ಅಸ್ಸಾಂನಲ್ಲಿ ಅತ್ಯಾಧುನಿಕ ಕ್ಯಾನ್ಸರ್ ಘಟಕ ಆರಂಭ; ಈಶಾನ್ಯ ಭಾರತಕ್ಕೆ ಮಹತ್ವದ ಆರೋಗ್ಯ ಸೌಲಭ್ಯ
ನವದೆಹಲಿ, 01 ಜುಲೈ (ಹಿ.ಸ.): ಆ್ಯಂಕರ್: ಅಸ್ಸಾಂನ ಗುವಾಹಟಿಯಲ್ಲಿರುವ ಡಾ. ಭುವನೇಶ್ವರ್ ಬರೂವಾ ಕ್ಯಾನ್ಸರ್ ಸಂಸ್ಥೆ (ಬಿಬಿಸಿಐ)ಯಲ್ಲಿ ಶೀಘ್ರದಲ್ಲೇ 292 ಹಾಸಿಗೆಗಳ ಅತ್ಯಾಧುನಿಕ ಮಕ್ಕಳ ಹಾಗೂ ವಯಸ್ಕರ ಹೀಮಾಟೋ-ಲಿಂಫಾಯ್ಡ್ ಕ್ಯಾನ್ಸರ್ ಘಟಕ ಆರಂಭವಾಗಲಿದ್ದು, ಇದು ಈಶಾನ್ಯ ಭಾರತದ ಸಾವಿರಾರು ಕ್ಯಾನ್ಸರ
ಬಿಆರ್ ಸಿ ಐ ಕೇಂದ್ರ


ನವದೆಹಲಿ, 01 ಜುಲೈ (ಹಿ.ಸ.):

ಆ್ಯಂಕರ್:

ಅಸ್ಸಾಂನ ಗುವಾಹಟಿಯಲ್ಲಿರುವ ಡಾ. ಭುವನೇಶ್ವರ್ ಬರೂವಾ ಕ್ಯಾನ್ಸರ್ ಸಂಸ್ಥೆ (ಬಿಬಿಸಿಐ)ಯಲ್ಲಿ ಶೀಘ್ರದಲ್ಲೇ 292 ಹಾಸಿಗೆಗಳ ಅತ್ಯಾಧುನಿಕ ಮಕ್ಕಳ ಹಾಗೂ ವಯಸ್ಕರ ಹೀಮಾಟೋ-ಲಿಂಫಾಯ್ಡ್ ಕ್ಯಾನ್ಸರ್ ಘಟಕ ಆರಂಭವಾಗಲಿದ್ದು, ಇದು ಈಶಾನ್ಯ ಭಾರತದ ಸಾವಿರಾರು ಕ್ಯಾನ್ಸರ್ ರೋಗಿಗಳಿಗೆ ಜೀವದಾಯಕ ಸೌಲಭ್ಯವಾಗಲಿದೆ. ಇದರಿಂದ ಇನ್ನು ಮುಂದೆ ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್, ಅತ್ಯಾಧುನಿಕ ಕೀಮೋಥೆರಪಿ, ಮಕ್ಕಳ ಕ್ಯಾನ್ಸರ್ ಚಿಕಿತ್ಸೆ ಹಾಗೂ ಸುಧಾರಿತ ತೀವ್ರ ನಿಗಾ ಘಟಕ (ಐಸಿಯು) ಸೇರಿದಂತೆ ವಿಶ್ವಮಟ್ಟದ ಚಿಕಿತ್ಸೆಗಾಗಿ ದೆಹಲಿ, ಮುಂಬೈ ಅಥವಾ ವೆಲ್ಲೂರಿಗೆ ತೆರಳುವ ಅನಿವಾರ್ಯತೆ ಬಹುತೇಕ ಕಡಿಮೆಯಾಗಲಿದೆ.

ಈ ಯೋಜನೆಯನ್ನು ಪ್ರಧಾನಮಂತ್ರಿ ಡೆವಲಪ್‌ಮೆಂಟ್ ಇನಿಶಿಯೇಟಿವ್ ಫಾರ್ ನಾರ್ತ್ ಈಸ್ಟ್ (ಪಿಎಂ-ಡಿವೈನ್) ಯೋಜನೆಯಡಿ ಈಶಾನ್ಯ ಪ್ರದೇಶ ಅಭಿವೃದ್ಧಿ ಸಚಿವಾಲಯದ ಸಹಯೋಗದಲ್ಲಿ ನಿರ್ಮಿಸಲಾಗುತ್ತಿದೆ. ಕಾಮಗಾರಿ ಅಂತಿಮ ಹಂತ ತಲುಪಿದ್ದು, ಈಗಾಗಲೇ 78.90 ಶೇಕಡಾ ಭೌತಿಕ ಪ್ರಗತಿ ಸಾಧಿಸಲಾಗಿದೆ. ಅಂತಿಮ ಒಳಾಂಗಣ ಹಾಗೂ ಪೂರ್ಣಗೊಳಿಸುವ ಕಾಮಗಾರಿಗಳು ನಡೆಯುತ್ತಿವೆ.

ಯೋಜನೆಗೆ 2023ರ ಮೇ 31ರಂದು ಕಾರ್ಯಾದೇಶ ನೀಡಲಾಗಿದ್ದು, ಈ ವರ್ಷದ ಜೂನ್ ತಿಂಗಳವರೆಗೆ 33.91 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಆಸ್ಪತ್ರೆ ಆಡಳಿತವು ನಿಗದಿತ ಅವಧಿಯೊಳಗೆ ಈ ಘಟಕವನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸುವ ಗುರಿ ಹೊಂದಿದೆ.

ಬಿಬಿಸಿಐಯ ಶಸ್ತ್ರಚಿಕಿತ್ಸಾ ಆಂಕಾಲಜಿ ವಿಭಾಗದ ಪ್ರಾಧ್ಯಾಪಕರೂ, ಆಡಳಿತ ನಿರ್ದೇಶಕರೂ ಆದ ಡಾ. ಬಿಭೂತಿ ಭೂಷಣ್ ಬೊರಠಾಕುರ್ ಅವರು ಈ ಯೋಜನೆ ಕುರಿತು ಮಾತನಾಡಿ, ಈಶಾನ್ಯ ಭಾರತದಲ್ಲಿ ಕ್ಯಾನ್ಸರ್ ಚಿಕಿತ್ಸೆಯ ಕ್ಷೇತ್ರದಲ್ಲಿ ಇದು ಮಹತ್ವದ ಬದಲಾವಣೆಗೆ ಕಾರಣವಾಗಲಿದೆ ಎಂದು ಹೇಳಿದ್ದಾರೆ.

ಹೊಸ ಘಟಕದಲ್ಲಿ ಮಕ್ಕಳ ಹಾಗೂ ವಯಸ್ಕರ ರಕ್ತ ಕ್ಯಾನ್ಸರ್‌ಗೆ ಪ್ರತ್ಯೇಕ ಚಿಕಿತ್ಸಾ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್ ಆರಂಭವಾದ ನಂತರ ಚಿಕಿತ್ಸೆಗಾಗಿ ಬೇರೆ ರಾಜ್ಯಗಳಿಗೆ ತೆರಳುವ ಅಗತ್ಯ ಬಹಳಷ್ಟು ಕಡಿಮೆಯಾಗಲಿದೆ. ಮುಂದಿನ ಹಂತಗಳಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆ, ಮಾಲಿಕ್ಯುಲರ್ ಡಯಾಗ್ನೋಸ್ಟಿಕ್ಸ್ ಸೇರಿದಂತೆ ಹಲವು ಅತ್ಯಾಧುನಿಕ ತಂತ್ರಜ್ಞಾನಗಳನ್ನೂ ಅಳವಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್ ಪ್ರಮುಖ ಆಕರ್ಷಣೆ

ಈ ಯೋಜನೆಯ ಪ್ರಮುಖ ವೈಶಿಷ್ಟ್ಯವೆಂದರೆ ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್ ಸೌಲಭ್ಯ. ರಕ್ತ ಕ್ಯಾನ್ಸರ್ ಹಾಗೂ ಕೆಲವು ಗಂಭೀರ ರಕ್ತ ಸಂಬಂಧಿತ ಕಾಯಿಲೆಗಳ ಚಿಕಿತ್ಸೆಗೆ ದೇಶದ ಕೆಲವೇ ಆಸ್ಪತ್ರೆಗಳಲ್ಲಿ ಈ ಸೌಲಭ್ಯ ಲಭ್ಯವಿದೆ. ಈಶಾನ್ಯ ಭಾರತದಲ್ಲೇ ಈ ವ್ಯವಸ್ಥೆ ಆರಂಭವಾದರೆ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯಲಿದ್ದು, ಚಿಕಿತ್ಸೆಯ ಯಶಸ್ಸಿನ ಪ್ರಮಾಣವೂ ಹೆಚ್ಚುವ ನಿರೀಕ್ಷೆಯಿದೆ.

ಕ್ಯಾನ್ಸರ್ ಸಂಶೋಧನೆಯಲ್ಲೂ ಮುಂಚೂಣಿ

ಬಿಬಿಸಿಐ ಈಗಾಗಲೇ ಹಲವು ಸಾಧನೆಗಳನ್ನು ದಾಖಲಿಸಿದೆ. ದೇಶದಲ್ಲೇ ಮೊದಲ ಬಾರಿಗೆ ಸಮುದಾಯ ಮಟ್ಟದಲ್ಲಿ ಹೊಟ್ಟೆಯ ಕ್ಯಾನ್ಸರ್ ತಪಾಸಣಾ ಕಾರ್ಯಕ್ರಮವನ್ನು ಆರಂಭಿಸಿದ ಹೆಗ್ಗಳಿಕೆ ಈ ಸಂಸ್ಥೆಗೆ ಸಲ್ಲುತ್ತದೆ. ಕ್ಯಾನ್ಸರ್ ಜಾಗೃತಿ, ಸಂಶೋಧನೆ ಹಾಗೂ ಆರಂಭಿಕ ಹಂತದಲ್ಲೇ ರೋಗ ಪತ್ತೆಹಚ್ಚುವ ಕಾರ್ಯಕ್ರಮಗಳಲ್ಲೂ ಸಂಸ್ಥೆ ಪ್ರಮುಖ ಪಾತ್ರ ವಹಿಸುತ್ತಿದೆ.

ಇದಲ್ಲದೆ, ಲೈಫ್-ಪ್ರೋಟಾನ್ ಥೆರಪಿ ಸೇರಿದಂತೆ ಹಲವು ಅತ್ಯಾಧುನಿಕ ಚಿಕಿತ್ಸಾ ತಂತ್ರಜ್ಞಾನಗಳನ್ನು ಹಂತಹಂತವಾಗಿ ಅಳವಡಿಸಲಾಗುತ್ತಿದೆ. ಕ್ಯಾನ್ಸರ್‌ನಿಂದಾಗುವ ಸಾವಿನ ಪ್ರಮಾಣ ಕಡಿಮೆ ಮಾಡಲು ಆರಂಭಿಕ ಹಂತದಲ್ಲೇ ರೋಗ ಪತ್ತೆ ಮತ್ತು ತ್ವರಿತ ಚಿಕಿತ್ಸೆ ಅತ್ಯಂತ ಪರಿಣಾಮಕಾರಿ ಎಂಬುದು ತಜ್ಞರ ಅಭಿಪ್ರಾಯ.

300 ಕೋಟಿ ರೂಪಾಯಿ ವೆಚ್ಚದ ಯೋಜನೆ

ಈ ಯೋಜನೆಯ ಒಟ್ಟು ಅಂದಾಜು ವೆಚ್ಚ 300.16 ಕೋಟಿ ರೂಪಾಯಿ. ಇದರಡಿ ಏಳು ಮಹಡಿಗಳ 292 ಹಾಸಿಗೆಗಳ ಆಸ್ಪತ್ರೆ ನಿರ್ಮಾಣವಾಗುತ್ತಿದ್ದು, ಸುಮಾರು 19,675 ಚದರ ಮೀಟರ್ ವಿಸ್ತೀರ್ಣ ಹೊಂದಿರಲಿದೆ.

ಇದರಲ್ಲಿ ಹೊರರೋಗಿ ವಿಭಾಗ (ಒಪಿಡಿ), ಒಳರೋಗಿ ವಿಭಾಗ (ಐಪಿಡಿ), ಐಸಿಯು, ಸ್ಟೆಪ್-ಡೌನ್ ಐಸಿಯು, ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್ ಘಟಕ, ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಕೊಠಡಿಗಳು, ಸುಧಾರಿತ ಪ್ರಯೋಗಾಲಯಗಳು ಹಾಗೂ ರೋಗನಿರ್ಣಯ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ.

ಆಸ್ಪತ್ರೆಯಲ್ಲಿ ದಾಖಲಾಗುವ ರೋಗಿಗಳು ಹಾಗೂ ಅವರ ಕುಟುಂಬ ಸದಸ್ಯರ ಅನುಕೂಲಕ್ಕಾಗಿ ವಿವಿಧ ಸಹಾಯಕ ವೈದ್ಯಕೀಯ ಸೌಲಭ್ಯಗಳನ್ನೂ ಅಭಿವೃದ್ಧಿಪಡಿಸಲಾಗುತ್ತಿದೆ.

ವೈದ್ಯಕೀಯ ಸಿಬ್ಬಂದಿಗೆ ಕೌಶಲ್ಯಾಭಿವೃದ್ಧಿ ಕೇಂದ್ರ

ಆಸ್ಪತ್ರೆ ಆವರಣದಲ್ಲೇ ಅತ್ಯಾಧುನಿಕ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ ನಿರ್ಮಿಸಲಾಗುತ್ತಿದೆ. ಇಲ್ಲಿ ಆಂಕಾಲಜಿ ಸೇರಿದಂತೆ ಸಂಬಂಧಿತ ಕ್ಷೇತ್ರಗಳಲ್ಲಿ ವೈದ್ಯರು, ದಾದಿಯರು, ತಂತ್ರಜ್ಞರು ಹಾಗೂ ಆರೋಗ್ಯ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗುತ್ತದೆ.

ಈಶಾನ್ಯ ಭಾರತದ ಅತಿದೊಡ್ಡ ಕ್ಯಾನ್ಸರ್ ಆಸ್ಪತ್ರೆ

ಗುವಾಹಟಿಯ ಬಿಬಿಸಿಐ ಪ್ರಸ್ತುತ ಈಶಾನ್ಯ ಭಾರತದ ಅತಿದೊಡ್ಡ ಕ್ಯಾನ್ಸರ್ ಚಿಕಿತ್ಸಾ ಕೇಂದ್ರವಾಗಿದೆ. ಪರಮಾಣು ಶಕ್ತಿ ಇಲಾಖೆಯ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆ ಮುಂಬೈನ ಟಾಟಾ ಮೆಮೋರಿಯಲ್ ಸೆಂಟರ್ ಘಟಕವಾಗಿ ಸೇವೆ ಸಲ್ಲಿಸುತ್ತಿದೆ.

ಪ್ರಸ್ತುತ ವರ್ಷಕ್ಕೆ ಸುಮಾರು 40 ಸಾವಿರದಿಂದ 45 ಸಾವಿರ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರತಿವರ್ಷ ಸರಾಸರಿ 12 ಸಾವಿರ ಹೊಸ ಕ್ಯಾನ್ಸರ್ ಪ್ರಕರಣಗಳು ಇಲ್ಲಿ ದಾಖಲಾಗುತ್ತಿವೆ. ಈ ಕಾರಣದಿಂದಲೇ ಬಿಬಿಸಿಐಯನ್ನು ಈಶಾನ್ಯ ಭಾರತದ ಕ್ಯಾನ್ಸರ್ ಚಿಕಿತ್ಸೆಯ ಬೆನ್ನೆಲುಬು ಎಂದು ಪರಿಗಣಿಸಲಾಗಿದೆ.

ಈಶಾನ್ಯ ಭಾರತದಲ್ಲಿ ಕ್ಯಾನ್ಸರ್ ಪ್ರಮಾಣ ಆತಂಕಕಾರಿ

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಸರಾಸರಿ 90ರಿಂದ 120 ಕ್ಯಾನ್ಸರ್ ಪ್ರಕರಣಗಳು ಕಂಡುಬರುತ್ತವೆ. ಆದರೆ ಈಶಾನ್ಯ ರಾಜ್ಯಗಳಲ್ಲಿ ಈ ಪ್ರಮಾಣ 220ರಿಂದ 270 ಪ್ರಕರಣಗಳವರೆಗೆ ಏರಿಕೆಯಾಗಿದೆ.

ಪ್ರತಿ ವರ್ಷ ಈಶಾನ್ಯ ಭಾರತದಲ್ಲಿ 45 ಸಾವಿರಕ್ಕೂ ಹೆಚ್ಚು ಹೊಸ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿವೆ. ತಂಬಾಕು ಬಳಕೆ, ಅಡಿಕೆ ಸೇವನೆ, ಆಹಾರ ಪದ್ಧತಿ ಹಾಗೂ ಭೌಗೋಳಿಕ-ಸಾಮಾಜಿಕ ಕಾರಣಗಳಿಂದ ಈ ಪ್ರದೇಶದಲ್ಲಿ ಕ್ಯಾನ್ಸರ್ ಪ್ರಮಾಣ ಹೆಚ್ಚಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಐಸಿಎಂಆರ್ ಮಾಹಿತಿಯಂತೆ, ವಿಶೇಷ ಕ್ಯಾನ್ಸರ್ ಚಿಕಿತ್ಸೆಗೆ ಸಿಕ್ಕಿಂನ ಶೇ.95, ನಾಗಾಲ್ಯಾಂಡ್‌ನ ಶೇ.58, ಮಣಿಪುರದ ಶೇ.16 ಹಾಗೂ ಮೆಘಾಲಯದ ಶೇ.13 ರೋಗಿಗಳು ಇದುವರೆಗೆ ಈಶಾನ್ಯ ಪ್ರದೇಶದ ಹೊರಗಿನ ಆಸ್ಪತ್ರೆಗಳನ್ನು ಅವಲಂಬಿಸುತ್ತಿದ್ದರು. ರಕ್ತ ಕ್ಯಾನ್ಸರ್ ಹಾಗೂ ಮಕ್ಕಳ ಕ್ಯಾನ್ಸರ್ ಪ್ರಕರಣಗಳಲ್ಲಿ ಈ ಅವಲಂಬನೆ ಇನ್ನೂ ಹೆಚ್ಚಾಗಿದೆ.

ಪಿಎಂ-ಡಿವೈನ್ ಯೋಜನೆಯ ಪ್ರಮುಖ ಆರೋಗ್ಯ ಯೋಜನೆ

ಕೇಂದ್ರ ಸರ್ಕಾರವು 2022-23ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದ 'ಪ್ರಧಾನಮಂತ್ರಿ ಅಭಿವೃದ್ಧಿ ಉಪಕ್ರಮ–ಈಶಾನ್ಯ (ಪಿಎಂ-ಡಿವೈನ್)' ಯೋಜನೆಯಡಿ ಈ ಆಸ್ಪತ್ರೆ ಅಭಿವೃದ್ಧಿಯಾಗುತ್ತಿದೆ. ಆರಂಭಿಕ ಹಂತದಲ್ಲಿ ಈ ಯೋಜನೆಗೆ 1,500 ಕೋಟಿ ರೂಪಾಯಿ ಮೀಸಲಿಡಲಾಗಿತ್ತು.

ಈ ಯೋಜನೆಯನ್ನು ಈಶಾನ್ಯ ಪ್ರದೇಶ ಅಭಿವೃದ್ಧಿ ಸಚಿವಾಲಯ ಹಾಗೂ ನಾರ್ತ್ ಈಸ್ಟರ್ನ್ ಕೌನ್ಸಿಲ್ ಜಂಟಿಯಾಗಿ ಅನುಷ್ಠಾನಗೊಳಿಸುತ್ತಿವೆ. ಜನರಿಗೆ ನೇರ ಪ್ರಯೋಜನ ತಲುಪಿಸುವ ಮೂಲಸೌಕರ್ಯ ಯೋಜನೆಗಳಿಗೆ ಉತ್ತೇಜನ ನೀಡುವುದು ಇದರ ಉದ್ದೇಶವಾಗಿದ್ದು, ಗುವಾಹಟಿಯ ಬಿಬಿಸಿಐ ಅತ್ಯಾಧುನಿಕ ಕ್ಯಾನ್ಸರ್ ಆಸ್ಪತ್ರೆ ಯೋಜನೆ ಈ ಯೋಜನೆಯ ಅತ್ಯಂತ ಮಹತ್ವದ ಆರೋಗ್ಯ ಯೋಜನೆಗಳಲ್ಲಿ ಒಂದಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande