
ನವದೆಹಲಿ, 01 ಜುಲೈ (ಹಿ.ಸ.):
ಆ್ಯಂಕರ್:
ರಾಷ್ಟ್ರೀಯ ವೈದ್ಯರ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ದೇಶದಾದ್ಯಂತ ಇರುವ ವೈದ್ಯ ಸಮುದಾಯಕ್ಕೆ ಶುಭಾಶಯಗಳನ್ನು ತಿಳಿಸಿ, ಅವರ ಸೇವಾ ಮನೋಭಾವ, ಕರುಣೆ ಮತ್ತು ಸಮರ್ಪಣೆಯನ್ನು ಶ್ಲಾಘಿಸಿದರು. ವೈದ್ಯರ ಕಠಿಣ ಪರಿಶ್ರಮ, ಮಾನವೀಯತೆ ಹಾಗೂ ಬದ್ಧತೆಯೇ ಭಾರತದ ಆರೋಗ್ಯ ವ್ಯವಸ್ಥೆಯ ಬೆನ್ನೆಲುಬಾಗಿದ್ದು, ಸವಾಲಿನ ಸಂದರ್ಭಗಳಲ್ಲಿಯೂ ಅವರು ಸಲ್ಲಿಸಿರುವ ನಿರಂತರ ಸೇವೆ ಕೋಟ್ಯಂತರ ಜನರ ವಿಶ್ವಾಸ ಮತ್ತು ಕೃತಜ್ಞತೆಯನ್ನು ಗಳಿಸಿದೆ ಎಂದು ಹೇಳಿದರು.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸಂದೇಶ ಹಂಚಿಕೊಂಡಿರುವ ಪ್ರಧಾನಿ ಮೋದಿ, ಕಳೆದ ಒಂದು ದಶಕದಲ್ಲಿ ಭಾರತದ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಪ್ರಗತಿ ಸಾಧಿಸಲಾಗಿದೆ ಎಂದು ಹೇಳಿದರು. ದೇಶದಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದ್ದು, ಪದವಿ ಹಾಗೂ ಸ್ನಾತಕೋತ್ತರ ವೈದ್ಯಕೀಯ ಸೀಟುಗಳ ಸಂಖ್ಯೆಯಲ್ಲಿಯೂ ಗಣನೀಯ ಏರಿಕೆಯಾಗಿದೆ. ಇದರಿಂದ ಭವಿಷ್ಯದ ವೈದ್ಯರಿಗೆ ಹೆಚ್ಚಿನ ಅವಕಾಶಗಳು ದೊರೆತಿದ್ದು, ಆರೋಗ್ಯ ಕ್ಷೇತ್ರ ಮತ್ತಷ್ಟು ಬಲಿಷ್ಠವಾಗುವುದರ ಜೊತೆಗೆ ದೇಶದ ಪ್ರತಿಯೊಂದು ಭಾಗಕ್ಕೂ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸಲು ನೆರವಾಗಿದೆ ಎಂದು ತಿಳಿಸಿದ್ದಾರೆ.
ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣದಲ್ಲಿ ವೈದ್ಯರ ಪಾತ್ರ ಇನ್ನಷ್ಟು ಮಹತ್ವದ್ದಾಗಲಿದೆ ಎಂದು ಪ್ರಧಾನಿ ಹೇಳಿದರು. ತಡೆಗಟ್ಟುವ ಆರೋಗ್ಯ ಸೇವೆಗಳಿಗೆ ಉತ್ತೇಜನ ನೀಡುವುದು, ವೈದ್ಯಕೀಯ ಸಂಶೋಧನೆಯನ್ನು ವಿಸ್ತರಿಸುವುದು, ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ಹಾಗೂ ಪ್ರತಿಯೊಬ್ಬ ನಾಗರಿಕನಿಗೂ ಕೈಗೆಟುಕುವ ಮತ್ತು ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವಲ್ಲಿ ವೈದ್ಯರು ಪ್ರಮುಖ ಕೊಡುಗೆ ನೀಡಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಕೂಡ ದೇಶದ ವೈದ್ಯರಿಗೆ ರಾಷ್ಟ್ರೀಯ ವೈದ್ಯರ ದಿನದ ಶುಭಾಶಯಗಳನ್ನು ಕೋರಿದರು. ವೈದ್ಯಕೀಯ ಸಮುದಾಯವು ಅಚಲ ನಿಷ್ಠೆ, ಉನ್ನತ ವೃತ್ತಿಪರತೆ ಹಾಗೂ ಮಾನವೀಯ ಸೇವಾ ಮನೋಭಾವದ ಮೂಲಕ ರಾಷ್ಟ್ರ ಸೇವೆಯಲ್ಲಿ ಅಮೂಲ್ಯ ಕೊಡುಗೆ ನೀಡಿದೆ ಎಂದು ಅವರು ಪ್ರಶಂಸಿಸಿದ್ದಾರೆ.
ಎಕ್ಸ್‌ನಲ್ಲಿ ಸಂದೇಶ ಹಂಚಿಕೊಂಡಿರುವ ನಡ್ಡಾ, ವೈದ್ಯ ಸಮುದಾಯದ ಸೇವೆಯನ್ನು ಹೃತ್ಪೂರ್ವಕವಾಗಿ ಅಭಿನಂದಿಸಿ ಕೃತಜ್ಞತೆ ಸಲ್ಲಿಸಿದರು. ದೇಶದ ಆರೋಗ್ಯ ರಕ್ಷಣೆಯಲ್ಲಿ ವೈದ್ಯರ ಕೊಡುಗೆ ಅಪಾರವಾಗಿದ್ದು, ಅವರು ಸದಾ ಉತ್ತಮ ಆರೋಗ್ಯ, ಸುಖ-ಸಮೃದ್ಧಿ ಮತ್ತು ನಿರಂತರ ಯಶಸ್ಸು ಹೊಂದಿರಲಿ ಎಂದು ಶುಭ ಹಾರೈಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.