ಕೆಲಸವನ್ನು ಒತ್ತಡವಲ್ಲ, ಸಂತೋಷದ ಮೂಲವಾಗಿಸಿಕೊಳ್ಳಿ: ಯುವಕರಿಗೆ ಮನನ್ ಚತುರ್ವೇದಿ ಕರೆ
ನವದೆಹಲಿ, 01 ಜುಲೈ (ಹಿ.ಸ.): ಆ್ಯಂಕರ್:ಕಲೆ ಮತ್ತು ಮಾತೃತ್ವದ ಅಪೂರ್ವ ಸಂಗಮವೆಂದು ಗುರುತಿಸಿಕೊಂಡಿರುವ, ದೇಶಾದ್ಯಂತ ''ರಂಗರೇಜಾ'' ಹೆಸರಿನಿಂದ ಖ್ಯಾತಿ ಪಡೆದ ಚಿತ್ರಕಲಾವಿದೆ ಮನನ್ ಚತುರ್ವೇದಿ, ಇಂದಿನ ಯುವಜನರು ಯಾವುದೇ ಕೆಲಸವನ್ನು ಒತ್ತಡವಾಗಿ ಕಾಣದೆ ಸಂತೋಷದಿಂದ ಮಾಡಬೇಕು ಎಂದು ಸಲಹೆ ನೀಡಿದರು.
ಚಿತ್ರಕಲಾವಿದೆ ಮನನ್ ಚತುರ್ವೇದಿ


ನವದೆಹಲಿ, 01 ಜುಲೈ (ಹಿ.ಸ.):

ಆ್ಯಂಕರ್:ಕಲೆ ಮತ್ತು ಮಾತೃತ್ವದ ಅಪೂರ್ವ ಸಂಗಮವೆಂದು ಗುರುತಿಸಿಕೊಂಡಿರುವ, ದೇಶಾದ್ಯಂತ 'ರಂಗರೇಜಾ' ಹೆಸರಿನಿಂದ ಖ್ಯಾತಿ ಪಡೆದ ಚಿತ್ರಕಲಾವಿದೆ ಮನನ್ ಚತುರ್ವೇದಿ, ಇಂದಿನ ಯುವಜನರು ಯಾವುದೇ ಕೆಲಸವನ್ನು ಒತ್ತಡವಾಗಿ ಕಾಣದೆ ಸಂತೋಷದಿಂದ ಮಾಡಬೇಕು ಎಂದು ಸಲಹೆ ನೀಡಿದರು. ಸಂತೋಷದಿಂದ ಮಾಡಿದ ಕೆಲಸವೇ ನಿರಂತರತೆ ಹಾಗೂ ಯಶಸ್ಸಿನ ದಾರಿಯನ್ನು ತೆರೆದಿಡುತ್ತದೆ ಎಂದು ಅವರು ಹೇಳಿದರು.

ಪ್ರಸ್ತುತ ದೆಹಲಿಯ ಪಾಲಿಕಾ ಬಜಾರನಲ್ಲಿ ನಿರಂತರ 24 ಗಂಟೆಗಳ ಕಾಲ ಸುಮಾರು 25 ಚಿತ್ರಗಳನ್ನು ಬಿಡಿಸುವ ವಿಶಿಷ್ಟ ಸವಾಲನ್ನು ಸ್ವೀಕರಿಸಿರುವ ಮನನ್, ತಮ್ಮ ಈ ಪ್ರಯತ್ನದ ಮೂಲಕ ಕಲೆಯ ಮೇಲಿನ ಬದ್ಧತೆಯನ್ನು ಪ್ರದರ್ಶಿಸುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಜನಿಸಿದ ಅವರು ರಾಜಸ್ಥಾನವನ್ನು ತಮ್ಮ ಕಾರ್ಯಭೂಮಿಯನ್ನಾಗಿ ಮಾಡಿಕೊಂಡಿದ್ದಾರೆ.

'ಹಿಂದೂಸ್ತಾನ್ ಸಮಾಚಾರ ಸುದ್ದಿ ಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಮನನ್, ಇಂದಿನ ಮಕ್ಕಳು ಮತ್ತು ಯುವಕರು ಯಾವುದೇ ಒತ್ತಡಕ್ಕೆ ಒಳಗಾಗಿ ಕೆಲಸ ಮಾಡಬಾರದು. ಜೀವನದಲ್ಲಿ ಸಂತೋಷವಾಗಿರುವುದೇ ಅತ್ಯಂತ ಮುಖ್ಯ. ಸಂತೋಷದ ಮನಸ್ಸಿನಿಂದ ಮಾಡುವ ಪ್ರತಿಯೊಂದು ಕೆಲಸವೂ ಸುಂದರ ಫಲಿತಾಂಶವನ್ನು ನೀಡುತ್ತದೆ ಎಂದು ಹೇಳಿದರು.

ಸ್ವಚ್ಛತೆ ಮತ್ತು ಸ್ಪಷ್ಟತೆಯನ್ನೇ ತಮ್ಮ ಕಲೆಯ ಪ್ರಮುಖ ಶಕ್ತಿಯೆಂದು ವಿವರಿಸಿದ ಅವರು, ಕಲೆ ಎಂದಿಗೂ ಒತ್ತಡದ ಅಡಿಯಲ್ಲಿ ಅರಳುವುದಿಲ್ಲ. ಹೃದಯ ಹೇಗೆ ಸ್ಪಂದಿಸುತ್ತದೆಯೋ, ಅದೇ ಭಾವನೆ ಸಹಜವಾಗಿ ಕ್ಯಾನ್ವಾಸ್ ಮೇಲೆ ಮೂಡುತ್ತದೆ ಎಂದು ತಿಳಿಸಿದರು.

ಭವಿಷ್ಯದ ಯೋಜನೆಗಳ ಕುರಿತು ಮಾತನಾಡಿದ ಅವರು, ತಮ್ಮ ಮುಂದಿನ ಗುರಿ ಮುಂಬೈ ಎಂದು ಹೇಳಿದರು. ಆದರೆ ತಮ್ಮ ಪಯಣ ಕೇವಲ ಚಿತ್ರಕಲೆಗೆ ಸೀಮಿತವಾಗಿಲ್ಲ. ಆಶ್ರಯವಿಲ್ಲದ ಮತ್ತು ನಿರ್ಗತಿಕ ಮಕ್ಕಳಿಗೆ ಸುರಕ್ಷಿತ ನೆಲೆ ಹಾಗೂ ಉತ್ತಮ ಭವಿಷ್ಯ ಕಲ್ಪಿಸುವುದೇ ತಮ್ಮ ಜೀವನದ ಪ್ರಮುಖ ಉದ್ದೇಶ ಎಂದು ಅವರು ತಿಳಿಸಿದರು.

ಈ ಮೊದಲು ಮನನ್ ಚತುರ್ವೇದಿ ನಿರಂತರ 72 ಗಂಟೆಗಳಲ್ಲಿ 105 ಚಿತ್ರಗಳನ್ನು ರಚಿಸಿ ವಿಶ್ವದಾಖಲೆ ನಿರ್ಮಿಸಿದ್ದರು. ಮಕ್ಕಳ ಹಕ್ಕುಗಳು ಮತ್ತು ಅವರ ರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಚಿತ್ರಗಳನ್ನು ರಚಿಸುತ್ತಿರುವ ಅವರು, ನಿರ್ಗತಿಕ ಮಕ್ಕಳಿಗೆ ಆಶಾಕಿರಣವಾಗಿ ಗುರುತಿಸಿಕೊಂಡಿದ್ದಾರೆ.

ಫ್ಯಾಷನ್ ಡಿಸೈನಿಂಗ್‌ನಲ್ಲಿ ಉನ್ನತ ಶಿಕ್ಷಣ ಪಡೆದಿದ್ದರೂ, ಆಕರ್ಷಕ ವೃತ್ತಿಜೀವನವನ್ನು ಆರಿಸಿಕೊಳ್ಳದೆ ಸಮಾಜದಿಂದ ನಿರ್ಲಕ್ಷ್ಯಕ್ಕೊಳಗಾದ ಮಕ್ಕಳ ಬದುಕನ್ನು ರೂಪಿಸುವ ಕಾರ್ಯಕ್ಕೆ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದಾರೆ. ಅವರು ನಡೆಸುತ್ತಿರುವ 'ಸುರಮನ ಸಂಸ್ಥೆ' ಆಶ್ರಯವಿಲ್ಲದ ಮಕ್ಕಳಿಗೆ ವಸತಿ ಒದಗಿಸುವುದಷ್ಟೇ ಅಲ್ಲದೆ, ಅವರನ್ನು ಶಿಕ್ಷಣ, ಕೌಶಲ್ಯ ಮತ್ತು ಸ್ವಾವಲಂಬನೆಯತ್ತ ಕೊಂಡೊಯ್ಯುವ ಕೆಲಸವನ್ನು ಮಾಡುತ್ತಿದೆ.

ಮನನ್ ಅವರ ಸಹೋದ್ಯೋಗಿಯೊಬ್ಬರ ಪ್ರಕಾರ, ಸಂಸ್ಥೆಯ ಕಾರ್ಯಗಳಿಗೆ ಅಗತ್ಯವಾದ ನಿಧಿ ಸಂಗ್ರಹಿಸಲು ಅವರು 'ಮನನ್ ಥಿಯೇಟರ್ಸ್' ಬ್ಯಾನರ್ ಅಡಿಯಲ್ಲಿ ನಾಟಕಗಳು ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಅವರ ವಿಶಿಷ್ಟ ಮಾತೃತ್ವದ ಮನೋಭಾವ ಮತ್ತು ಸಮಾಜಸೇವೆಯನ್ನು ಗುರುತಿಸಿ ರಾಜಸ್ಥಾನ ಸರ್ಕಾರ ಅವರಿಗೆ ರಾಜ್ಯ ಬಾಲ ಸಂರಕ್ಷಣಾ ಆಯೋಗದ ಅಧ್ಯಕ್ಷೆಯ ಜವಾಬ್ದಾರಿಯನ್ನು ನೀಡಿತ್ತು. ತಮ್ಮ ಅಧಿಕಾರಾವಧಿಯಲ್ಲಿ ಮಕ್ಕಳ ಕಲ್ಯಾಣ ಮತ್ತು ಪುನರ್ವಸತಿ ಕ್ಷೇತ್ರದಲ್ಲಿ ಹಲವು ನವೀನ ಹಾಗೂ ಪ್ರಶಂಸನೀಯ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande