
ಕೊಪ್ಪಳ, 10 ಜುಲೈ (ಹಿ.ಸ.)
ಆ್ಯಂಕರ್ : ಸಂಸ್ಥಾನ ಶ್ರೀ ಗವಿಮಠದ 16ನೇ ಪೀಠಾಧಿಪತಿಗಳಾದ ಮ.ನಿ.ಪ್ರ.ಜ. ಪರಮಪೂಜ್ಯ ಲಿಂಗೈಕ್ಯ ಶ್ರೀ ಮರಿಶಾಂತವೀರ ಮಹಾಶಿವಯೋಗಿಗಳು ಅವರ *59ನೇ ಪುಣ್ಯಸ್ಮರಣೋತ್ಸವ*ವನ್ನು ಇಂದು ಭಕ್ತಿ-ಶ್ರದ್ಧೆ ಮತ್ತು ಸಾಂಪ್ರದಾಯಿಕ ವಿಧಿ-ವಿಧಾನಗಳೊಂದಿಗೆ ಆಚರಿಸಲಾಯಿತು.
ವಿದ್ಯೆ, ವೈದ್ಯ, ಅನ್ನ ಎಂಬ ತ್ರಿವಿಧ ದಾಸೋಹದ ಮೂಲಕ ಸಮಾಜಕ್ಕೆ ಬೆಳಕಾದ ಪೂಜ್ಯರು, ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಿ, ಆಯುರ್ವೇದ ಚಿಕಿತ್ಸೆಯ ಮೂಲಕ ದೀನದಲಿತರ ಸೇವೆ ಮಾಡಿದ ಮಹಾನ್ ಯೋಗಿ. 1922ರಿಂದ 1967ರವರೆಗೆ 45 ವರ್ಷಗಳ ಕಾಲ ಗವಿಮಠದ ಪೀಠವನ್ನು ಅಲಂಕರಿಸಿ ನಾಡಿನಾದ್ಯಂತ ಧಾರ್ಮಿಕ-ಸಾಂಸ್ಕೃತಿಕ-ಶೈಕ್ಷಣಿಕ ಜಾಗೃತಿ ಮೂಡಿಸಿದರು.
ಈ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಗವಿಸಿದ್ದೇಶ್ವರ ಕಾಲೇಜ್ ಆಫ್ ನರ್ಸಿಂಗ್ನ ಶೈಕ್ಷಣಿಕ ನಿರ್ದೇಶಕರಾದ ನಾಗರಾಜ ಬೊಮ್ಮನಾಳ, ಕಾಲೇಜಿನ ಪ್ರಾಚಾರ್ಯರಾದ ಡಾ. ಮರ್ಷಿಲ್ ಎಸ್. ಎಚ್. ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಪೂಜ್ಯರ ಗದ್ದುಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿದರು. ನಂತರ ಗುರುವಂದನೆ, ಪ್ರಾರ್ಥನೆ ಮತ್ತು ದಾಸೋಹ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಶ್ರೀ ಜಗದ್ಗುರು ಗವಿಸಿದ್ದೇಶ್ವರ ಪ್ಯಾರ ಮೆಡಿಕಲ್ ಕಾಲೇಜಿನ ಬೋಧಕ ಸಿಬ್ಬಂದಿ ನಿರಂಜನ ಅವರು ಮಾತನಾಡಿ, ಪೂಜ್ಯರು ಅಕ್ಷರ, ಅನ್ನ, ಜೋಳಿಗೆಯನ್ನು ಹಿಡಿದು ಸಮಾಜಕ್ಕೆ ಧಾರ್ಮಿಕ ಶಿಕ್ಷಣ, ಆಯುರ್ವೇದ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.
ಪೂಜ್ಯರು 1963ರಲ್ಲಿ ಸ್ಥಾಪಿಸಿದ ಶ್ರೀ ಗವಿಸಿದ್ದೇಶ್ವರ ವಿದ್ಯಾವರ್ಧಕ ಟ್ರಸ್ಟ್ ಇಂದು ಶಿಕ್ಷಣ ಕ್ಷೇತ್ರದಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದೆ. ಆ ಪರಂಪರೆಯನ್ನು ಮುಂದುವರೆಸುವ ಭಾಗವಾಗಿ ನರ್ಸಿಂಗ್ ವಿದ್ಯಾರ್ಥಿಗಳು *ಸೇವೆಯೇ ಮಹಾಪೂಜೆ* ಎಂಬ ಪೂಜ್ಯರ ಆದರ್ಶವನ್ನು ಅಳವಡಿಸಿಕೊಳ್ಳುವ ಪ್ರತಿಜ್ಞೆ ಮಾಡಿದರು.
ಗವಿಮಠದ ಭವ್ಯ ಪರಂಪರೆ ಮತ್ತು ಪೂಜ್ಯರ ತತ್ವಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಸಂಕಲ್ಪದೊಂದಿಗೆ ಈ ಕಾರ್ಯಕ್ರಮವನ್ನು ಆಚರಿಸಲಾಯಿತು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್