
ನವದೆಹಲಿ, 01 ಜುಲೈ (ಹಿ.ಸ.):
ಆ್ಯಂಕರ್:
ಭಾರತೀಯ ಸೇನೆಯ ನೂತನ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಜನರಲ್ ಧೀರಜ್ ಸೇಠ್ ಅವರು, ಸ್ವದೇಶಿ ತಂತ್ರಜ್ಞಾನ ಮತ್ತು ದೇಶೀಯ ಸಾಮರ್ಥ್ಯದ ಆಧಾರದ ಮೇಲೆ ಯುದ್ಧದಲ್ಲಿ ಜಯ ಸಾಧಿಸುವುದೇ ಭಾರತೀಯ ಸೇನೆಯ ಪ್ರಮುಖ ಗುರಿಯಾಗಲಿದೆ ಎಂದು ಹೇಳಿದ್ದಾರೆ. ಗಡಿಭದ್ರತೆ, ಕಾರ್ಯಾಚರಣಾ ಸನ್ನದ್ಧತೆ ಹಾಗೂ ತಂತ್ರಜ್ಞಾನ ಆಧಾರಿತ ಆಧುನೀಕರಣಕ್ಕೆ ಆದ್ಯತೆ ನೀಡುವುದಾಗಿ ಅವರು ಭರವಸೆ ನೀಡಿದರು.
ಅಧಿಕಾರ ಸ್ವೀಕರಿಸಿದ ಬಳಿಕ ದಕ್ಷಿಣ ಬ್ಲಾಕ್ ಆವರಣದಲ್ಲಿ ಅವರಿಗೆ ಗೌರವ ವಂದನೆ ಸಲ್ಲಿಸಲಾಯಿತು. ಬಳಿಕ ತಮ್ಮ ತಂದೆ, ನಿವೃತ್ತ ಲೆಫ್ಟಿನೆಂಟ್ ಜನರಲ್ ಕೆ.ಎಂ. ಸೇಠ್ ಹಾಗೂ ಭಾರತೀಯ ನೌಕಾಪಡೆಯ ರಿಯರ್ ಅಡ್ಮಿರಲ್ ಆಗಿರುವ ತಮ್ಮ ಸಹೋದರ ರವಿನೀಶ್ ಸೇಠ್ ಅವರಿಗೆ ಸಲ್ಯೂಟ್ ಸಲ್ಲಿಸಿದರು.
ತಮ್ಮ ಮೊದಲ ಭಾಷಣದಲ್ಲಿ ಮಾತನಾಡಿದ ಅವರು, ಭಾರತೀಯ ಸೇನೆಯ 31ನೇ ಮುಖ್ಯಸ್ಥನಾಗಿ ಅಧಿಕಾರ ವಹಿಸಿಕೊಳ್ಳುವುದು ನನಗೆ ಹೆಮ್ಮೆ ಮತ್ತು ವಿನಮ್ರತೆಯ ಕ್ಷಣವಾಗಿದೆ. ಕರ್ತವ್ಯ, ಗೌರವ ಮತ್ತು ರಾಷ್ಟ್ರ ಮೊದಲನೆಯದು ಎಂಬ ಆದರ್ಶಗಳಿಗೆ ಬದ್ಧನಾಗಿ ಈ ಜವಾಬ್ದಾರಿಯನ್ನು ಸ್ವೀಕರಿಸಿದ್ದೇನೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರಿಗೆ ಗೌರವ ನಮನ ಸಲ್ಲಿಸುತ್ತೇನೆ ಎಂದರು.
ಬದಲಾಗುತ್ತಿರುವ ಭದ್ರತಾ ಸವಾಲುಗಳನ್ನು ಎದುರಿಸಲು ತಂತ್ರಜ್ಞಾನ ಆಧಾರಿತ, ಭವಿಷ್ಯಕ್ಕೆ ಸಜ್ಜುಗೊಂಡ ಸೇನೆಯನ್ನು ನಿರ್ಮಿಸುವುದು ತಮ್ಮ ಆದ್ಯತೆಯಾಗಿದೆ ಎಂದು ಅವರು ಹೇಳಿದರು. ನವೀನತೆ, ಕಾರ್ಯಾಚರಣಾ ಸಾಮರ್ಥ್ಯ ವೃದ್ಧಿ ಹಾಗೂ ಯುದ್ಧಭೂಮಿಯ ಬದಲಾವಣೆಗಳಿಗೆ ಅನುಗುಣವಾಗಿ ಸೇನೆಯನ್ನು ಮತ್ತಷ್ಟು ಆಧುನೀಕರಿಸಲಾಗುವುದು ಎಂದು ತಿಳಿಸಿದರು.
ಭಾರತೀಯ ವಾಯುಪಡೆ ಮತ್ತು ನೌಕಾಪಡೆಯೊಂದಿಗೆ ಇನ್ನಷ್ಟು ಸಮನ್ವಯ ಸಾಧಿಸಿ ತ್ರಿಸೇನೆಗಳ ಒಗ್ಗಟ್ಟಿನ ಕಾರ್ಯಾಚರಣೆಗೆ ಒತ್ತು ನೀಡಲಾಗುವುದು. ವಿಕಸಿತ ಭಾರತ–2047 ಗುರಿ ಸಾಧನೆಗೆ ಆತ್ಮನಿರ್ಭರ ಭಾರತ ಪರಿಕಲ್ಪನೆಯಡಿ ದೇಶೀಯ ತಂತ್ರಜ್ಞಾನ ಮತ್ತು ಉತ್ಪನ್ನಗಳ ಬಳಕೆಯನ್ನು ಹೆಚ್ಚಿಸಿ ಆತ್ಮನಿರ್ಭರ ಸೇನೆಯನ್ನು ನಿರ್ಮಿಸಲಾಗುವುದು ಎಂದು ಅವರು ಹೇಳಿದರು.
ನಮ್ಮ ಅತ್ಯಂತ ದೊಡ್ಡ ಗುರಿ ಸ್ವದೇಶಿ ವಿಧಾನಗಳು ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ಯುದ್ಧದಲ್ಲಿ ವಿಜಯ ಸಾಧಿಸುವುದಾಗಿದೆ. ಗಡಿಗಳಲ್ಲಿ ಹಾಗೂ ಉದಯೋನ್ಮುಖ ಭದ್ರತಾ ಸವಾಲುಗಳ ಕುರಿತು ನಿರಂತರ ನಿಗಾ ಇಟ್ಟು, ಯಾವುದೇ ಬೆದರಿಕೆಯನ್ನು ಸಮರ್ಥವಾಗಿ ಎದುರಿಸಲು ಉನ್ನತ ಮಟ್ಟದ ಕಾರ್ಯಾಚರಣಾ ಸನ್ನದ್ಧತೆಯನ್ನು ಕಾಯ್ದುಕೊಳ್ಳುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.
ಜನರಲ್ ಧೀರಜ್ ಸೇಠ್ ಅವರು ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ)ಯ ಹಳೆಯ ವಿದ್ಯಾರ್ಥಿಯಾಗಿದ್ದು, 1997ರ ಬಳಿಕ ಭಾರತೀಯ ಸೇನೆಯ ಮುಖ್ಯಸ್ಥರಾದ ಮೊದಲ ಆರ್ಮ್ಡ್ ಕಾರ್ಪ್ಸ್ ಅಧಿಕಾರಿಯಾಗಿದ್ದಾರೆ. ಅವರ ತಂದೆ ನಿವೃತ್ತ ಲೆಫ್ಟಿನೆಂಟ್ ಜನರಲ್ ಕೆ.ಎಂ. ಸೇಠ್ ಹಾಗೂ ಸಹೋದರ ರಿಯರ್ ಅಡ್ಮಿರಲ್ ರವಿನೀಶ್ ಸೇಠ್ ಸೇವೆಯಲ್ಲಿರುವುದರಿಂದ ಅವರು ಸೇನಾ ಪರಂಪರೆ ಹೊಂದಿದ ಕುಟುಂಬದಿಂದ ಬಂದವರಾಗಿದ್ದಾರೆ.
ನೂತನ ಸೇನಾ ಮುಖ್ಯಸ್ಥರು ತಮ್ಮ ಭಾಷಣದ ಅಂತ್ಯದಲ್ಲಿ, ನನ್ನ ದೃಷ್ಟಿಯಲ್ಲಿ ಹೊಸದಾಗಿ ಸೇರ್ಪಡೆಯಾದ ಅಗ್ನಿವೀರರಿಂದ ಹಿಡಿದು ನಿವೃತ್ತ ಹಿರಿಯ ಯೋಧರವರೆಗೆ ಪ್ರತಿಯೊಬ್ಬರೂ ಯೋಧರೇ. ಅವರೇ ಭಾರತೀಯ ಸೇನೆಯ ಅತ್ಯಂತ ದೊಡ್ಡ ಶಕ್ತಿ ಎಂದು ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.