ಮೆಗಾ ಯೋಜನೆಗಳಿಗಿಂತ ಮೂಲಸೌಕರ್ಯಕ್ಕೆ ಆದ್ಯತೆ ನೀಡಿ: ರಾಜ್ಯ ಸರ್ಕಾರಕ್ಕೆ ಆರ್. ಅಶೋಕ್ ಆಗ್ರಹ
ಬೆಂಗಳೂರುಗೆ ₹1.5 ಲಕ್ಷ ಕೋಟಿ ಮೆಗಾ ಯೋಜನೆಗಳಿಗಿಂತ ಗುಂಡಿಮುಕ್ತ ರಸ್ತೆ, ಚರಂಡಿ, ತ್ಯಾಜ್ಯ ನಿರ್ವಹಣೆ ಹಾಗೂ ಸಾರ್ವಜನಿಕ ಸಾರಿಗೆ ಸೇರಿದಂತೆ ಮೂಲಸೌಕರ್ಯಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಆರ್. ಅಶೋಕ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಬೆಂಗಳೂರುಗೆ ಮೆಗಾ ಯೋಜನೆಗಳಿಗಿಂತ ಮೂಲಭೂತ ನಾಗರಿಕ ಸೌಲಭ್ಯಗಳಿಗೆ ಆದ್ಯತೆ ನೀಡಬೇಕು ಎಂದು ಆರ್. ಅಶೋಕ್ ಆಗ್ರಹಿಸಿದರು.


ಬೆಂಗಳೂರು, 10 ಜುಲೈ (ಹಿ.ಸ.)

ಆ್ಯಂಕರ್

ಬೆಂಗಳೂರಿನಲ್ಲಿ ದುಬಾರಿ ಮೆಗಾ ಯೋಜನೆಗಳನ್ನು ಘೋಷಿಸುವುದಕ್ಕಿಂತ ಮೊದಲು ನಗರದ ಮೂಲಭೂತ ನಾಗರಿಕ ಸೌಲಭ್ಯಗಳನ್ನು ಸುಧಾರಿಸಲು ಆದ್ಯತೆ ನೀಡಬೇಕು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರನ್ನು ಉಲ್ಲೇಖಿಸಿ ಪೋಸ್ಟ್ ಮಾಡಿರುವ ಅವರು, ಬೆಂಗಳೂರಿಗೆ ₹1.5 ಲಕ್ಷ ಕೋಟಿ ವೆಚ್ಚದ ಮೆಗಾ ಯೋಜನೆಗಳ ಅಗತ್ಯವಿದೆಯೇ ಅಥವಾ ಮೊದಲು ಮೂಲಭೂತ ನಾಗರಿಕ ಸೇವೆಗಳನ್ನು ಸಮರ್ಪಕವಾಗಿ ಒದಗಿಸುವ ಆಡಳಿತ ಬೇಕು ಎಂದು ಹೇಳಿದ್ದಾರೆ.

ಬೆಂಗಳೂರಿಗೆ ಮೊದಲು ಗುಂಡಿಮುಕ್ತ ರಸ್ತೆಗಳು, ಸಮರ್ಪಕ ಮಳೆನೀರು ಚರಂಡಿ ವ್ಯವಸ್ಥೆ, ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ, ಸುರಕ್ಷಿತ ಪಾದಚಾರಿ ಮಾರ್ಗಗಳು, ವಿಶ್ವಾಸಾರ್ಹ ಸಾರ್ವಜನಿಕ ಸಾರಿಗೆ ಹಾಗೂ ಉತ್ತಮ ಲಾಸ್ಟ್ ಮೈಲ್ ಸಂಪರ್ಕದಂತಹ ಮೂಲಸೌಕರ್ಯಗಳ ಅಗತ್ಯವಿದೆ. ಮೂಲಭೂತ ಸೇವೆಗಳು ಹಿನ್ನಡೆಯಲ್ಲಿರುವಾಗ ದುಬಾರಿ ಮೆಗಾ ಯೋಜನೆಗಳಿಗೆ ಆದ್ಯತೆ ನೀಡುವುದು ಸರಿಯಲ್ಲ, ಎಂದು ಆರ್. ಅಶೋಕ್ ಹೇಳಿದ್ದಾರೆ.

ನಗರದ ದೈನಂದಿನ ಸಮಸ್ಯೆಗಳನ್ನು ಕಡೆಗಣಿಸಿ ಸುರಂಗ ರಸ್ತೆ ಸೇರಿದಂತೆ ಭಾರೀ ಯೋಜನೆಗಳನ್ನು ಘೋಷಿಸುವುದು ಮಹತ್ವಾಕಾಂಕ್ಷೆಗೆ ಆದ್ಯತೆ ನೀಡಿದಂತಾಗುತ್ತದೆ. ಜಾಗತಿಕ ನಗರವಾಗಿ ಬೆಂಗಳೂರು ಬೆಳೆಯಬೇಕಾದರೆ ಮೊದಲು ನಾಗರಿಕರ ಮೂಲಭೂತ ಅಗತ್ಯಗಳನ್ನು ಪೂರೈಸುವ ಆಡಳಿತಕ್ಕೆ ಒತ್ತು ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / SNEHA K


 rajesh pande