳೆ ವಿಮೆ ನೋಂದಣಿಗೆ ರೈತರಿಗೆ ಕರೆ
ಗದಗ, 10 ಜುಲೈ (ಹಿ.ಸ.) ಆ್ಯಂಕರ್:- 2026-27ನೇ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಅಧಿಸೂಚಿತ ಬೆಳೆಗಳಿಗೆ ಬೆಳೆ ವಿಮೆ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು, ರೈತರು ಕೊನೆಯ ದಿನಾಂಕದವರೆಗೆ ಕಾಯದೆ ಮುಂಚಿತವಾಗಿಯೇ ನೋಂದಣಿ ಮಾಡಿಸಿಕೊಳ್ಳುವಂತೆ ಜಂ
ಫೋಟೋ


ಗದಗ, 10 ಜುಲೈ (ಹಿ.ಸ.)

ಆ್ಯಂಕರ್:- 2026-27ನೇ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಅಧಿಸೂಚಿತ ಬೆಳೆಗಳಿಗೆ ಬೆಳೆ ವಿಮೆ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು, ರೈತರು ಕೊನೆಯ ದಿನಾಂಕದವರೆಗೆ ಕಾಯದೆ ಮುಂಚಿತವಾಗಿಯೇ ನೋಂದಣಿ ಮಾಡಿಸಿಕೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕರು ಮನವಿ ಮಾಡಿದ್ದಾರೆ.

ಈ ಯೋಜನೆಯಡಿ ಅಧಿಸೂಚಿತ ಬೆಳೆಗಳಿಗೆ ಬೆಳೆಸಾಲ ಪಡೆದ ರೈತರಿಗೆ ಬೆಳೆ ವಿಮೆ ಕಡ್ಡಾಯವಾಗಿದೆ. ಆದರೆ, ಯೋಜನೆಯಲ್ಲಿ ಭಾಗವಹಿಸಲು ಇಚ್ಛಿಸದ ರೈತರು ಬೆಳೆಸಾಲ ಪಡೆದ ಬ್ಯಾಂಕ್ ವ್ಯವಸ್ಥಾಪಕರಿಗೆ ಬೆಳೆ ವಿಮೆ ನೋಂದಣಿಯ ಅಂತಿಮ ದಿನಾಂಕಕ್ಕಿಂತ ಏಳು ದಿನಗಳ ಮುಂಚಿತವಾಗಿ ಲಿಖಿತ ಮುಚ್ಚಳಿಕೆ ಪತ್ರ ಸಲ್ಲಿಸಬೇಕು. ಬೆಳೆಸಾಲ ಪಡೆಯದ ರೈತರಿಗೆ ಯೋಜನೆ ಐಚ್ಛಿಕವಾಗಿರುತ್ತದೆ.

ಪ್ರಸಕ್ತ ಸಾಲಿನಲ್ಲಿ ಗದಗ ಜಿಲ್ಲೆಗೆ ಇಂಡಸ್ಇಂಡ್ ಜನರಲ್ ಇನ್ಸೂರೆನ್ಸ್ ಕಂಪನಿ ಅನುಷ್ಠಾನ ಸಂಸ್ಥೆಯಾಗಿ ಆಯ್ಕೆಯಾಗಿದೆ. ಬೆಳೆ ವಿಮೆ ನೋಂದಣಿಗೆ ರೈತರು ಫ್ರುಟ್ಸ್ ಎಫ್ಐಡಿ ಹೊಂದಿರುವುದು ಕಡ್ಡಾಯವಾಗಿದೆ. ಪಹಣಿ, ಖಾತೆ ಪುಸ್ತಕ ಅಥವಾ ಕಂದಾಯ ರಶೀದಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಬ್ಯಾಂಕ್, ಸಾರ್ವಜನಿಕ ಸೇವಾ ಕೇಂದ್ರ (ಸಿಎಸ್ಸಿ) ಅಥವಾ ಗ್ರಾಮ ಒನ್ ಕೇಂದ್ರಗಳಿಗೆ ಸಲ್ಲಿಸಿ ಸಂರಕ್ಷಣೆ ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು.

ಆಲಿಕಲ್ಲು ಮಳೆ, ಭೂಕುಸಿತ, ಬೆಳೆ ಮುಳುಗಡೆ, ಮೇಘಸ್ಫೋಟ, ಗುಡುಗು-ಮಿಂಚು ಹಾಗೂ ಬೆಂಕಿ ಅವಘಡದಂತಹ ಸ್ಥಳೀಯ ಪ್ರಕೃತಿ ವಿಕೋಪಗಳಿಂದ ಉಂಟಾಗುವ ಬೆಳೆ ನಷ್ಟಕ್ಕೂ ಯೋಜನೆಯಡಿ ಪರಿಹಾರ ಪಡೆಯಲು ಅವಕಾಶವಿದೆ. ಇಂತಹ ಸಂದರ್ಭಗಳಲ್ಲಿ ಬೆಳೆ ವಿಮೆ ಮಾಡಿಸಿರುವ ರೈತರು 72 ಗಂಟೆಗಳೊಳಗೆ ವಿಮಾ ಸಂಸ್ಥೆಗೆ ಲಿಖಿತವಾಗಿ ಅಥವಾ ಉಚಿತ ಸಹಾಯವಾಣಿ ಮೂಲಕ ಮಾಹಿತಿ ನೀಡಬೇಕು.

ಕಟಾವಿನ ನಂತರ ಜಮೀನಿನಲ್ಲಿ ಒಣಗಲು ಬಿಟ್ಟ ಬೆಳೆ ಅಕಾಲಿಕ ಮಳೆ ಅಥವಾ ಚಂಡಮಾರುತದಿಂದ ಹಾನಿಗೊಳಗಾದರೂ ಪರಿಹಾರ ಪಡೆಯುವ ಅವಕಾಶ ಕಲ್ಪಿಸಲಾಗಿದೆ.

ರೈತರು ಅರ್ಜಿಯಲ್ಲಿ ತಮ್ಮ ಜಮೀನಿನಲ್ಲಿ ನಿಜವಾಗಿ ಬಿತ್ತಿದ ಬೆಳೆಯ ಮಾಹಿತಿಯನ್ನಷ್ಟೇ ನಮೂದಿಸಬೇಕು. ಸ್ವತಃ ರೈತರೇ ಹಾಜರಾಗಿ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ. ಕುಟುಂಬದ ಇತರ ಸದಸ್ಯರು ಅರ್ಜಿ ಸಲ್ಲಿಸುವಲ್ಲಿ ಭೂ ಮಾಲೀಕರ ನಿರಕ್ಷೇಪಣಾ ಪತ್ರ ಹಾಗೂ ಮೂಲ ಆಧಾರ ಪ್ರತಿಯನ್ನು ಸಲ್ಲಿಸಬೇಕು. ಮಳೆಯಾಶ್ರಿತ ಅಥವಾ ನೀರಾವರಿ ಬೆಳೆ ಎಂಬುದನ್ನು ಸ್ಪಷ್ಟವಾಗಿ ನಮೂದಿಸಬೇಕು. ಬಿತ್ತಿದ ಬೆಳೆ ಕನಿಷ್ಠ 30 ದಿನಗಳದ್ದಾಗಿದ್ದು, ಬೆಳೆ ಸಮೀಕ್ಷೆ ಕಡ್ಡಾಯವಾಗಿರುವುದರಿಂದ ಬಿತ್ತದ ಬೆಳೆಗೆ ವಿಮೆ ಮಾಡಿಸಿದರೆ ಪರಿಹಾರ ದೊರೆಯುವುದಿಲ್ಲ.

ಬೆಳೆವಾರು ಕೊನೆಯ ದಿನಾಂಕಗಳು:

ಜುಲೈ 15: ಹೆಸರು (ಮಳೆಯಾಶ್ರಿತ), ಹತ್ತಿ (ಮಳೆಯಾಶ್ರಿತ ಹಾಗೂ ನೀರಾವರಿ)

ಜುಲೈ 31: ಗೋವಿನಜೋಳ, ಸಜ್ಜೆ, ತೊಗರಿ, ಶೇಂಗಾ ಹಾಗೂ ಭತ್ತ

ಆಗಸ್ಟ್ 14: ಸೂರ್ಯಕಾಂತಿ (ಮಳೆಯಾಶ್ರಿತ ಹಾಗೂ ನೀರಾವರಿ)

ಜುಲೈ 15ರಂದು ಹೆಸರು ಮತ್ತು ಹತ್ತಿ ಬೆಳೆಗಳಿಗೆ ನೋಂದಣಿ ಮುಕ್ತಾಯವಾಗಲಿರುವುದರಿಂದ ಸಂಬಂಧಿಸಿದ ರೈತರು ವಿಳಂಬ ಮಾಡದೆ ಕೂಡಲೇ ಬೆಳೆ ವಿಮೆ ಯೋಜನೆಯಡಿ ನೋಂದಣಿ ಮಾಡಿಸಿಕೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande