ಬಾಗಲಕೋಟೆಯಲ್ಲಿ ಐಟಿಎಂಎಸ್ ಕಟ್ಟುನಿಟ್ಟಿನ ನಿಗಾ: 2.11 ಲಕ್ಷ ಸಂಚಾರ ನಿಯಮ ಉಲ್ಲಂಘನೆ ಪತ್ತೆ – ₹10.22 ಕೋಟಿ ದಂಡ, ರಸ್ತೆ ಸಾವಿನಲ್ಲಿ 20% ಇಳಿಕೆ
ಬಾಗಲಕೋಟೆ, 10 ಜುಲೈ (ಹಿ.ಸ.) ಆ್ಯಂಕರ್ : ಬಾಗಲಕೋಟೆ ನಗರದಲ್ಲಿ ಸಂಚಾರ ಶಿಸ್ತು ಬಲಪಡಿಸಿ ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಜಾರಿಗೊಂಡಿರುವ ಇಂಟಿಗ್ರೇಟೆಡ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ ಯೋಜನೆ ಪರಿಣಾಮಕಾರಿ ಫಲಿತಾಂಶ ನೀಡುತ್ತಿದೆ. ಜೂನ್ 2025ರಿಂದ ಜುಲೈ 2026ರವರೆಗೆ ನಗರದಲ್
ದ ದ


ಬಾಗಲಕೋಟೆ, 10 ಜುಲೈ (ಹಿ.ಸ.)

ಆ್ಯಂಕರ್ : ಬಾಗಲಕೋಟೆ ನಗರದಲ್ಲಿ ಸಂಚಾರ ಶಿಸ್ತು ಬಲಪಡಿಸಿ ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಜಾರಿಗೊಂಡಿರುವ ಇಂಟಿಗ್ರೇಟೆಡ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ ಯೋಜನೆ ಪರಿಣಾಮಕಾರಿ ಫಲಿತಾಂಶ ನೀಡುತ್ತಿದೆ. ಜೂನ್ 2025ರಿಂದ ಜುಲೈ 2026ರವರೆಗೆ ನಗರದಲ್ಲಿ ಒಟ್ಟು 2,11,074 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದು, ನಿಯಮ ಉಲ್ಲಂಘಿಸಿದ ವಾಹನ ಸವಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಬಾಗಲಕೋಟೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್ ತಿಳಿಸಿದರು.

ನಗರದ ಪ್ರಮುಖ ರಸ್ತೆ ಜಂಕ್ಷನ್ಗಳು ಹಾಗೂ ಹೆಚ್ಚು ವಾಹನ ಸಂಚಾರ ಇರುವ ಪ್ರದೇಶಗಳಲ್ಲಿ ಅಳವಡಿಸಲಾಗಿರುವ 22 ಅತ್ಯಾಧುನಿಕ ಸಿಸಿಟಿವಿ ಕ್ಯಾಮರಾಗಳ ಮೂಲಕ ವಾಹನಗಳ ಚಲನವಲನವನ್ನು ನಿರಂತರವಾಗಿ ನಿಗಾ ವಹಿಸಲಾಗುತ್ತಿದೆ. ಕ್ಯಾಮರಾಗಳಲ್ಲಿ ದಾಖಲಾಗಿರುವ ದೃಶ್ಯಾವಳಿಗಳ ಆಧಾರದ ಮೇಲೆ ನಿಯಮ ಉಲ್ಲಂಘಿಸಿದ ವಾಹನಗಳ ಮಾಲೀಕರಿಗೆ ಸ್ವಯಂಚಾಲಿತವಾಗಿ ದಂಡ ವಿಧಿಸಲಾಗುತ್ತಿದೆ.

ಈ ಅವಧಿಯಲ್ಲಿ ಒಟ್ಟು ₹10.22 ಕೋಟಿ ದಂಡ ವಿಧಿಸಲಾಗಿದ್ದು, ಇದುವರೆಗೆ ₹1.72 ಕೋಟಿ ದಂಡದ ಮೊತ್ತವನ್ನು ವಸೂಲಿ ಮಾಡಲಾಗಿದೆ. ಉಳಿದ ದಂಡ ವಸೂಲಾತಿಗೆ ಪೊಲೀಸ್ ಇಲಾಖೆ ಕ್ರಮ ಮುಂದುವರಿಸಿದೆ.

ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸುವುದು, ಕಾರಿನಲ್ಲಿ ಸೀಟ್ಬೆಲ್ಟ್ ಧರಿಸದಿರುವುದು, ತ್ರಿಬಲ್ ರೈಡಿಂಗ್, ಸಂಚಾರ ನಿಯಮಗಳನ್ನು ಉಲ್ಲಂಘಿಸುವುದು ಸೇರಿದಂತೆ ವಿವಿಧ ಪ್ರಕರಣಗಳು ಐಟಿಎಂಎಸ್ ಕ್ಯಾಮರಾಗಳಲ್ಲಿ ದಾಖಲಾಗುತ್ತಿವೆ. ಈ ಹಿನ್ನೆಲೆಯಲ್ಲಿ ವಾಹನ ಸವಾರರು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಪೊಲೀಸ್ ಇಲಾಖೆಯ ಮಾಹಿತಿಯಂತೆ, ಐಟಿಎಂಎಸ್ ಯೋಜನೆ ಜಾರಿಯಾದ ಬಳಿಕ ನಗರದಲ್ಲಿ ರಸ್ತೆ ಅಪಘಾತಗಳಿಂದ ಸಂಭವಿಸುವ ಸಾವಿನ ಪ್ರಮಾಣವು ಶೇಕಡಾ 20ರಷ್ಟು ಇಳಿಕೆಯಾಗಿದೆ. ಇದರಿಂದ ರಸ್ತೆ ಸುರಕ್ಷತೆ ಹೆಚ್ಚುವುದರ ಜೊತೆಗೆ ವಾಹನ ಸವಾರರಲ್ಲಿ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಚಾರ ನಿಯಮಗಳನ್ನು ಉಲ್ಲಂಘಿಸುವವರಿಗೆ ಯಾವುದೇ ವಿನಾಯಿತಿ ಇಲ್ಲ ಎಂಬ ಸಂದೇಶವನ್ನು ಐಟಿಎಂಎಸ್ ಯೋಜನೆ ಪರಿಣಾಮಕಾರಿಯಾಗಿ ನೀಡುತ್ತಿದ್ದು, ನಗರದಲ್ಲಿ ಸುರಕ್ಷಿತ ಹಾಗೂ ಶಿಸ್ತುಬದ್ಧ ಸಂಚಾರ ವ್ಯವಸ್ಥೆ ನಿರ್ಮಾಣಕ್ಕೆ ಈ ತಂತ್ರಜ್ಞಾನ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande