ಹರಿಯಾಣ ಸಿಎಂ ಕಚೇರಿ, ಚಂಡೀಗಢದ ಏರ್ಫೋರ್ಸ್ ಶಾಲೆ ಸೇರಿ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ
ಚಂಡೀಗಢ, 01 ಜುಲೈ (ಹಿ.ಸ.): ಆ್ಯಂಕರ್: ಹರಿಯಾಣ ಮುಖ್ಯಮಂತ್ರಿ ನಾಯಬ್ ಸೈನಿ ಅವರ ಕಚೇರಿ ಹಾಗೂ ಚಂಡೀಗಢದ ಏರ್‌ಫೋರ್ಸ್ ಶಾಲೆ ಸೇರಿದಂತೆ ಹಲವು ಶಾಲೆಗಳಿಗೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಇ-ಮೇಲ್ ಬಂದಿರುವ ಹಿನ್ನೆಲೆಯಲ್ಲಿ ಬುಧವಾರ ಭಾರೀ ಆತಂಕದ ವಾತಾವರಣ ನಿರ್ಮಾಣವಾಯಿತು. ಬೇಸಿಗೆ ರಜೆ ಬಳಿಕ ಶಾಲೆ
ಹರಿಯಾಣ ಸಿಎಂ ಕಚೇರಿ, ಚಂಡೀಗಢದ ಏರ್ಫೋರ್ಸ್ ಶಾಲೆ ಸೇರಿ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ


ಚಂಡೀಗಢ, 01 ಜುಲೈ (ಹಿ.ಸ.):

ಆ್ಯಂಕರ್:

ಹರಿಯಾಣ ಮುಖ್ಯಮಂತ್ರಿ ನಾಯಬ್ ಸೈನಿ ಅವರ ಕಚೇರಿ ಹಾಗೂ ಚಂಡೀಗಢದ ಏರ್‌ಫೋರ್ಸ್ ಶಾಲೆ ಸೇರಿದಂತೆ ಹಲವು ಶಾಲೆಗಳಿಗೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಇ-ಮೇಲ್ ಬಂದಿರುವ ಹಿನ್ನೆಲೆಯಲ್ಲಿ ಬುಧವಾರ ಭಾರೀ ಆತಂಕದ ವಾತಾವರಣ ನಿರ್ಮಾಣವಾಯಿತು. ಬೇಸಿಗೆ ರಜೆ ಬಳಿಕ ಶಾಲೆಗಳು ಪುನರಾರಂಭವಾದ ಮೊದಲ ದಿನವೇ ಈ ಬೆದರಿಕೆ ಸಂದೇಶಗಳು ಬಂದಿರುವುದರಿಂದ ಪೊಲೀಸರು ಮತ್ತು ಭದ್ರತಾ ಸಂಸ್ಥೆಗಳು ತಕ್ಷಣವೇ ಕಾರ್ಯಾಚರಣೆಗೆ ಇಳಿದಿವೆ.

ಚಂಡೀಗಢದ ಸೆಕ್ಟರ್-37 ಬಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸೆಕ್ಟರ್-47ರ ಕೇಂದ್ರಿಯ ವಿದ್ಯಾಲಯಕ್ಕೆ ಬಂದ ಇ-ಮೇಲ್‌ನಲ್ಲಿ ಮಧ್ಯಾಹ್ನ 1.11 ಗಂಟೆಗೆ ಚಂಡೀಗಢದ ಎಲ್ಲಾ ಶಾಲೆಗಳಲ್ಲಿ ಬಾಂಬ್ ಸ್ಫೋಟ ನಡೆಯಲಿದೆ ಎಂದು ಬೆದರಿಕೆ ಹಾಕಲಾಗಿದೆ. ಇದೇ ವೇಳೆ ಹರಿಯಾಣ ಮುಖ್ಯಮಂತ್ರಿ ಕಚೇರಿಯಲ್ಲಿ ಮಧ್ಯಾಹ್ನ 3.11 ಗಂಟೆಗೆ ಸ್ಫೋಟ ನಡೆಸುವುದಾಗಿ ಉಲ್ಲೇಖಿಸಲಾಗಿದೆ.

ಇದೇ ರೀತಿ ಚಂಡೀಗಢದ ಸೆಕ್ಟರ್-31ರ ಏರ್‌ಫೋರ್ಸ್ ಶಾಲೆಗೂ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ಚಂಡೀಗಢ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಹಾಗೂ ಇತರ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶಾಲಾ ಆವರಣದ ಸಂಪೂರ್ಣ ಶೋಧ ಕಾರ್ಯ ಆರಂಭಿಸಿದರು.

ಶಾಲಾ ಆಡಳಿತಕ್ಕೆ ಬಂದ ಇ-ಮೇಲ್‌ನಲ್ಲಿ ಶಾಲಾ ಆವರಣದಲ್ಲಿ ಬಾಂಬ್ ಇರಿಸಲಾಗಿದೆ ಎಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಶಾಲಾ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಸಂಪೂರ್ಣ ತಪಾಸಣೆ ನಡೆಸಲಾಗಿದೆ.

ಪ್ರಾಥಮಿಕ ತನಿಖೆಯಲ್ಲಿ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿರುವ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆದರೆ ಮುನ್ನೆಚ್ಚರಿಕಾ ಕ್ರಮವಾಗಿ ವ್ಯಾಪಕ ಶೋಧ ಕಾರ್ಯ ಮುಂದುವರಿದಿದೆ.

ಇದರ ಜೊತೆಗೆ ಬೆದರಿಕೆ ಇ-ಮೇಲ್ ಕಳುಹಿಸಿದ ವ್ಯಕ್ತಿಯನ್ನು ಪತ್ತೆಹಚ್ಚಲು ಪೊಲೀಸರು ಸೈಬರ್ ತಜ್ಞರ ನೆರವಿನೊಂದಿಗೆ ಇ-ಮೇಲ್ ಮೂಲ ಹಾಗೂ ಐಪಿ ವಿಳಾಸದ ತನಿಖೆ ಆರಂಭಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಚಂಡೀಗಢ ಪೊಲೀಸರು ಬೆದರಿಕೆ ಬಂದಿರುವ ಎಲ್ಲಾ ಶಾಲೆಗಳು ಮತ್ತು ಸಂಬಂಧಿತ ಸಂಸ್ಥೆಗಳಲ್ಲಿ ಭದ್ರತಾ ಪರಿಶೀಲನೆ ನಡೆಸುತ್ತಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande