
ಬಾಗಲಕೋಟೆ, 10 ಜುಲೈ (ಹಿ.ಸ.)
ಆ್ಯಂಕರ್ : ಮಳೆಗಾಲದ ಪರಿಣಾಮ ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ಹೊರವಲಯದ ಘಟಪ್ರಭಾ ನದಿ ತುಂಬಿ ಹರಿಯುತ್ತಿದ್ದು, ನದಿ ದಂಡೆಯಲ್ಲೀಗ ಮೀನುಗಾರರಿಗೆ ಭರ್ಜರಿ ಸುಗ್ಗಿಕಾಲ ಆರಂಭವಾಗಿದೆ. ಹೊಸ ನೀರಿನೊಂದಿಗೆ ವಿವಿಧ ಜಾತಿಯ ಮೀನುಗಳು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಮೀನುಗಾರರು ಬೆಳಗ್ಗೆಯಿಂದ ಸಂಜೆಯವರೆಗೆ ಬಲೆ ಬೀಸಿ ಉತ್ತಮ ಪ್ರಮಾಣದ ಮೀನುಗಳನ್ನು ಹಿಡಿದು ಜೀವನೋಪಾಯ ನಡೆಸುತ್ತಿದ್ದಾರೆ.
ನಗರ ಹೊರವಲಯದ ಸಿದ್ದರಾಮೇಶ್ವರ ಬ್ಯಾರೇಜ್ ಇಕ್ಕೆಲಗಳಲ್ಲಿ ಪ್ರತಿದಿನ ಮೀನುಗಾರರ ದಂಡು ನೆಲೆಸಿರುವ ದೃಶ್ಯ ಕಂಡು ಬರುತ್ತಿದೆ. ಅನುಭವಿಗಳಾದ ಮೀನುಗಾರರು ನದಿಯ ಹರಿವು, ನೀರಿನ ಮಟ್ಟ ಹಾಗೂ ಮೀನಿನ ಚಲನವಲನವನ್ನು ಗಮನಿಸಿ ಬಲೆ ಬೀಸುತ್ತಿದ್ದು, ಉತ್ತಮ ಪ್ರಮಾಣದಲ್ಲಿ ಮೀನು ದೊರೆಯುತ್ತಿರುವುದರಿಂದ ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಹೊಸ ನೀರಿನೊಂದಿಗೆ ಬರುವ ಮೀನುಗಳ ರುಚಿ ಹಾಗೂ ಗುಣಮಟ್ಟ ಉತ್ತಮವಾಗಿರುವ ಕಾರಣ ಗ್ರಾಹಕರು ಸಹ ನದಿ ದಂಡೆಗೆ ಆಗಮಿಸಿ ತಾಜಾ ಮೀನುಗಳನ್ನು ಖರೀದಿಸುತ್ತಿದ್ದಾರೆ. ಮಧ್ಯವರ್ತಿಗಳಿಲ್ಲದೆ ನೇರವಾಗಿ ಮೀನುಗಾರರಿಂದಲೇ ಮೀನು ಖರೀದಿಸುವ ಅವಕಾಶ ದೊರೆಯುತ್ತಿರುವುದರಿಂದ ಗ್ರಾಹಕರಿಗೂ ಅನುಕೂಲವಾಗಿದೆ.
ಮಳೆಗಾಲದಲ್ಲಿ ನದಿಯ ಹರಿವು ಹೆಚ್ಚಾಗುತ್ತಿದ್ದಂತೆ ಮೀನುಗಾರಿಕೆಗೆ ಉತ್ತಮ ವಾತಾವರಣ ನಿರ್ಮಾಣವಾಗಿದ್ದು, ಹಲವಾರು ಕುಟುಂಬಗಳಿಗೆ ಇದು ಪ್ರಮುಖ ಆದಾಯದ ಮೂಲವಾಗಿದೆ. ದಿನನಿತ್ಯ ಹಿಡಿಯುವ ಮೀನುಗಳನ್ನು ಸ್ಥಳೀಯ ಮಾರುಕಟ್ಟೆಗಳಿಗೆ ಸಾಗಿಸಿ ಮಾರಾಟ ಮಾಡುವ ಮೂಲಕ ಮೀನುಗಾರರು ತಮ್ಮ ಕುಟುಂಬದ ಜೀವನ ನಿರ್ವಹಣೆಗೆ ಅಗತ್ಯವಾದ ಆದಾಯ ಗಳಿಸುತ್ತಿದ್ದಾರೆ.
ಇನ್ನೂ ಕೆಲ ದಿನಗಳು ಮಳೆ ಇದೇ ರೀತಿ ಮುಂದುವರಿದರೆ ಮೀನುಗಾರಿಕೆ ಮತ್ತಷ್ಟು ಚುರುಕುಗೊಳ್ಳುವ ನಿರೀಕ್ಷೆ ಇದ್ದು, ಘಟಪ್ರಭಾ ನದಿ ದಂಡೆಯು ಮೀನುಗಾರರ ಚಟುವಟಿಕೆಯಿಂದ ಕಂಗೊಳಿಸುತ್ತಿದೆ. ತಾಜಾ ಮೀನು ಖರೀದಿಸಲು ಸುತ್ತಮುತ್ತಲಿನ ಗ್ರಾಮಗಳ ಜನರೂ ಹೆಚ್ಚಿನ ಸಂಖ್ಯೆಯಲ್ಲಿ ನದಿ ತೀರಕ್ಕೆ ಆಗಮಿಸುತ್ತಿರುವುದು ವಿಶೇಷವಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande