
ನವದೆಹಲಿ, 01 ಜುಲೈ (ಹಿ.ಸ.):
ಆ್ಯಂಕರ್:
ಭಾರತೀಯ ವಾಯುಪಡೆಯ 51ನೇ ಉಪ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಆಶುತೋಷ್ ದೀಕ್ಷಿತ್ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು. ಸುಮಾರು ನಾಲ್ಕು ದಶಕಗಳ ಸೇವೆಯ ಬಳಿಕ ನಿವೃತ್ತರಾದ ಏರ್ ಮಾರ್ಷಲ್ ನಾಗೇಶ್ ಕಪೂರ್ ಅವರ ಸ್ಥಾನವನ್ನು ಅವರು ಅಲಂಕರಿಸಿದ್ದಾರೆ.
ಭಾರತೀಯ ವಾಯುಪಡೆ ಆಧುನೀಕರಣ ಮತ್ತು ಸಾಮರ್ಥ್ಯ ವೃದ್ಧಿಯ ಮಹತ್ವದ ಹಂತದಲ್ಲಿರುವ ಸಂದರ್ಭದಲ್ಲಿ ಈ ನೇಮಕಾತಿ ನಡೆದಿದೆ. ನೂತನ ಉಪ ಮುಖ್ಯಸ್ಥರಾಗಿ ದೀಕ್ಷಿತ್ ಅವರು ವಾಯುಪಡೆಯ ಆಧುನೀಕರಣ, ಸ್ವದೇಶಿ ತಂತ್ರಜ್ಞಾನ ಅಭಿವೃದ್ಧಿ ಹಾಗೂ ಹೊಸ ವಿಮಾನಗಳ ಸೇರ್ಪಡೆಗೆ ನೇತೃತ್ವ ನೀಡಲಿದ್ದಾರೆ.
ಏರ್ ಮಾರ್ಷಲ್ ಆಶುತೋಷ್ ದೀಕ್ಷಿತ್ ಅವರು ಪರಿಣತ ಫ್ಲೈಯಿಂಗ್ ಇನ್‌ಸ್ಟ್ರಕ್ಟರ್ ಹಾಗೂ ಪರೀಕ್ಷಾ ಪೈಲಟ್ ಆಗಿದ್ದಾರೆ. ಮಿಗ್-21, ಮಿಗ್-29 ಮತ್ತು ಮಿರಾಜ್-2000 ಸೇರಿದಂತೆ 20ಕ್ಕೂ ಹೆಚ್ಚು ಮಾದರಿಯ ಯುದ್ಧ ವಿಮಾನಗಳಲ್ಲಿ 3,300 ಗಂಟೆಗಳಿಗಿಂತ ಹೆಚ್ಚು ಹಾರಾಟದ ಅನುಭವ ಹೊಂದಿದ್ದಾರೆ. ಅವರು ಆಪರೇಷನ್ ಸಫೇದ್ ಸಾಗರ್ ಮತ್ತು ಆಪರೇಷನ್ ರಕ್ಷಕ್ ಕಾರ್ಯಾಚರಣೆಗಳಲ್ಲೂ ಭಾಗವಹಿಸಿದ್ದಾರೆ.
ಇದಕ್ಕೂ ಮೊದಲು ಅವರು ಚೀಫ್ ಆಫ್ ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್ ಆಗಿ ಕಾರ್ಯನಿರ್ವಹಿಸಿದ್ದು, ಮೂರು ಸೇನೆಗಳ ಸಮನ್ವಯವನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ, ಕೇಂದ್ರ ವಾಯು ಕಮಾಂಡ್‌ನ ಏರ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿಯೂ ಸೇವೆ ಸಲ್ಲಿಸಿದ್ದರು.
ಅವರ ನೇತೃತ್ವದಲ್ಲಿ ಎಲ್‌ಸಿಎ ತೇಜಸ್ ಮಾರ್ಕ್-1ಎ, ಮಾರ್ಕ್-2 ಹಾಗೂ ಎಎಂಸಿಎ ಸೇರಿದಂತೆ ಹಲವು ಸ್ವದೇಶಿ ಯುದ್ಧ ವಿಮಾನ ಯೋಜನೆಗಳು ಗಮನಾರ್ಹ ಪ್ರಗತಿ ಸಾಧಿಸಿವೆ. ಆತ್ಮನಿರ್ಭರ ಭಾರತ ಪರಿಕಲ್ಪನೆಗೆ ಅನುಗುಣವಾಗಿ ವಾಯುಪಡೆಯ ಆಧುನೀಕರಣಕ್ಕೆ ಅವರು ಮಹತ್ವದ ಕೊಡುಗೆ ನೀಡಿದ್ದಾರೆ.
ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ), ವಾಯುಪಡೆ ಅಕಾಡೆಮಿ ಹಾಗೂ ರಾಷ್ಟ್ರೀಯ ರಕ್ಷಣಾ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿರುವ ಆಶುತೋಷ್ ದೀಕ್ಷಿತ್ ಅವರು 1986ರ ಡಿಸೆಂಬರ್ 6ರಂದು ಫೈಟರ್ ಸ್ಟ್ರೀಮ್‌ನಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿದ್ದರು.
ಅವರ ಅತ್ಯುತ್ತಮ ಸೇವೆಗಾಗಿ ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ವಾಯುಸೇನೆ ಪದಕ ಹಾಗೂ ವಿಶಿಷ್ಟ ಸೇವಾ ಪದಕ ಸೇರಿದಂತೆ ಹಲವು ರಾಷ್ಟ್ರ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಉಪ ವಾಯುಪಡೆ ಮುಖ್ಯಸ್ಥರಾಗಿ ಅವರು ಭಾರತೀಯ ವಾಯುಪಡೆಯ ಹೊಸ ಶಸ್ತ್ರಾಸ್ತ್ರ ಮತ್ತು ವಿಮಾನಗಳ ಖರೀದಿ, ತುರ್ತು ಖರೀದಿ ಪ್ರಕ್ರಿಯೆಗಳು ಹಾಗೂ ಭವಿಷ್ಯದ ತಂತ್ರಜ್ಞಾನ ಆಧಾರಿತ ಆಧುನೀಕರಣ ಕಾರ್ಯಕ್ರಮಗಳ ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.